×
Ad

ಬಿಜೆಪಿ ಮಾಜಿ ಶಾಸಕನ ಬಂಧನಕ್ಕೆ ವಾರೆಂಟ್‌

Update: 2017-04-15 23:13 IST

ಬೆಂಗಳೂರು,ಎ.15: ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ನಂದೀಶ್‌ರೆಡ್ಡಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿಯಿರುವ 10ನೆ ಎಸಿಎಂಎಂ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ನಂದೀಶ್ ರೆಡ್ಡಿಯನ್ನು ಅಪರಾಧಿ ಎಂದ ಕೋರ್ಟ್, ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶಿಸಿದೆ.

ಮಾಜಿ ಶಾಸಕನನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ. ಕಾಚರಕನಹಳ್ಳಿ ನಿವಾಸಿಯೊಬ್ಬರು, ಕೆಆರ್‌ಪುರ ಹೋಬಳಿಯ ದೊಡ್ಡನೆಕ್ಕುಂದಿಯ ಸರ್ವೇ ಸಂಖ್ಯೆ 180/2ರಲ್ಲಿ 5.5ಗುಂಟೆ ಜಮೀನನ್ನು ನಂದೀಶ್‌ರೆಡ್ಡಿ ಸೇರಿದಂತೆ ಇತರರು ಅಕ್ರಮವಾಗಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಪ್ರಕರಣ ಸಂಬಂಧ ದೂರುದಾರರಿಂದ  ಹೇಳಿಕೆ ದಾಖಲಿಸಿಕೊಂಡಿದ್ದ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳಾದ ಕೃಷ್ಣಾರೆಡ್ಡಿ, ಕೆ. ದಯಾನಂದ ರೆಡ್ಡಿ, ಎಚ್.ಕೆ.ಶಾರದಮ್ಮ, ಗೌರಮ್ಮ, ಎಸ್.ಗಜಲಕ್ಷ್ಮೀ ಹಾಗೂ ನಂದೀಶ್ ರೆಡ್ಡಿ ಎಂಬವರಿಗೆ ನೋಟಿಸ್ ಜಾರಿ ಮಾಡಿತ್ತು.

ಪ್ರಕರಣದ ಐದು ಜನ ಆರೋಪಿಗಳು ಈಗಾಗಲೇ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು.ಆರನೇ ಆರೋಪಿಯಾಗಿದ್ದ ನಂದೀಶ್‌ರೆಡ್ಡಿ ಸತತ ವಿಚಾರಣೆಗೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ನ್ಯಾಯಾಲಯ ಆದೇಶಿಸಿದೆ. ಜತೆಗೆ ಆರೋಪಿಯನ್ನು ಅಪರಾಧಿ ಎಂದು ಘೋಷಣೆ ಮಾಡಿದೆ ಎಂದು ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News