ಕೊಡಗು ಜಿಲ್ಲೆಯಲ್ಲಿ ಜೀತಪದ್ಧತಿ ಜೀವಂತ: ಕಾಗೋಡು ತಿಮ್ಮಪ್ಪ
ಬೆಂಗಳೂರು, ಎ.11: ಕೊಡಗು ಜಿಲ್ಲೆಯಲ್ಲಿ ಇಂದಿಗೂ ಜೀತಪದ್ಧತಿ ಜೀವಂತವಾಗಿರುವುದು ನಾವೆಲ್ಲ ತಲೆತಗ್ಗಿಸುವ ವಿಚಾರವಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ದಿಡ್ಡಳ್ಳಿಯ 577 ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ದಿಡ್ಡಳ್ಳಿಯ ನಿರಾಶ್ರಿತರ ಪೈಕಿ ಬಹುತೇಕರು ಜೀತದಾಳಾಗಿ ಕೆಲಸ ಮಾಡುತ್ತಿರುವ ಅಂಶ ಇಂದಿನ ಸಭೆಯಲ್ಲಿ ಬೆಳಕಿಗೆ ಬಂದಿದೆ. ಆಧಾರ್, ಬಿಪಿಎಲ್ ಕಾರ್ಡ್ ಸೇರಿದಂತೆ ಯಾವೊಂದು ಸೌಲಭ್ಯವು ಅವರ ಕೈಗೆ ಸಿಗದಂತೆ ಶೋಷಣೆ ಮಾಡಲಾಗುತ್ತಿದೆ. ಎ.17 ಅಥವಾ 18ರಂದು ದಿಡ್ಡಳ್ಳಿಗೆ ಭೇಟಿ ನೀಡುತ್ತಿದ್ದು, ಒಂದು ವಾರ ಅಲ್ಲೆ ಠಿಕಾಣಿ ಹೂಡಿ ಸಮಸ್ಯೆ ಬಗೆಹರಿಸಲು ಶ್ರಮಿಸುವುದಾಗಿ ಅವರು ಹೇಳಿದರು.
ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿ ದಶಕಗಳೆ ಕಳೆದಿವೆ. ಆದರೆ, ಇಂದಿಗೂ ನಮ್ಮ ನಡುವೆ ಆ ಪದ್ಧತಿ ಜೀವಂತವಾಗಿದೆ ಎಂದರೆ ನಾವು ಏನು ಮಾಡುತ್ತಿದ್ದೇವೆ ಎಂಬ ಸಂಶಯ ಮೂಡುತ್ತದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು, ನಾವೆಲ್ಲ ತಲೆ ತಗ್ಗಿಸುವಂತಾಗಿದೆ. ಜೀತ ಪದ್ಧತಿಯೂ ಎಲ್ಲೆಲ್ಲಿ ಇದೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಿ, ಸಂತ್ರಸ್ತರನ್ನು ವಿಮುಕ್ತಗೊಳಿಸಿ, ಸರಕಾರದಿಂದ ಸೌಲಭ್ಯ ಒದಗಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಅದರ ಲಾಭವು ಈ ವರ್ಗದ ಜನರಿಗೂ ಸಿಗಬೇಕಿದೆ. ಕೊಡಗು ಜಿಲ್ಲೆಯಲ್ಲಿ ಇಂದಿಗೂ ಜೀತಪದ್ಧತಿ ಜೀವಂತವಾಗಿರುವುದು ದುರ್ದೈವ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಸಿಗುವಂತಹ ಕಂದಾಯ ಭೂಮಿಯನ್ನು ಸಂತ್ರಸ್ತರಿಗೆ ಮಂಜೂರು ಮಾಡಿ, ಅವರು ಮನುಷ್ಯರಾಗಿ ಬದುಕಲು ಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ಕಲ್ಪಿಸಿಕೊಡಲಿದೆ. ದಿಡ್ಡಳ್ಳಿ ನಿರಾಶ್ರಿತರಿಂದ ದರ್ಖಾಸ್ತು ಅರ್ಜಿ ತೆಗೆದುಕೊಂಡು, ಲಭ್ಯವಿರುವೆಡೆ ಅವರಿಗೆ ಭೂಮಿ ಹಂಚುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಅವರು ಹೇಳಿದರು.
