ಐದು ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ: ಕಾಗೋಡು ತಿಮ್ಮಪ್ಪ
Update: 2017-04-12 22:02 IST
ಬೆಂಗಳೂರು, ಎ.12: ರಾಜ್ಯದಲ್ಲಿ 10 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಬೇಕಿದ್ದು, ಸದ್ಯಕ್ಕೆ ಐದು ಲಕ್ಷ ರೈತರ ಖಾತೆಗೆ ಕೇಂದ್ರದಿಂದ ಬಂದಿರುವ ಹಣವನ್ನು ತಕ್ಷಣ ವರ್ಗಾವಣೆ ಮಾಡಲು ಇಂದಿನ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳಿದ ರೈತರಿಗೆ ಎರಡನೆ ಹಂತದಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ 100 ಕೋಟಿ ರೂ.ಅನುದಾನ ಒದಗಿಸಲು ನಿರ್ಧರಿಸಲಾಗಿದೆ. ಬರಪೀಡಿತ ಪ್ರತಿ ತಾಲೂಕಿಗೆ 50 ಲಕ್ಷ ರೂ.ಗಳನ್ನು ಕುಡಿಯುವ ನೀರಿಗಾಗಿ ನೀಡಲಾಗುವುದು. ಮುಖ್ಯಮಂತ್ರಿಯ ಅನುಮತಿ ಪಡೆದ ಬಳಿಕವೇ ಕುಡಿಯುವ ನೀರಿಗೆ ಹೆಚ್ಚುವರಿ 100 ಕೋಟಿ ರೂ.ಬಿಡುಗಡೆಯಾಗಲಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.