ಅಡಿಕೆ-ತೆಂಗು ಬೆಳೆಗಾರರಿಗೆ ನೆರವು ನೀಡಲು ಕೇಂದ್ರಕ್ಕೆ ದೇವೇಗೌಡ ಮನವಿ
ಬೆಂಗಳೂರು/ಹೊಸದಿಲ್ಲಿ, ಎ.12: ಸಂಕಷ್ಟದಲ್ಲಿರುವ ಅಡಿಕೆ ಹಾಗೂ ತೆಂಗು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರ ಸರಕಾರಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ಸಿಂಗ್‌ರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ತೆಂಗು ಹಾಗೂ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಒಂದು ವಾರದಿಂದ ರಾಜ್ಯದ ವಿವಿಧ ಕಡೆ ಪ್ರವಾಸ ಮಾಡಿದ್ದೇನೆ. ನೀರಿನ ಕೊರತೆಯಿಂದ ತೆಂಗು, ಅಡಿಕೆ ಮರಗಳು ಒಣಗಿವೆ. ರೈತರು ಒಣಗಿದ ಮರಗಳನ್ನು ಕಡಿದು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಹಿಂದೆಯೂ ಉದ್ಭವಿಸಿತ್ತು. ಆಗ, ಕೇಂದ್ರ ಸಚಿವರಾಗಿದ್ದ ಶರದ್‌ಪವಾರ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪರಿಣಾಮ, ಅವರು ರಾಜ್ಯಕ್ಕೆ ಅಧ್ಯಯನ ತಂಡವನ್ನು ಕಳುಹಿಸಿ ನೆರವಿಗೆ ಬಂದಿದ್ದರು. ಅದೇ ರೀತಿ, ನೀವು ರಾಜ್ಯಕ್ಕೆ ಅಧ್ಯಯನ ತಂಡ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತೆಂಗು, ಅಡಿಕೆ ಬೆಳೆ ನಾಶವಾಗಿದೆ. ಬರದ ಸಂಕಷ್ಟವನ್ನು ವಿವರವಾಗಿ ಸಚಿವರಿಗೆ ತಿಳಿಸಿದ್ದೇನೆ. ರಾಜ್ಯಕ್ಕೆ ಅಧ್ಯಯನ ತಂಡವನ್ನು ಕಳುಹಿಸಿಕೊಡುವ ಬಗ್ಗೆ ಕೇಂದ್ರ ಕೃಷಿ ಸಚಿವರು ಭರವಸೆ ನೀಡಿದ್ದಾರೆ. ನಮ್ಮ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ದೇವೇಗೌಡ ಹೇಳಿದರು.
ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗೋರಕ್‌ಸಿಂಗ್ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸಬೇಕು. ಈ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ದೇವೇಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಉಪಸ್ಥಿತರಿದ್ದರು.