ಅರ್ಥಪೂರ್ಣವಾಗಲಿ ಬೇಸಿಗೆ ರಜೆ

Update: 2017-04-15 12:43 GMT

ರಜೆ ಹೇಗೆ ಕಳೆಯ ಬಹುದು ಅನ್ನೋದಕ್ಕೆ ಅನೇಕ ಆಯ್ಕೆಗಳು ಇಲ್ಲಿವೆ. ಎಲ್ಲದನೂ ಅಳವಡಿಸಿಕೊಳ್ಳುವ ಮೂಲಕ ಶಾಲೆ ಶುರುವಾಗುವ ಹೊತ್ತಿಗೆ ಹೊಸ ಚೈತನ್ಯ ಪಡೆದು ಕೊಳ್ಳಬಹುದು.
 


►ಸಹಪಠ್ಯ ಚಟುವಟಿಕೆಗಳಾದ ಚಿತ್ರಕಲೆ, ಕಥೆ, ಕವನ ಇತ್ಯಾದಿಗಳ ರಚನೆಯಲ್ಲಿ ತೊಡಗುವುದು

►ನಿಮ್ಮ ಸುತ್ತ ಮುತ್ತ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪಾಲಕರೊಂದಿಗೆ ಭಾಗವಹಿಸುವುದು.

►ವಿವಿಧ ಸಾಧಕರ ಕುರಿತ ಪುಸ್ತಕಗಳನ್ನು ಸಂಗ್ರಹಿಸಿ ಓದುವುದು.

►ಮಾಧ್ಯಮಗಳ ಮೂಲಕ ಲಭ್ಯವಾಗುವ ವಿವಿಧ ಸಾಧಕರ ಕುರಿತ ಮಾಹಿತಿಗಳನ್ನು ಬರಹ ರೂಪದಲ್ಲಿ ಸಂಗ್ರಹಿಸಿ ತಮ್ಮದೇ ಆದ ಒಂದು          ಕಿರುಹೊತ್ತಿಗೆಯನ್ನು ಸಿದ್ಧಪಡಿಸುವುದು.

►ಪಾಲಕರು ಸ್ಥಳೀಯ ಕವಿ, ಲೇಖಕರ ನಿವಾಸದ ಕುರಿತು ಮಾಹಿತಿ ಪಡೆದು ಅವರ ಬಿಡುವಿನ ವೇಳೆ ತಿಳಿದುಕೊಂಡು ಮಕ್ಕಳ ಸಹಿತ ಭೇಟಿ ನಿೀಡುವುದು ಹಾಗೂ ಚರ್ಚಿಸುವುದು.

►ಸ್ಥಳೀಯವಾಗಿ ಯಾವುದೇ ವೃದ್ಧಾಶ್ರಮ, ಅನಾಥಾಶ್ರಮ, ಜೈಲು, ಅಂಚೆ ಕಚೇರಿ, ಬ್ಯಾಂಕ್, ಗ್ರಾಮ ಪಂಚಾಯತ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ, ಕಾರ್ಯವಿಧಾನ ಕುರಿತು ತಿಳಿಯಬಹುದು

►ಟಿವಿ, ಮೊಬೈಲ್, ಕಂಪ್ಯೂಟರ್‌ಗಳ ಒಡನಾಟದಿಂದ ದೂರ ಸರಿದು ವಠಾರದಲ್ಲಿನ ಅಜ್ಜಿಯರಿಂದ ಕಾಡಿ ಬೇಡಿ ಕಥೆಗಳನ್ನು, ಅವರ ಅನುಭವದ ಮಾತುಗಳನ್ನು ಕೇಳಿದಾಗ ಏನೋ ಹೊಸತನದ ಭಾಸವಾಗುತ್ತದೆ. ಬಿಡುವಿನ ವೇಳೆಯನ್ನು ಅವರು ಹೇಗೆ ಕಳೆಯುತ್ತಿದ್ದರು ಎಂದು ಕೇಳಿ ಅವರ ಜೀವನ ವಿಧಾನಗಳನ್ನು ಅರಿಯಬಹುದು

►ಉತ್ತಮ ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ.

