ಕೆ.ಸಿ.ಕುಂದರ್ ನಿಧನ

Update: 2017-04-13 18:29 GMT

ಕೋಟ, ಎ.13: ದ.ಕ ಜಿಲ್ಲಾ ಪರಿಷತ್‌ನ ಮಾಜಿ ಅಧ್ಯಕ್ಷ, ಕೋಟದ ಗ್ರಾಮೀಣ ಭಾಗದಲ್ಲಿ ಉದ್ಯಮ ರಂಗವನ್ನು ಸ್ಥಾಪಿಸಿ ಕ್ರಾಂತಿ ಪಸರಿಸಿದ ಕೆ.ಸಿ. ಕುಂದರ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಅವರಿಗೆ 87 ವರ್ಷ ಪ್ರಾಯವಾಗಿದ್ದು, ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರ ಉದ್ಯಮಿ ಆನಂದ್ ಸಿ. ಕುಂದರ್‌ರನ್ನು ಅಗಲಿದ್ದಾರೆ.

ಕೋಟದ ಸದಿಯಮ್ಮ ಚಿಕ್ಕಯ್ಯ ಸಾಹುಕಾರರ ಪ್ರಥಮ ಪುತ್ರರಾಗಿ ಜನಿಸಿದ ಕೃಷ್ಣ ಚಿಕ್ಕಯ್ಯ ಕುಂದರ್ (ಕೆ.ಸಿ.ಕುಂದರ್) ಉದ್ಯಮ ಹಾಗೂ ಮೀನುಗಾರಿಕಾ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಉದ್ಯೋಗದಾತರಾಗಿದ್ದರು. ಪರಿಸರದ ವಿವಿಧ ಸಂಘ ಸಂಸ್ಥೆ ಹಾಗೂ ಹಲವು ದೇವಸ್ಥಾನಗಳ ಟ್ರಸ್ಟಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವಿಭಜಿತ ದಕ್ಷಿಣ ಜಿಲ್ಲೆಯ ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದ ಕುಂದರ್, ಉಡುಪಿ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ಮಂಗಳೂರು ವಿವಿ ಸೆನೆಟ್ ಹಾಗೂ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ, ಜಿಲ್ಲೆಯ ಹಲವು ಸಾಮಾಜಿಕ ರಂಗದ ಸಂಘಸಂಸ್ಥೆಗಳಲ್ಲಿ ಗುರುತರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ, ನಿರ್ದೇಶಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿರ್ದೇಶಕ, ಮಣೂರು ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ, ಕೋಟ ಸಿಎ ಬ್ಯಾಂಕಿನ ಶಾಖಾ ಅಧ್ಯಕ್ಷ, ಕೇಂದ್ರ ಹಾಗೂ ರಾಜ್ಯ ಮೀನುಗಾರಿಕಾ ಸಲಹಾ ಸಮಿತಿಯ ಸದಸ್ಯರಾಗಿ, ಕೋಟದಲ್ಲಿ ಜನತಾ ಫಿಶ್‌ಮಿಲ್ ಎಂಬ ಸಂಸ್ಥೆ ಕಟ್ಟಿ ಯಶಸ್ವಿಯಾಗಿ ಮುನ್ನಡೆಸಿದರು.

ಕೆ.ಸಿ.ಕುಂದರ್ ಅವರ ನಿಧನಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಗ್ರಾಪಂ ಅಧ್ಯಕ್ಷೆ ವನೀತ ಶ್ರೀಧರ ಆಚಾರ್ಯ, ಕೋಟತ್ತಟ್ಟು ಗ್ರಾಪಂ ಅಧ್ಯಕ್ಷ ಪ್ರಮೋದ್ ಹಂದೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