ದಿಡ್ಡಳ್ಳಿಗೆ ಭೇಟಿ ನೀಡಿ ಬಂದ ನಂತರ ಹೋರಾಟಗಾರರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸರಕಾರವು ಇದನ್ನು ಸವಾಲಾಗಿ ಸ್ವೀಕರಿಸಿದೆ. ನಿರಾಶ್ರಿತರು ನೆಲೆಸಿರುವ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಒಂದು ವೇಳೆ ಆ ಭೂಮಿಯೂ ಕಂದಾಯ ಇಲಾಖೆಗೆ ಸೇರಿದ್ದಲ್ಲಿ ಎಂಟು ದಿನಗಳಲ್ಲಿ ಹಕ್ಕುಪತ್ರಗಳನ್ನು ಕೊಡಿಸಿ, ಸರಕಾರದಿಂದ ಮನೆಗಳನ್ನು ಮಂಜೂರು ಮಾಡಿಸಲಾಗುವುದು. ಕ್ಯಾಂಪ್‌ನಲ್ಲಿ ವಾಸ ಮಾಡುವವರಿಗೆ ಶಾಶ್ವತ ನೆಲೆ ಒದಗಿಸಬೇಕು. ಕೊಡಗು ಜಿಲ್ಲೆಯಲ್ಲಿ ಸುಮಾರು 50 ಸಾವಿರ ಜನ ಜೇನು ಕುರುಬ, ಕಾಡು ಕುರುಬ, ಮಲೆಕುಡಿಯಾ ಸೇರಿದಂತೆ ಇನ್ನಿತರ ಸಮುದಾಯಗಳ ಆದಿವಾಸಿಗಳಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಅಕ್ರಮ ಕಾಫಿ ತೋಟಗಳ ಮಾಹಿತಿ ಸಂಗ್ರಹ
ರಾಜ್ಯದಲ್ಲಿರುವ ಕಾಫಿ ತೋಟಗಳ ಕುರಿತು ಅಂಕಿ ಸಂಖ್ಯೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟಗಳನ್ನು ನಿರ್ಮಿಸಿಕೊಂಡಿರುವವರ ವಿರುದ್ಧ ಕಾನೂನು ರೀತಿ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ
ಸಂಪೂರ್ಣ ತೃಪ್ತಿ ತಂದಿಲ್ಲ
ನಾಲ್ಕು ತಿಂಗಳಿನಿಂದ ದಿಡ್ಡಳ್ಳಿ ಹೋರಾಟ ನಡೆಯುತ್ತಿದೆ. ಸರಕಾರವು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಕಳೆದ ಸಾಲಿನ ಡಿಸೆಂಬರ್‌ನಲ್ಲಿ ಹೇಳಿತ್ತು. ಆದರೆ, ನಾಲ್ಕು ತಿಂಗಳು ಆದರೂ ಏನು ಆಗಿಲ್ಲ. ಇಂದಿನ ಸಭೆಯಲ್ಲೆ ಅಂತಿಮ ತೀರ್ಮಾನವಾಗಬೇಕಿತ್ತು. ಆದರೆ, ಇದಕ್ಕಾಗಿ ಮತ್ತೊಂದು ಸುತ್ತಿನ ಸಭೆಯನ್ನು ಕರೆಯುವುದಾಗಿ ಸರಕಾರ ಹೇಳಿದೆ. ಇದರಿಂದಾಗಿ, ಸಂಪೂರ್ಣ ತೃಪ್ತಿ ಆಗಿಲ್ಲ. ಆದಿವಾಸಿಗಳು ಈಗ ವಾಸಿಸುತ್ತಿರುವ ಸ್ಥಳ ಅರಣ್ಯ ಪೈಸಾರಿ ಜಾಗ ಎಂದು ಒಪ್ಪಿಕೊಂಡಿದ್ದಾರೆ. ಆದಿವಾಸಿಗಳಿಗೆ ಬದುಕು ಕಟ್ಟಿಕೊಡುವ ತೀರ್ಮಾನಕ್ಕೆ ಬಂದಿರುವ ಸರಕಾರದ ನಡೆಗೆ ಸಂತಸವಾಗಿದೆ.
-ಚೇತನ್, ನಟ