►ಕಸದಿಂದ ರಸ ಎನ್ನುವಂತೆ, ನಿರುಪಯುಕ್ತ ಎನಿಸುವ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಉಪಯುಕ್ತ ವಸ್ತುವನ್ನು ಕೈಯಾರೆ ತಯಾರಿಸಿ ಶಾಲೆಗೆ ಕೊಂಡೊಯ್ದು ಎಲ್ಲರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳಬಹುದು ಮತ್ತು ಸ್ಥಳೀಯ ಕರಕುಶಲ ಕಲೆಗಳು ಹಾಗೂ ವಂಶ ಪಾರಂಪರ್ಯವಾಗಿ ಬಂದಿರುವ ವಿದ್ಯೆಗಳನ್ನು ಹಿರಿಯರಿಂದ ಕಲಿಯಬಹುದು.

►ಪಠ್ಯ ಪುಸ್ತಕದಲ್ಲಿ ಬಂದಿರುವ ಮತ್ತು ನೀವು ಕಲಿತಿರುವ ವಿಷಯಗಳನ್ನು ಹಳ್ಳಿಗಳಿಗೆ ತೆರಳಿ ಅವುಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿಕೊಳ್ಳಲು ಇದು ಸಕಾಲ.

►ಸ್ಥಳೀಯವಾಗಿ ಸಣ್ಣ-ಪುಟ್ಟ ಕೆರೆಗಳು, ಈಜುಕೊಳಗಳು ಲಭ್ಯವಿದ್ದಲ್ಲಿ ಪಾಲಕರೊಂದಿಗೆ ಭೇಟಿ ನೀಡಿ ಈಜು ಕಲಿಯುವುದು. ವಾಹನ ಚಾಲನೆ ಹಾಗೂ ದೈನಂದಿನ ಚಟುವಟಿಕೆಗಳನ್ನು ಸ್ವಂತ ಮಾಡಿಕೊಂಡು ಜೀನ ಕೌಶಲಗಳನ್ನು ಕಲಿಯಬಹುದು.

►ಸ್ಥಳೀಯ ಹಬ್ಬ ಜಾತ್ರೆ ಕಾರ್ತಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಸಂವಹನ ಕೌಶಲಗಳನ್ನು ಕಲಿಯಬಹುದು

►ಗುಬ್ಬಚ್ಚಿ ಗೂಡು ಕಟ್ಟುವುದು, ನಾಯಿ ಬೆಕ್ಕು ದನಕರುಗಳ ಜೀವನ ಹಾಗೂ ಅವುಗಳ ಜೀವನ ಶೈಲಿಗಳ ಬಗ್ಗೆ ತಿಳಿಯಬಹುದು

►ನಮ್ಮ ಸರಕಾರವು ‘ಸ್ವಲ್ಪಮೋಜು-ಸ್ವಲ್ಪ ಓದು’ ಕಾರ್ಯಕ್ರಮ ಜಾರಿಗೆ ತಂದಿದೆ. ಅಲ್ಲಿಗೆ ತೆರಳಿ ಕುತೂಹಲಕಾರಿ ವಿಷಯಗಳನ್ನು ತಿಳಿಯಬಹುದು.

►ಹಳ್ಳಿಯ ಸಾಂಪ್ರದಾಯಿಕ ಆಚರಣೆಗಳು ಹಳ್ಳಿ ಜನರ ಜೀವನ ಶೈಲಿ ಅವರ ಕೃಷಿ ವಿಧಿ ವಿಧಾನಗಳು ಊರಿನ ಹೆಸರು ಅದರ ಮಹತ್ವ ಊರಿನ ಹಿರಿಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ... ಹೀಗೆ ಅನೇಕ ವಿಷಯಗಳನ್ನು ಅರಿಯಬಹುದು ಆದರೆ ನಿಮಗೆ ತಿಳಿಯುವ ಹಂಬಲವಿರಬೇಕು.

►ಈ ರೀತಿಯಾಗಿ ಮಕ್ಕಳು ರಜಾ ಅವಧಿಗಳನ್ನು ಸಕಾರಾತ್ಮಕವಾಗಿ ಕಳೆಯಬಹುದಾಗಿದೆ. ಆದರೆ ಇವುಗಳಲ್ಲಿ ಭಾಗವಹಿಸುವುದರ ಜೊತೆಗೆ ಪಠ್ಯ ವಿಷಯಗಳನ್ನು ನಿರ್ಲಕ್ಷ್ಯ ಮಾಡದಿದ್ದರೆ ರಜೆ ಹೆಚ್ಚು ಅರ್ಥಪೂರ್ಣವಾದೀತು.

Similar News