×
Ad

ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂತೋಷ್‌ರಾವ್‌ಗೆ ಜಾಮೀನು

Update: 2017-04-13 21:24 IST

ಬೆಂಗಳೂರು, ಎ.13: ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹೆಚ್ಚಿನ ಸಿಬಿಐ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿರುವ ಬೆನ್ನಲ್ಲೇ ಪ್ರಕರಣದ ಏಕೈಕ ಆರೋಪಿಗೆ ಸಿಬಿಐ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಯಾರೀತ ಸಂತೋಷ್ ರಾವ್?: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬರುತ್ತಲೇ ಧರ್ಮಸ್ಥಳದ ದೇವಸ್ಥಾನದ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದವರು ಯುವಕನೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಎಂದು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಆತ ಕೆಲವು ತಿಂಗಳುಗಳ ಹಿಂದೆ ರವಿ ಎಂಬ ಹೆಸರಿನಲ್ಲಿ ಶೃಂಗೇರಿಯ ಶಾರದಾ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ನಂತರ ತಿಳಿದು ಬಂದಿತ್ತು. ಬಂಧನಕ್ಕೊಳಗಾದ ನಂತರ ಆತ ಕುಂದಾಪುರ ಮೂಲದ ಸಂತೋಷ್‌ರಾವ್ ಎಂದು ಗೊತ್ತಾಗಿತ್ತು. ಧರ್ಮಸ್ಥಳದಲ್ಲಿ ಆತ ಊಟ ಖರೀದಿಸಿದ್ದ ಎಂಬುದಕ್ಕೆಲ್ಲಾ ಸಾಕ್ಷಿಗಳನ್ನು ಪೊಲೀಸರು ಹುಡುಕಿದ್ದರು. ಆತನೇ ಸೌಜನ್ಯಾಳನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಎಂದು ಆರೋಪ ಹೊರಿಸಲಾಗಿತ್ತು. ಇದನ್ನೇ ಸಿಬಿಐ ಕೂಡ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿತ್ತು

ಆದರೆ, ಸಂತೋಷ್ ಮೇಲೆ ಯಾವ ಕಾರಣಕ್ಕೆ ಅನುಮಾನ ಬಂತು ಎಂದಾಗಲೀ ಅಥವಾ ಆತನೇ ಅತ್ಯಾಚಾರ ಎಸಗಿ ಸೌಜನ್ಯಾ ಳನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾದದ್ದು ಹೇಗೆ ಎಂದಾಗಲೀ ಎಲ್ಲಿಯೂ ಹೇಳಿಕೆಗಳು ದಾಖಲಾಗಿಲ್ಲ. ಇನ್ನೂ ವಿಶೇಷವೆಂದರೆ, ಸಂತೋಷ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಮಯದಲ್ಲಿ ಜತೆಗಿದ್ದ ರವಿ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವು, ಕೊಲೆ ಇರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ, ಗೋಪಾಲ ಕೃಷ್ಣ ಗೌಡ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದಾರೆ

ಅನುಮಾನ ಸಹಜ: ಪ್ರಕರಣದಲ್ಲಿ ಸೌಜನ್ಯಾ ಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ ತಾಲೂಕು ಜನರಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಆದಂ, ಸೌಜನ್ಯಾ ಳ ಮೇಲೆ ಭೀಕರವಾಗಿ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ, ಮಂಗಳೂರಿನ ಕೆ.ಎಸ್.ಹೆಗಡೆ ಮೆಡಿಕಲ್ ಅಕಾಡಮಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಬಲೇಶ್ವರ ಶೆಟ್ಟಿ, ಆರೋಪಿ ಸಂತೋಷ್ ರಾವ್ ಫಿಮಾಸಿಸ್ ಕಾಯಿಲೆಯಿಂದ ನರಳುತ್ತಿದ್ದ ಎಂದು ದಾಖಲಿಸಿದ್ದಾರೆ. ಈ ಎರಡೂ ಹೇಳಿಕೆಗಳ ಜತೆಗೆ, ಸಂತೋಷ್ ರಾವ್‌ನನ್ನು ಪರೀಕ್ಷಿಸಿದ ವೈದ್ಯರು ಆತನ ಜನನಾಂಗದಲ್ಲಿ ಯಾವುದೇ ಗಾಯಗಳಾಗಿರಲಿಲ್ಲ ಎಂದೂ ಹೇಳಿದ್ದಾರೆ. ಒಂದು ಕಡೆ ಸೌಜನ್ಯಾ ಮೇಲೆ ಭೀಕರವಾದ ಅತ್ಯಾಚಾರ ಎಸಗಲಾಗಿದೆ, ಮತ್ತೊಂದೆಡೆ ಫಿಮಾಸಿಸ್‌ನಿಂದ ಬಳಲುತ್ತಿದ್ದ ಆರೋಪಿಯ ಜನನಾಂಗದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂಬ ವೈರುಧ್ಯದ ಸಹಜವಾಗಿ ಅನುಮಾನ ಮೂಡಿಸಿತ್ತು.

