ಎಟಿಎಂಗಳು ಹಠಾತ್ತನೆ ಖಾಲಿಯಾಗಿದ್ದು ಹೇಗೆ ?

Update: 2017-04-13 11:42 GMT

ಎಟಿಎಂಗಳಲ್ಲಿ ಹಣವಿಲ್ಲದೆ ಜನರು ಪರದಾಡುತ್ತಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು ಪುಂಖಾನುಪುಂಖವಾಗಿ ವರದಿಗಳನ್ನು ಮಾಡುತ್ತಿವೆ.

ಎ.10ರಂದು ಹೆಚ್ಚಿನ ಎಟಿಎಂಗಳಲ್ಲಿ ‘ನೋ ಕ್ಯಾಷ್ ’ ಫಲಕಗಳು ಬೆಂಗಳೂರಿಗರನ್ನು ಸ್ವಾಗತಿಸಿದ್ದವು ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದ್ದರೆ, ನೋಟು ರದ್ದತಿ ಅವಧಿಯ ಸಂಕಷ್ಟದ ದಿನಗಳು ಮುಂಬಯಿಗರಿಗೆ ಮತ್ತೆ ಎದುರಾಗಿವೆ. ಮಾ.31ರಂದು ಬ್ಯಾಂಕಿಂಗ್ ವಹಿವಾಟಿನ ವಾರ್ಷಿಕ ಮುಕ್ತಾಯದ 10 ದಿನಗಳ ಬಳಿಕ ಮಹಾನಗರದಾದ್ಯಂತ ಎಟಿಎಂಗಳು ಬರಿದಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ಬರೆದಿದೆ. ದೇಶದ ಇತರ ಭಾಗಗಳಲ್ಲಿಯೂ ಇದೇ ರೀತಿಯ ವರದಿಗಳು ದೈನಿಕಗಳಲ್ಲಿ ಪ್ರಕಟಗೊಂಡಿವೆ.

ನಿಜಕ್ಕೂ ಸಮಸ್ಯೆಯೊಂದಿದೆ ಮತ್ತು ಎಟಿಎಂಗಳಲ್ಲಿ ಕರೆನ್ಸಿ ನೋಟುಗಳ ಕೊರತೆಯಿದೆ ಎನ್ನುವುದನ್ನು ಈ ಪತ್ರಿಕಾ ವರದಿಗಳು ಸಾಬೀತುಗೊಳಿಸಿವೆ.

 ಅಂದರೆ ಏನಾಗುತ್ತಿದೆ ಇಲ್ಲಿ ? ಮಾ.31 ಬ್ಯಾಂಕುಗಳಿಗೆ ವರ್ಷದ ಅಂತ್ಯವಾಗಿದ್ದರಿಂದ ಹಣದ ಕೊರತೆಯಾಗಿದೆ ಎನ್ನುವುದು ಈಗ ಕೇಳಿ ಬರುತ್ತಿರುವ ವಿವರಣೆಯಾಗಿದೆ. ಇದೊಂದು ಸ್ಪಷ್ಟ ಕಾರಣವಾಗಿರಬಹುದಾದರೂ ಇತರ ಕಾರಣಗಳೂ ಇವೆ. ವಿವರಣೆ ಇಲ್ಲಿದೆ.

2017,ಜನವರಿಯಿಂದ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆರ್‌ಬಿಐ ಮತ್ತು ಸರಕಾರದ ನೋಟು ಮುದ್ರಣಾಲಯಗಳು ನೋಟುಗಳನ್ನು ಮುದ್ರಿಸಿ ಬ್ಯಾಂಕುಗಳ ಮೂಲಕ ಹಣಕಾಸು ವ್ಯವಸ್ಥೆಯೊಳಗೆ ತಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಚಿತ್ರ 1ರಲ್ಲಿ ತೋರಿಸಿರುವಂತೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು 2017,ಜ.6ರಿಂದ ಹೆಚ್ಚುತ್ತಲೇ ಸಾಗಿವೆ.

