×
Ad

ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿಯ ಹತ್ಯೆಗೈದ ವಿವಾಹಿತ

Update: 2017-04-11 20:21 IST

ಬೆಂಗಳೂರು, ಎ.11: ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ವಿವಾಹಿತನೊಬ್ಬ ಇರಿದು ಹತ್ಯೆಗೈದಿದ್ದಲ್ಲದೆ, ತಡೆಯಲು ಬಂದ ಮಹಿಳೆಗೂ ಇರಿದು ಪರಾರಿಯಾಗಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಮೈಸೂರು ರಸ್ತೆಯ ದೀಪಾಂಜಲಿ ನಗರದ 3ನೆ ಕ್ರಾಸ್‌ನ ಯುವತಿ ಶೋಭಾ(27) ಮೃತಪಟ್ಟಿದ್ದು, ಗಿರೀಶ್(35) ಎಂಬಾತ ಈ ಕೃತ್ಯವೆಸಗಿ ಪರಾರಿಯಾಗಿದ್ದಾನೆ. ವಿಜಯಮ್ಮ ಎಂಬಾಕೆಗೂ ಚಾಕುವಿನಿಂದ ಇರಿದಿದ್ದು, ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನೆ ವಿವರ: ತುಮಕೂರು ಮೂಲದ ಗಿರೀಶ್ ಯಾನೆ ಗಿರಿ(35) ಮೈಸೂರು ರಸ್ತೆಯ ದೀಪಾಂಜಲಿ ನಗರದ 3ನೆ ಕ್ರಾಸ್‌ನ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಪೈಂಟರ್ ಆಗಿದ್ದ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ, ಒಂದು ವರ್ಷದಿಂದ ತನ್ನ ಪತ್ನಿಗೆ ಟಿಬಿ ಕಾಯಿಲೆ ಇರುವ ಕಾರಣ ಆಕೆಯಿಂದ ದೂರ ಹೋಗಲು ನಿರ್ಧರಿಸಿದ್ದ.
ಬಳಿಕ ಮನೆಯ ಸಮೀಪವಿದ್ದ ಶೋಭಾ ಎಂಬಾಕೆಯನ್ನು ಮೂರು ತಿಂಗಳಿನಿಂದ ಪರಿಚಯ ಮಾಡಿಕೊಂಡಿದ್ದ, ತದನಂತರ "ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ" ಎಂದು ಪದೇ ಪದೇ ಹೇಳುತ್ತಿದ್ದ. ಈ ಬಗ್ಗೆ ಎರಡು ಬಾರಿ ಜಗಳವೂ ನಡೆದಿತ್ತು ಎಂದು ತಿಳಿದುಬಂದಿದೆ.

ಮಂಗಳವಾರ 11:30 ಸುಮಾರಿಗೆ ಮನೆ ಹೊರಭಾಗದಲ್ಲಿ ಶೋಭಾ ಬಟ್ಟೆ ತೊಳೆಯುವಾಗ ಗಿರೀಶ್, "ಈ ವಾರವೇ ಮದುವೆ ಮಾಡಿಕೊಳ್ಳೋಣ ಬಾ" ಎಂದು ಹೇಳಿದ್ದಾನೆ. ಆದರೆ, ಶೋಭಾ ನಿರಾಕರಿಸಿದ್ದಕ್ಕೆ ಜಗಳ ನಡೆದಿದೆ. ಬಳಿಕ ಸ್ವಲ್ಪ ಸಮಯದ ಬಳಿಕ ಪುನಃ ಶೋಭಾ ಮನೆಯೊಳಗೆ ಹೋಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳದ ಶಬ್ದ ಕೇಳಿ ಪಕ್ಕದ ಮನೆಯ ವಿಜಯಮ್ಮ ಎಂಬವರು ಬಂದಿದ್ದು, ಈ ವೇಳೆ ಚಾಕುವಿನಿಂದ ಶೋಭಾ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಅಷ್ಟೇ ಅಲ್ಲದೆ, ತಡೆಯಲು ಬಂದ ವಿಜಯಮ್ಮಗೂ ಚಾಕು ಇರಿದು ಪರಾರಿಯಾಗಿದ್ದಾನೆ.

ಬಳಿಕ ಸ್ಥಳೀಯರು ಕುಸಿದು ಬಿದಿದ್ದ ಶೋಭಾ ಮತ್ತು ವಿಜಯಮ್ಮನನ್ನು ಆಟೊ ಮೂಲಕ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶೋಭಾ ಮೃತಪಟ್ಟಿರುವುದಾಗಿ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News