ಪಾಸ್ಪೋರ್ಟ್,ವೀಸಾ ಇಲ್ಲದೆ ಯುಎಇಗೆ ಬಂದು 48ವರ್ಷ ಅಲ್ಲೇ ಕಳೆದರು!

Update: 2017-04-11 10:49 GMT

ದುಬೈ,ಎ.11: ಪಾಸ್ಪೋರ್ಟ್,ವೀಸಾ ಇಲ್ಲದೇ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ಕ್ಕೆ ವಲಸೆ ಬಂದು 48 ವರ್ಷಗಳನ್ನು ಇಲ್ಲಿಯೇ ಕಳೆದಿದ್ದ ಭಾರತೀಯ ಮಡವಿಲ್ ಪೈಥಲ್ ಸೇತುಮಾಧವನ್ (68) ಅವರು ಕೊನೆಗೂ ಜೀವಿತಾವಧಿಯ ಅನುಭವಗಳು ಮತ್ತು ಗೆಳೆತನಗಳ ನೆನಪಗಳನ್ನು ಹೊತ್ತು ತಾಯ್ನೆಡಿಗೆ ಮರಳುತ್ತಿದ್ದಾರೆ.

ನನ್ನ ಬದುಕಿನ ಹೆಚ್ಚಿನ ಭಾಗವನ್ನು ಇಲ್ಲ್ಲಿಯೇ ಕಳೆದಿದ್ದೇನೆ, ದುಬೈ ನನ್ನ ಭಾಗವಾಗಿದೆ ಎಂದು 1969ರಲ್ಲಿ ಸಾಹಸಮಯ ಪಯಣದಲ್ಲಿ ಪಾಸ್ಪೋರ್ಟ್,ವೀಸಾ ಇಲ್ಲದೇ ತಲಶ್ಶೇರಿಯ ತನ್ನ ಹತ್ತು ಸ್ನೇಹಿತರೊಂದಿಗೆ ಮುಂಬೈನಲ್ಲಿ ನೌಕೆಯನ್ನು ಹತ್ತಿ ಇಲ್ಲಿಯ ಖೋರ್ ಫಕ್ಕಾನ್ ದ್ವೀಪಕ್ಕೆ ಬಂದಿಳಿದಿದ್ದ ಸೇತುಮಾಧವನ್ ಸ್ಥಳೀಯ ಸುದ್ದಿಗಾರರಿಗೆ ತಿಳಿಸಿದರು.

 1971ರವರೆಗೂ ಹೋಟೆಲ್ಲೊಂದರಲ್ಲಿ ಚಿಲ್ಲರೆ ಕೆಲಸಗಳನ್ನು ಮಾಡಿಕೊಂಡಿದ್ದ ಸೇತುಮಾಧವನ್‌ಗೆ ಅದೇ ವರ್ಷ ಇಲ್ಲಿಯ ನ್ಯೂ ಇಂಡಿಯಾ ಇನ್ಶೂರನ್ಸ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿತ್ತು. ಸುಮಾರು ಐದು ವರ್ಷಗಳ ಬಳಿಕ ಕ್ಲೇಮ್ಸ್ ಮ್ಯಾನೇಜರ್ ಆಗಿ ಬೇರೊಂದು ಇನ್ಶೂರನ್ಸ್ ಕಂಪನಿಗೆ ಸೇರಿದ್ದರು. 1980ರಲ್ಲಿ ಪಾನ್ ಫ್ರೆಷ್ ಇಂಟರ್‌ನ್ಯಾಷನಲ್ ಟ್ರೇಡಿಂಗ್‌ನ್ನು ಸೇರಿದ್ದ ಅವರು ಅಲ್ಲಿ ಆಡಳಿತಾಧಿಕಾರಿಯಾಗಿ 37 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

1974ರಲ್ಲಿ ತನ್ನ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದ ಅವರು ಒಂದು ಕಾಲದಲ್ಲಿ ‘ದುಬೈ 39’ ನೋಂದಣಿ ಸಂಖ್ಯೆಯ ಬೈಕ್‌ನ ಹೆಮ್ಮೆಯ ಒಡೆಯನಾಗಿದ್ದರು. 1976ರಲ್ಲಿ ಭಾರತದಿಂದ ಪತ್ನಿಯನ್ನು ದುಬೈಗೆ ಕರೆಸಿಕೊಂಡಿದ್ದ ಸೇತುಮಾಧವನ್‌ರ ಮಕ್ಕಳು ಅಲ್ಲಿಯೇ ಬೆಳೆದು ಈಗ ಅಮೆರಿಕ ಮತ್ತು ಕೆನಡಾದಲ್ಲಿ ಉತ್ತಮ ಉದ್ಯೋಗಗಳಲ್ಲಿದ್ದಾರೆ.

