ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಆರಂಭ: ರಮೇಶ್‌ಕುಮಾರ್

Update: 2017-04-11 13:15 GMT

ಬೆಂಗಳೂರು, ಎ.11: ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಹೆಲ್ತ್ ಕೇರ್ ಶೃಂಗಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವೈದ್ಯಕೀಯ ಕಾಲೇಜುಗಳಿಲ್ಲದ ರಾಜ್ಯದ ಐದು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲು ಸರಕಾರ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಆಯುಷ್ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇ-ಆಸ್ಪತ್ರೆ ಯೋಜನೆಯನ್ನೂ ತಾಲೂಕು ಕೇಂದ್ರಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಕಡೆ ಹೊಸದಾಗಿ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗಿದೆ. 35 ಸಾವಿರ ಜನಸಂಖ್ಯೆಯುಳ್ಳ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ವೈದ್ಯರ ಕೊರತೆ: ದೇಶದಲ್ಲಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಿಂದ ವಾರ್ಷಿಕ 6 ಸಾವಿರ ವೈದ್ಯರು ವೈದ್ಯಕೀಯ ಪದವಿ ಪಡೆದು ಹೊರ ಬರುತ್ತಿದ್ದಾರೆ. ಆದರೂ ರಾಜ್ಯದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರಿ ಮತ್ತು ಹಳ್ಳಿಯಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರು ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ. ಪದವಿ ಪಡೆದ ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಲು ಮುಂದಾಗಬೇಕು. ವೈದ್ಯರು ತಮ್ಮ ವೃತ್ತಿಯ ಸಾಮಾಜಿಕ ಕಳಕಳಿ ಪ್ರದರ್ಶಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕ್ಷೇಮಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜೇಶ್ವರರಾವ್ ಮಾತನಾಡಿ, ಆರೋಗ್ಯ ಸುಧಾರಣೆ, ಆರೋಗ್ಯ ಕ್ಷೇತ್ರದಲ್ಲಿನ ತಂತ್ರಜ್ಞಾನ ಬಳಕೆಗೆ ಉತ್ತಮ ಜ್ಞಾನವುಳ್ಳ ಸಿಬ್ಬಂದಿ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರ ಆರೋಗ್ಯ ಸುಧಾರಣೆಗೆ ಕೇಂದ್ರ ಸರಕಾರ ಹೆಚ್ಚು ಗಮನಹರಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ವಿಮಾ ಕಂಪನಿ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಈ ವೇಳೆ ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್, ನ್ಯೂ ನ್ಯಾಷನಲ್ ಹೆಲ್ತ್ ಇನ್ಸೂರೆನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಅಲಮೇಲು, ನ್ಯಾಷನಲ್ ಹೆಲ್ತ್ ಮಿಷನ್‌ನ ನಿರ್ದೇಶಕ ಡಾ. ರತನ್ ಕೇಲ್ಕರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News