 ಆದರೆ ಅದು ಸಾಕಾಗುವುದೇ? 2017,ಜ.6ರಿಂದ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಪ್ರತಿ ವಾರ ಯಾವ ದರದಲ್ಲಿ ಹೆಚ್ಚುತ್ತಿತ್ತು ಅನ್ನುವುದನ್ನು ನಾವು ಪರಿಶೀಲಿಸಬೇಕಾಗುತ್ತದೆ. ಈ ದರವನ್ನು ಹೇಗೆ ಕಂಡುಕೊಳ್ಳಬಹುದು ? 2017,ಜ.6ಕ್ಕೆ ಇದ್ದಂತೆ 8,98,017 ಕೋ.ರೂ.ಗಳ ನೋಟುಗಳು ಚಲಾವಣೆಯಲ್ಲಿದ್ದವು. ಇದು ಜ.13ಕ್ಕೆ 9,50,803 ಕೋ.ರೂ.ಗೇರಿತ್ತು. ಅಂದರೆ 52,786 ಕೋ.ರೂ. ಅಥವಾ ಶೇ.ಸುಮಾರು 5.9ರಷ್ಟು ನೋಟುಗಳು ಚಲಾವಣೆಯಲ್ಲಿ ಸೇರಿಕೊಂಡಿದ್ದವು. ಉಳಿದ ವಾರಗಳಿಗೂ ಈ ದರವನ್ನು ಲೆಕ್ಕ ಹಾಕಲಾಗಿದೆ.

ಚಿತ್ರ 2ನ್ನು ನೋಡಿ. 2017,ಜ.6ರಿಂದ ಕರೆನ್ಸಿ ನೋಟುಗಳ ಚಲಾವಣೆ ವಾರದಿಂದ ವಾರಕ್ಕೆ ಹೆಚ್ಚುತ್ತಿರುವ ದರವನ್ನು ತೋರಿಸುತ್ತದೆ. ಇದು ಕುತೂಹಲಕಾರಿ ಚಿತ್ರಣವನ್ನು ನಮ್ಮೆದುರಿಗೆ ಇರಿಸುತ್ತದೆ. 2017,ಜ.13ಕ್ಕೆ ಕೊನೆಗೊಂಡ ವಾರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನೋಟುಗಳು ಅಂದರೆ ಶೇ.5.9ರಷ್ಟು ನೋಟುಗಳಷ್ಟು ಏರಿಕೆ ಚಲಾವಣೆಯಲ್ಲಿ ಕಂಡು ಬಂದಿದೆ. ನಂತರ ನಡುನಡುವೆ ಏರಿಕೆಯಿದ್ದರೂ ಒಟ್ಟಾರೆ ಪ್ರವೃತ್ತಿ ಇಳಿಕೆಯ ಹಾದಿಯಲ್ಲಿಯೇ ಸಾಗಿದೆ. ಮಾ.10ರಿಂದ ಮಾ.31ರವರೆಗೆ ಚಲಾವಣೆಯಲ್ಲಿಯ ಏರಿಕೆ ಇಳಿಮಖವಾಗುತ್ತಲೇ ಸಾಗಿದೆ.

ಮಾ.31ಕ್ಕೆ ಕೊನೆಗೊಂಡ ವಾರದಲ್ಲಿ ಚಲಾವಣೆಯಲ್ಲಿಯ ನೋಟುಗಳಲ್ಲಿ ಏರಿಕೆಯು ಜನವರಿಯಿಂದೀಚೆಗೆ ಕನಿಷ್ಠ ಮಟ್ಟದಲ್ಲಿ ಇದೆ (ಶೇ.1.7). ಏನಿದರ ಅರ್ಥ? ಆರ್‌ಬಿಐ ಈ ಹಿಂದಿನ ವೇಗದಲ್ಲಿ ಬ್ಯಾಂಕುಗಳಿಗೆ ನೋಟುಗಳನ್ನು ಪೂರೈಸುತ್ತಿಲ್ಲ ಎನ್ನುವುದು ಇದರ ಅರ್ಥ. ಆರ್‌ಬಿಐ ಮಟ್ಟದಲ್ಲಿಯೇ ಕರೆನ್ಸಿ ಬಿಡುಗಡೆ ದರ ಕಡಿಮೆಯಾಗಿದೆ. ಅಂದರೆ ಬ್ಯಾಂಕುಗಳು ಎಟಿಎಂಗಳಿಗೆ ತುಂಬಲು ಹಿಂದಿನಷ್ಟು ನಗದು ಹಣವನ್ನು ಹೊಂದಿಲ್ಲ.

