ದಲಿತರಿಗೆ ಅವಮಾನ: ಸಚಿವ ತನ್ವೀರ್‌ಸೇಠ್ ವಿರುದ್ಧ ಜಾತಿನಿಂದನೆ ಆರೋಪ
ಬೆಂಗಳೂರು, ಎ.11: ವಿಧಾನಸೌಧದೊಳಗೆ ದಲಿತ ಸಮುದಾಯದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೀಳುಮಟ್ಟದಲ್ಲಿ ಮಾತನಾಡಿದ್ದಲ್ಲದೆ, ದಲಿತ ಮುಖಂಡರನ್ನು ತಮ್ಮ ಕೊಠಡಿಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ದಲಿತ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತರಾಜು, ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 207ನಲ್ಲಿ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ದಲಿತ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು. ಆದರೆ, ಸಚಿವರು, ಏಕಾಏಕಿ ನಾನು ದಲಿತರಿಗಾಗಿ ಕೆಲಸ ಮಾಡಲು ಬಂದಿಲ್ಲ ಎಂದು ಹೇಳಿದ್ದಲ್ಲದೆ, ನೀವು ದಲಿತರು ಎದ್ದು ಹೋಗಬೇಕೆಂದು ಹೊರಹಾಕಿದರು ಎಂದು ಗಂಭೀರ ಆರೋಪ ಮಾಡಿದರು.
ದೂರು ತೆಗೆದುಕೊಂಡಿಲ್ಲ: ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ದಲಿತ ಮುಖಂಡರು ಸಚಿವ ತನ್ವೀರ್‌ಸೇಠ್ ಅವರ ವಿರುದ್ಧ ದೂರು ನೀಡಲು ಮುಂದಾದರೂ ಸತತ 5 ಗಂಟೆಗಳ ಕಾಲ ದೂರು ತೆಗೆದುಕೊಂಡಿಲ್ಲ ಎಂದು ಶಾಂತರಾಜು ಆರೋಪಿಸಿದರು.
ನಮ್ಮ ವಿರುದ್ಧವೇ ದೂರು: ಸಚಿವರು ಪೊಲೀಸರ ಮೇಲೆ ಒತ್ತಡ ಹಾಕಿದ್ದು, ನಾವೇ ಸಚಿವರ ಮೇಲೆ ಹಲ್ಲೆ ನಡೆಸಿದ್ದೇವೆ, ಪ್ರಾಣ ಬೆದರಿಕೆ ಹಾಕಿದ್ದೇವೆ ಎಂದು ಆರೋಪಿಸಿ ಹತ್ತು ಜನ ದಲಿತ ಮುಖಂಡರ ವಿರುದ್ಧವೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಹೇಳಿದರು.