ಎ. 17 ರಿಂದ ‘ಜನ ಪರ್ಯಾಯ ಕಟ್ಟೋಣ ಜಾಥಾ'
ಬೆಂಗಳೂರು, ಎ.13: ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಜನವಿರೋಧಿ ನೀತಿಗಳ ವಿರುದ್ಧ ಪರ್ಯಾಯ ರಾಜಕೀಯ ಆಂದೋಲನ ನಿರ್ಮಿಸುವ ಉದ್ದೇಶದಿಂದ ಜನಾಂದೋಲನಗಳ ಮಹಾಮೈತ್ರಿಯಿಂದ ಎ.17ರಿಂದ 27 ರವರೆಗೆ ಮಂಡ್ಯದಿಂದ ರಾಯಚೂರಿನವರೆಗೆ ‘ಜನ ಪರ್ಯಾಯ ಕಟ್ಟೋಣ ಜಾಥ’ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನದ ಮುಖಂಡ ಎಸ್.ಆರ್.ಹೀರೇಮಠ್ ಹೇಳಿದ್ದಾರೆ.
ರಾಜ್ಯದಲ್ಲಿ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರ, ಕೂಲಿ ಕಾರ್ಮಿಕರ, ಗ್ರಾಮೀಣ ಜನರ ಪುನಶ್ಚೇತನಗೊಳಿಸುವ ವಿಷಯ ರಾಜಕೀಯದ ವಸ್ತುವಾಗಿಲ್ಲ. ಗ್ರಾಮೀಣ ಜನರಿಗೆ ಕನಿಷ್ಠ ಆದಾಯ ಖಾತರಿ ಕಾಯ್ದೆ, ಯೋಜನೆ, ಆರ್ಥಿಕ ನೀತಿ ರೂಪಿಸುವ ಕುರಿತು ಯಾವುದೇ ಪಕ್ಷಗಳು ಧ್ವನಿ ಎತ್ತುತ್ತಿಲ್ಲ. ಅಸಂಘಟಿತ, ಅಂಗನವಾಡಿ, ಆಶಾ, ಬಿಸಿಯೂಟ ಸೇರಿದಂತೆ ದಿನಗೂಲಿ ಕಾರ್ಮಿಕರ ಪರವಾಗಿ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಅವರು ದೂರಿದರು.
ಭ್ರಷ್ಟಾಚಾರ, ದುರಾಡಳಿತವನ್ನು ನಡೆಸುತ್ತಾ ಅದನ್ನು ಸಮರ್ಥಿಸಿಕೊಳ್ಳಲು ಎಲ್ಲ ಪಕ್ಷಗಳು ಮುಂದಾಗಿವೆ. ವಿದ್ಯಾವಂತ ಯುವಜನರು ಕೆಲಸ ಸಿಗದೇ ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಸಂಪೂರ್ಣವಾಗಿ ಖಾಸಗೀಕರಣ ಮಾಡುವ ವ್ಯವಸ್ಥಿತ ಪಿತೂರಿ ನಡೆಸಿದ್ದು, ಮಹಿಳೆ, ದಲಿತರು, ಅಲ್ಪಸಂಖ್ಯಾತರು ಇಂದಿಗೂ ದೌರ್ಜನ್ಯ ಮತ್ತು ದಬ್ಬಾಳಿಕೆ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಮೂರು ರಾಜಕೀಯ ಪಕ್ಷಗಳು ಜನರ ಪರವಾಗಿ ಯೋಚಿಸುವುದರ ಬದಲಿಗೆ ಪರಸ್ಪರ ಕೆಸರೆರಚಾಟದಲ್ಲಿ, ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟು ಕೊಂಡು ಜಾತಿ-ಧರ್ಮದ ನಡುವೆ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ರಾಜಕಾರಣಕ್ಕೆ ಬೆಲೆ ಇಲ್ಲದಂತೆ ಮಾಡಿರುವ ಪಕ್ಷಗಳನ್ನು ಧಿಕ್ಕರಿಸಬೇಕಾದ ಅಗತ್ಯವಿದೆ. ಇದು ಪ್ರಜಾಪ್ರಭುತ್ವವನ್ನು ನೆಲೆಗೊಳಿಸುವ, ಜನಪರ ಚಳವಳಿಗಳ ರಾಜಕಾರಣಕ್ಕೆ ಒಂದು ರೂಪ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಜಾಥಾ ಮಾರ್ಗ: ಎ.17 ರಂದು ಮಂಡ್ಯದಲ್ಲಿ ಉದ್ಘಾಟನೆಗೊಂಡು ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಗದಗ, ಬಳ್ಳಾರಿ ಮೂಲಕ ರಾಯಚೂರು ತಲುಪಿ ಸಮಾರೋಪಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್, ಮಲ್ಲಿಗೆ, ವಿ.ನಾಗರಾಜ್ ಉಪಸ್ಥಿತರಿದ್ದರು.