ಎಟಿಎಂಗಳಲ್ಲಿ ಹಣದ ಕೊರತೆ ಏಕೆ ಎನ್ನುವುದನ್ನು ಇದು ವಿವರಿಸುತ್ತದೆ. ನೋಟು ಮುದ್ರಣ ಘಟಕಗಳು ಈ ಹಿಂದಿನಷ್ಟು ನೋಟುಗಳನ್ನು ಮುದ್ರಿಸುತ್ತಿಲ್ಲ ಎನ್ನುವುದನ್ನೂ ಇದು ಸೂಚಿಸುತ್ತದೆ. ಹೀಗೇಕಾಗುತ್ತಿದೆ ಎನ್ನುವುದನ್ನು ಆರ್‌ಬಿಐ ಮತ್ತು ಕೇಂದ್ರ ಸರಕಾರವೇ ವಿವರಿಸಲು ಸಾಧ್ಯ.

ಹಣಕಾಸು ವ್ಯವಸ್ಥೆಯಲ್ಲಿನ ಒಟ್ಟು ನಗದು ಪ್ರಮಾಣವನ್ನು ತಗ್ಗಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದ್ದರೆ ಅದು ಮೂರ್ಖತನದ ಕ್ರಮವಾಗುತ್ತದೆ. ಯಾವುದೇ ಆರ್ಥಿಕತೆಯಾಧರೂ ಕಾರ್ಯ ನಿರ್ವಹಿಸಲು ನಿರ್ದಿಷ್ಟ ಪ್ರಮಾಣದ ಕರೆನ್ಸಿ ಅಗತ್ಯವಾಗುತ್ತದೆ. ಭಾರತೀಯ ಆರ್ಥಿಕತೆಯು ಸದ್ಯದ ಸ್ಥಿತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದನ್ನು ಹೊಂದಿಲ್ಲ. 2017,ಮಾ.31ಕ್ಕೆ ಇದ್ದಂತೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ನೋಟು ರದ್ದತಿಗಿಂತ ಮೊದಲಿದ್ದ ಪ್ರಮಾಣದ ಶೇ.74.3ರಷ್ಟಿತ್ತು. ನಾವು ನೋಟು ರದ್ದತಿಗಿಂತ ಮೊದಲಿದ್ದ ಪ್ರಮಾಣಕ್ಕೆ ವಾಪಸ್ ಮರಳದಿದ್ದರೆ ಕರೆನ್ಸಿ ನೋಟುಗಳ ಕೊರತೆ ಮುಂದುವರಿಯುವ ಸಾಧ್ಯತೆಯಿದೆ.

ನೋಟು ರದ್ದತಿಗೆ ಮುನ್ನ ಇದ್ದಷ್ಟು ನೋಟುಗಳನ್ನು ಮುದ್ರಿಸದಿರಲು ಮತ್ತು ಚಲಾವಣೆಗೆ ಬಿಡದಿರಲು ಸರಕಾರವು ನಿರ್ಧರಿಸಿದರೆ ಅದು ಆರ್ಥಿಕತೆಯಲ್ಲಿ ನಡೆಲಾಗುವ ಹಣಕಾಸು ವಹಿವಾಟುಗಳ ಒಟ್ಟು ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಬಹುಶಃ ಒಳ್ಳೆಯ ಸಂಗತಿಯಲ್ಲ.

ಎಟಿಎಂಗಳು ಖಾಲಿಯಾಗುತ್ತಿರುವುದು ನಗದು ಹಣಕ್ಕೆ ಹೆಚ್ಚಿನ ಬೇಡಿಕೆ ಮುಂದುವರಿದಿದೆ ಎನ್ನುವುದನ್ನು ಬೆಟ್ಟು ಮಾಡುತ್ತಿದೆ. ಸರಕಾರದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಜನರು ಒಗ್ಗಿಕೊಂಡಿಲ್ಲ ಎನ್ನುವುದನ್ನೂ ಇದು ವಿಷದಪಡಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News