×
Ad

ಎಡ-ಬಲ ಒಗ್ಗೂಡಿಸಲು ನರಸಿಂಹನ್‌ರಂತಹ ವ್ಯಕ್ತಿಗಳು ಅಗತ್ಯ: ನ್ಯಾ.ಎ.ಜೆ.ಸದಾಶಿವ

Update: 2017-04-16 22:48 IST

ಬೆಂಗಳೂರು, ಎ.16: ಪರಿಶಿಷ್ಟ ಜಾತಿಯಲ್ಲಿ ಎಡ-ಬಲ ಇರುವಂತೆ ಕಮ್ಯುನಿಸ್ಟ್‌ರಲ್ಲೂ ಎಡ-ಬಲ ಪಂಥಗಳಿದ್ದು, ಈ ಪಂಥಗಳನ್ನು ಒಂದೆಡೆ ತಂದು ಮಧ್ಯದ ದಾರಿಯಲ್ಲಿ ಕರೆದೊಯ್ಯಲು ಎಂ.ಸಿ.ನರಸಿಂಹನ್ ಅವರಂತಹ ಪರಿಪೂರ್ಣ ವ್ಯಕ್ತಿಗಳ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅಭಿಪ್ರಾಯಿಸಿದರು.

ನಗರದ ಗಾಂಧಿ ಭವನದಲ್ಲಿ ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ ಮತ್ತು ನವಕರ್ನಾಟಕ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಂ.ಸಿ.ನರಸಿಂಹನ್‌ಗೆ ಅಭಿವಂದನೆ ಹಾಗೂ ‘ಶ್ರಮಿಕ ಸಂಗಾತಿ ಎಂ.ಸಿ.ನರಸಿಂಹನ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಮ್ಯುನಿಸ್ಟ್ ನಾಯಕನಾಗಿ, ಮಾಜಿ ಶಾಸಕನಾಗಿ ಎಂ.ಸಿ. ನರಸಿಂಹನ್ ಅನುಕರಣೀಯ ವ್ಯಕ್ತಿಯಾಗಿದ್ದಾರೆ. ಅವರು ತಮಗೆ ತೋಚಿದ ದಾರಿ ಆಯ್ದುಕೊಂಡು ಮಾದರಿ ಬದುಕು ರೂಪಿಸಿಕೊಂಡಿದ್ದಾರೆ. ಸ್ವಯಂ ಗುರುವಾಗಿರುವ ಅವರು ತಮ್ಮ ಇಡೀ ಬದುಕನ್ನು ಪರರ ಹಿತಕ್ಕಾಗಿ ಮೀಸಲಿರಿಸಿದ್ದಾರೆ ಎಂದು ಹೇಳಿದರು.

ನಾಡೋಜ ಡಾ. ಕೋ.ಚೆನ್ನಬಸಪ್ಪ ಮಾತನಾಡಿ, ಕನಸಿನ ಭಾರತ ಕಾಣಲು ನಮ್ಮ ಕೈಲಾದಷ್ಟು ಶ್ರಮ ವಹಿಸಿದ್ದೇವೆ. ಇಂದಿನ ಯುವ ಸಮುದಾಯ ಮುಂದಕ್ಕೆ ಕನಸಿನ ರಾಷ್ಟ್ರವನ್ನು ಅಭಿವೃದ್ಧಿಪಡಿಸಿಕೊಂಡು ಹೋಗಬೇಕು. ನರಸಿಂಹನ್ ಆರಂಭದಿಂದಲೂ ಛಲಗಾರ. ಅವರು ಅಂದುಕೊಂಡಿದ್ದನ್ನು ಈಡೇರಿಸುವ ಮನೋಬಲ ಹೊಂದಿದ್ದ ವ್ಯಕ್ತಿ. ಅವರ ಜೀವನ ಆಧರಿಸಿ ಮಾಡಿರುವ ಈ ಕೃತಿ ಎಲ್ಲ ಪೀಳಿಗೆಗೆ ನಿರಂತರವಾಗಿ ಲಭ್ಯವಾಗುವಂತೆ ಮಾಡುವುದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

ಮಹಿಳಾ ಒಕ್ಕೂಟದ ಮುಖಂಡರಾದ ಎ.ಜ್ಯೋತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಪಿ.ವಿ.ಲೋಕೇಶ್, ನವ ಕರ್ನಾಟಕ ಪಬ್ಲಿಕೇಷನ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದನಗೌಡ ಪಾಟೀಲ, ಹಿರಿಯ ನ್ಯಾಯವಾದಿ ಕೆ.ಸುಬ್ಬರಾವ್, ಇಂದಿರಾ ನರಸಿಂಹನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News