ಅಂಬೇಡ್ಕರ್ ಬಗ್ಗೆ ಗಾಂಧೀಜಿಯವರಲ್ಲಿ ತಪ್ಪು ಕಲ್ಪನೆ ಇತ್ತು: ಪ್ರೊ.ರವಿವರ್ಮಕುಮಾರ್
ಬೆಂಗಳೂರು, ಎ.10: ದಲಿತ ಮತ್ತು ಮಹಿಳೆಯರ ಸಮಾನತೆಯ ಪರವಾಗಿ ಧ್ವನಿ ಎತ್ತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮುಖಾಮುಖಿ ಭೇಟಿಯಾಗುವ ಮುನ್ನ ಗಾಂಧೀಜಿಯವರಲ್ಲಿ ಅಂಬೇಡ್ಕರ್ ಬಗ್ಗೆ ತಪ್ಪು ಕಲ್ಪನೆ ಇತ್ತು. ಇವನ್ಯಾರೋ ತಲೆಕೆಟ್ಟ ಬ್ರಾಹ್ಮಣ ಇರಬೇಕು ಎಂದು ಗಾಂಧೀಜಿ ಅಂದುಕೊಂಡಿದ್ದರು ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
ಸೋಮವಾರ ನಗರದ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವ ವಿಷಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶದಲ್ಲಿ ಶಿಕ್ಷಣ ಪಡೆದು ದೇಶಕ್ಕೆ ಹಿಂದಿರುಗಿದ ಅಂಬೇಡ್ಕರ್ ಯಾರೆಂದು ಗಾಂಧೀಜಿಯವರಿಗೆ ಗೊತ್ತಿರಲಿಲ್ಲ. ದಲಿತ ಮತ್ತು ಮಹಿಳೆಯರ ಸಮಾನತೆಯ ಪರವಾಗಿ ಧ್ವನಿ ಎತ್ತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇವನ್ಯಾರೋ ತಲೆಕೆಟ್ಟ ಬ್ರಾಹ್ಮಣನಿರಬೇಕು ಎಂದು ಗಾಂಧೀಜಿ ಅಂದುಕೊಂಡಿದ್ದರು ಎಂದವರು ಹೇಳಿದರು.
ಮೊದಲನೆ ದುಂಡು ಮೇಜಿನ ಸಭೆಯಲ್ಲಿ ಅಂಬೇಡ್ಕರ್ ಐದು ದಿನಗಳ ಕಾಲ ವಿಷಯ ಮಂಡಿಸಿದ ನೈಪುಣ್ಯತೆಗೆ ಇಡೀ ವಿಶ್ವವೇ ಮೆಚ್ಚಿ ತಲೆದೂಗಿತ್ತು. ಬ್ರಿಟಿಷ್ ಸರಕಾರವೂ ಅವರ ವಾದವನ್ನು ಮೆಚ್ಚಿಕೊಂಡಿತ್ತು. ಅಲ್ಲಿಯವರೆಗೂ ಅಂಬೇಡ್ಕರ್ ಯಾರೆಂದು ಗಾಂಧೀಜಿಯವರಿಗೆ ಗೊತ್ತಿರಲಿಲ್ಲ. ಮೊದಲನೆ ದುಂಡುಮೇಜಿನ ಸಭೆಯ ಬಳಿಕ ಅಂಬೇಡ್ಕರ್ ಅವರನ್ನು ಭೇಟಿ ಮಾಡುವಂತೆ ಗಾಂಧೀಜಿಯವರು ಮನವಿ ಮಾಡಿದ್ದರು. ಇವರಿಬ್ಬರ ಮೊದಲ ಭೇಟಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಅಂಬೇಡ್ಕರ್ ಅವರನ್ನು ಗಾಂಧೀಜಿಯವರು ಪರಿಪರಿಯಾಗಿ ಕೇಳಿಕೊಂಡಿದ್ದರು. ಆದರೆ ಗಾಂಧೀಜಿಯವರ ಮನವಿಯನ್ನು ತಿರಸ್ಕರಿಸಿ,ದೇಶದಲ್ಲಿ ಸೋದರತೆ ಸಮಾನತೆ ಸ್ಥಾಪಿಸುವುದೇ ನನ್ನ ಮೊದಲ ಆದ್ಯತೆ ಎಂದು ಹೇಳುವ ಮೂಲಕ ಅಂಬೇಡ್ಕರ್ ಸ್ವಾಭಿಮಾನವನ್ನು ಮೆರೆದಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್‌ಈಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜರೆಡ್ಡಿ ಉಪಪ್ರಾಂಶುಪಾಲ ತಿಪ್ಪೇಗೌಡ, ಉಪನ್ಯಾಸಕ ರವಿಕುಮಾರ್ ಬಾಗಿ ಮೊದಲಾದವರು ಉಪಸ್ಥಿತರಿದ್ದರು.