ವರದಿಯಲ್ಲಿ ಇಲ್ಲದ ಸಮಜಾಯಿಷಿ: ಆರೋಪಿ ಸಂತೋಷ್ ರಾವ್ ಪೊಲೀಸರ ವಶಕ್ಕೆ ಸಿಗುವ ವಾರದ ಹಿಂದಷ್ಟೆ ಶೃಂಗೇರಿಯ ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ಆತ ಧರ್ಮಸ್ಥಳಕ್ಕೆ ಬಂದಿದ್ದ ಎನ್ನುತ್ತವೆ ಸಿಬಿಐ ಕಲೆ ಹಾಕಿರುವ ಸಾಕ್ಷಿಗಳು. ಆತನಿಂದ 3 ಶರ್ಟ್, 1 ಬನಿಯನ್, 1 ಪಂಚೆ ಮತ್ತು 1 ಒಳ ಉಡುಪನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ಪರೀಕ್ಷಾ ವರದಿಗಳಲ್ಲಿ ಇವ್ಯಾವುದರ ಮೇಲೆಯೂ ಒಂದೇ ಒಂದು ರಕ್ತದ ಕಲೆಯಾಗಲೀ, ಡಿಎನ್‌ಎ ಮಾರ್ಕಿಂಗ್‌ಗಳಾಗಲಿ ಕಂಡು ಬಂದಿಲ್ಲ. ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪಿ ಬಳಿ ಇರುವ ಬಟ್ಟೆಗಳಲ್ಲಿ ಅಂತಹ ಕುರುಹುಗಳು ಸಿಗದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಸಿಬಿಐ ಈ ಕುರಿತು ಯಾವುದೇ ಸಮಾಜಾಯಿಷಿಯನ್ನೂ ನೀಡಿರಲಿಲ್ಲ.

ಡಿಎನ್‌ಎ ತಜ್ಞ ವಿನೋದ್ ಕೆ.ಲಕ್ಕಪ್ಪ ನೀಡಿರುವ ಹೇಳಿಕೆಯಲ್ಲಿ ಆರೋಪಿ ಸಂತೋಷ್ ಪಂಚೆಯಲ್ಲಿ ಕೂದಲುಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ವಿಶೇಷ ಅಂದರೆ, ಈ ಕೂದಲುಗಳು ಇಬ್ಬರು ಪ್ರತ್ಯೇಕ ಪುರುಷರಿಗೆ ಸೇರಿದ್ದು ಎಂದು ಅವರು ಗುರುತಿಸಿದ್ದಾರೆ. ಈ ಕುರಿತು ಸಿಬಿಐ ತನಿಖೆ ಹೆಚ್ಚಿನ ಬೆಳಕು ಬೀರಿರಲಿಲ್ಲ. ಜತೆಗೆ, ಸೌಜನ್ಯಾ  ಉಗುರುಗಳಲ್ಲಿ ಸಿಕ್ಕಿರುವ ಡಿಎನ್‌ಎಗೂ ಸಂತೋಷ್‌ ಡಿಎನ್ ಎಗೂ ಯಾವುದೇ ಸಾಮ್ಯತೆ ಇರಲಿಲ್ಲ.

ವಿನೋದ್ ಕೆ.ಲಕ್ಕಪ್ಪ ನೀಡಿರುವ ಬಾಯಿ ಮಾತಿನ ಹೇಳಿಕೆಯಲ್ಲಿ ಕೊಲೆಯಾದ ಸೌಜನ್ಯಾ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಂದ ಬಲಾತ್ಕಾರ ನಡೆದಿರಬಹುದು ಎಂದು ತಿಳಿಸಿದ್ದಾರೆ. ಡಾ.ಆದಂ ಕೂಡ ಇದನ್ನೇ ಪುಷ್ಟೀಕರಿಸಿದ್ದಾರೆ. ಆದರೆ ಪ್ರಕರಣದಲ್ಲಿ ಈವರೆಗೆ ಪೊಲೀಸರು ಸಂತೋಷ್‌ರಾವ್ ಒಬ್ಬನನ್ನೇ ಅಪರಾಧಿ ಎಂದು ಹೇಳುತ್ತಿದ್ದು, ಇದೀಗ ನಾಲ್ಕು ವರ್ಷಗಳ ನಂತರ ಆತನಿಗೂ ಜಾಮೀನು ಸಿಕ್ಕಿದೆ. ಅತ್ಯಾಚಾರ ಮತ್ತು ಕೊಲೆಗೆ ಈಡಾದ ಸೌಜನ್ಯಾಳ ಕುಟುಂಬ ಮಾತ್ರ ನ್ಯಾಯದ ನಿರೀಕ್ಷೆಯನ್ನು ಇನ್ನೂ ಉಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News