ಈಗ ಅಮೆರಿಕದ ವೀಸಾ ಹೊಂದಿರುವ ಸೇತುಮಾಧವನ್ ಭಾರತೀಯರಿಗೆ ಆಗಮನದ ವೇಳೆ ವೀಸಾ ಸೌಲಭ್ಯವನ್ನು ಒದಗಿಸಲು ಯುಎಇ ಕಳೆದ ತಿಂಗಳು ಕೈಗೊಂಡಿರುವ ನಿರ್ಧಾರದಿಂದ ಪುಳಕಿತರಾಗಿದ್ದಾರೆ. ಅವರು ಪುತ್ರಿಯೊಂದಿಗೆ ಅಮೆರಿಕದಲ್ಲಿ ವಾಸವಾಗಿಲು ನಿರ್ಧರಿಸಿದ್ದಾರೆ. ಅದಕ್ಕೂ ಮುನ್ನ ಭಾರತಕ್ಕೆ ಮರಳಲಿದ್ದಾರೆ.

ದುಬೈನಲ್ಲಿ 50 ವರ್ಷಗಳ ವಾಸ ಪೂರ್ಣಗೊಳಿಸಲು ತಾನು ಬಯಸಿದ್ದೆ. ಆದರೆ ತನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗಾಗಿ ಈಗ ಇಲ್ಲಿಂದ ಹೊರಡಲೇಬೇಕಿದೆ . ಸರಕಾರದ ಹೊಸ ನಿರ್ಧಾರದಿಂದಾಗಿ ಇಲ್ಲಿಗೆ ಮತ್ತೆ ಬರಲು ವೀಸಾಕ್ಕಾಗಿ ತಾನು ಪರದಾಡ ಬೇಕಿಲ್ಲ. ಅಮೆರಿಕ ಮತ್ತು ಭಾರತದ ನಡುವೆ ಪ್ರಯಾಣಿಸುವಾಗ ದುಬೈನಲ್ಲಿ ಇಳಿದು ಹಳೆಯ  ಸ್ನೇಹಿತರನ್ನು ಭೇಟಿಯಾಗುವುದು ತನ್ನ ಯೋಜನೆಯಾಗಿದೆ ಎಂದರು.

ಸೇತುಮಾಧವನ್ 1969ರಲ್ಲಿ ದುಬೈಗೆ ಪ್ರಯಾಣ ಕೈಗೊಳ್ಳುವ ಮುನ್ನ ಪಾಸ್ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಅದು ಅವರ ಕೈ ಸೇರಿರಲಿಲ್ಲ. ಯುಎಇ ಆಗ ಟ್ರುಸಿಯಲ್ ಸ್ಟೇಟ್ಸ್ ಎಂದು ಕರೆಯಲ್ಪಡುತ್ತಿದ್ದು, 1971ರಲ್ಲಿ ಹಡಗಿನ ಮೂಲಕ ಭಾರತಕ್ಕೆ ತೆರಳಿ ಚೆನ್ನೈನಲ್ಲಿರುವ ಬ್ರಿಟಿಷ್ ರಾಯಭಾರಿ ಕಚೇರಿಯ ಮುದ್ರೆಯೊಡನೆ ಅದರ ವೀಸಾ ಪಡೆದಿದ್ದರು.

1973ರಲ್ಲಿ ದುಬೈನಿಂದ ಭಾರತಕ್ಕೆ ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸಿದಾಗ ದುಬೈ ವಿಮಾನ ನಿಲ್ದಾಣ ಕೇವಲ ಒಂದು ಹಾಲ್ ಆಗಿತ್ತು. ಅದೀಗ ವಿಶ್ವದಲ್ಲಿಯ ಅತ್ಯಂತ ದೊಡ್ಡ ಮತ್ತು ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಸೇತುಮಾಧವನ್ ಹೇಳಿದರು.

 ಸೇತುಮಾಧವನ್ ಜೊತೆ ಅಂದು ದುಬೈ ಸೇರಿದ್ದ ಸ್ನೇಹಿತರ ಪೈಕಿ ನಾಲ್ವರು ತೀರಿಕೊಂಡಿದ್ದಾರೆ. ನಾಲ್ವರು ಭಾರತಕ್ಕೆ ಮರಳಿದ್ದಾರೆ. ಒಬ್ಬರು ಆಗಾಗ್ಗೆ ವ್ಯವಹಾರ ನಿಮಿತ್ತ ದುಬೈಗೆ ಭೇಟಿ ನೀಡುತ್ತಿರುತ್ತಾರೆ. ಈ ತಂಡದ ಪೈಕಿ ಇಷ್ಟೊಂದು ಸುದೀರ್ಘ ಕಾಲ ಇಲ್ಲಿ ವಾಸವಾಗಿದ್ದು ಸೇತುಮಾಧವನ್ ಮಾತ್ರ. ತಾನು ಕಲಿತಿದ್ದ ಕೊಝಿಕೊಡೆಯ ಗುರುವಾಯೂರಪ್ಪನ್ ಕಾಲೇಜಿನಲ್ಲಿ 10 ವರ್ಷಗಳ ಹಿಂದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆ ಆರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News