ಈ ಎರಡರಲ್ಲಿ ಯಾವುದು ಅಪಾಯಕಾರಿ?

Update: 2017-04-16 18:54 GMT

ಆರೆಸ್ಸೆಸ್ ಎಂಬ ಫ್ಯಾಶಿಸ್ಟ್ ಸಂಘಟನೆಯ ರಾಜಕೀಯ ವೇದಿಕೆಯಾದ ಬಿಜೆಪಿ, ಕಾಂಗ್ರೆಸ್‌ಗಿಂತ ಹೆಚ್ಚು ಅಪಾಯಕಾರಿ ಎಂಬ ಅಭಿಪ್ರಾಯ ಇನ್ನು ಹಲವರಲ್ಲಿದೆ. ಇವೆರಡಕ್ಕೂ ಪರ್ಯಾಯವಾಗಿ ಮೂರನೆ ರಂಗವೊಂದನ್ನು ರೂಪಿಸಬೇಕೆಂಬ ಪ್ರಯತ್ನ ಆಗಾಗ ನಡೆದು ವಿಫಲ ಆಗುತ್ತಲೇ ಇದೆ. ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಇಂಥ ಪ್ರಯತ್ನ ಮಾಡಿದ ಕಮ್ಯುನಿಸ್ಟ್ ಪಕ್ಷಗಳು ಈಗ ಭಿನ್ನ ದಾರಿ ತುಳಿದಿವೆ. ಸೋಲಲಿ, ಗೆಲ್ಲಲಿ ಪರಿಶುದ್ಧವಾದ ಎಡಪಂಥೀಯ ರಂಗದ ಮೂಲಕ ಪರ್ಯಾಯ ರೂಪಿಸಲು ಹೊರಟಿವೆ.


ಕಾಂಗ್ರೆಸ್ ಮತ್ತು ಬಿಜೆಪಿ. ಇವೆರಡರಲ್ಲಿ ಯಾವುದು ಪ್ರಧಾನ ಶತ್ರು ಎಂಬ ಪ್ರಶ್ನೆಯ ಬಗ್ಗೆ ಪ್ರಗತಿಪರ ವಲಯಗಳಲ್ಲಿ ಗೊಂದಲವಿದೆ. ಇವೆರಡೂ ಪಕ್ಷಗಳ ಆರ್ಥಿಕ ನೀತಿ ಒಂದೇ ಆಗಿರುವುದರಿಂದ ಇವೆರಡನ್ನೂ ಏಕಕಾಲದಲ್ಲಿ ಎದುರಿಸಬೇಕು. ಇವೆರಡೂ ಅವಳಿ ಶತ್ರುಗಳು ಎಂಬ ಅಭಿಪ್ರಾಯ ಕೆಲವರಲ್ಲಿದೆ. ಇದಕ್ಕೆ ತದ್ವಿರುದ್ಧವಾಗಿ ಆರೆಸ್ಸೆಸ್ ಎಂಬ ಫ್ಯಾಶಿಸ್ಟ್ ಸಂಘಟನೆಯ ರಾಜಕೀಯ ವೇದಿಕೆಯಾದ ಬಿಜೆಪಿ, ಕಾಂಗ್ರೆಸ್‌ಗಿಂತ ಹೆಚ್ಚು ಅಪಾಯಕಾರಿ ಎಂಬ ಅಭಿಪ್ರಾಯ ಇನ್ನು ಹಲವರಲ್ಲಿದೆ. ಇವೆರಡಕ್ಕೂ ಪರ್ಯಾಯವಾಗಿ ಮೂರನೆ ರಂಗವೊಂದನ್ನು ರೂಪಿಸಬೇಕೆಂಬ ಪ್ರಯತ್ನ ಆಗಾಗ ನಡೆದು ವಿಫಲ ಆಗುತ್ತಲೇ ಇದೆ. ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಇಂಥ ಪ್ರಯತ್ನ ಮಾಡಿದ ಕಮ್ಯುನಿಸ್ಟ್ ಪಕ್ಷಗಳು ಈಗ ಭಿನ್ನ ದಾರಿ ತುಳಿದಿವೆ. ಸೋಲಲಿ, ಗೆಲ್ಲಲಿ ಪರಿಶುದ್ಧವಾದ ಎಡಪಂಥೀಯ ರಂಗದ ಮೂಲಕ ಪರ್ಯಾಯ ರೂಪಿಸಲು ಹೊರಟಿವೆ.

ಆದರೆ ಎಡ ಪ್ರಜಾಪ್ರಭುತ್ವವಾದಿ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಈ ದೇಶದ ಬೌದ್ಧಿಕ ಮತ್ತು ಸಾಂಸ್ಕೃತಿಕ ವಲಯ ಮಾತ್ರ ಸಂಘ ಪರಿವಾರವನ್ನು ಪ್ರಧಾನ ಶತ್ರುವೆಂದು ಪರಿಗಣಿಸಿದೆ. ಈಗ ದೇಶಕ್ಕೆ ಬೇಕಾಗಿರುವುದು ಮೂರನೆ ರಂಗವಲ್ಲ. ಬಿಜೆಪಿಯೇತರ ಪಕ್ಷಗಳ ಫ್ಯಾಶಿಸ್ಟ್ ವಿರೋಧಿ ರಂಗ ಎಂಬ ಅಭಿಪ್ರಾಯವನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಸೇರಿದಂತೆ ನಾನಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಭಾವಶಾಲಿಯಾಗಿರುವ ಬೌದ್ಧಿಕ ವಲಯ ಹೊಂದಿದೆ. ಇದೇ ಬೌದ್ಧಿಕ ವಲಯ ಈ ಹಿಂದೆ 90ರ ದಶಕದಲ್ಲಿ ಜ್ಯೋತಿ ಬಸು ಅವರನ್ನು ದೇಶದ ಪ್ರಧಾನಿ ಮಾಡಬೇಕೆಂಬ ಸನ್ನಿವೇಶ ನಿರ್ಮಾಣವಾದಾಗ, ಅದಕ್ಕೆ ಪೂರಕವಾಗಿ ನಿಂತಿತ್ತು. ಆದರೆ ಸಿಪಿಎಂನೊಳಗಿನ ಒಂದು ಗುಂಪು ಅದನ್ನು ವಿರೋಧಿಸಿದ್ದರಿಂದ ಬಸು ಪ್ರಧಾನಿಯಾಗಲಿಲ್ಲ. ಇದೊಂದು ಚಾರಿತ್ರಿಕ ಪ್ರಮಾದವೆಂದು ಬಸು ನಂತರ ಹೇಳಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಅದರ ವಿನಾಶಕಾರಿ ಆರ್ಥಿಕ ನೀತಿಗಳ ದುಷ್ಪರಿಣಾಮ ದೇಶಕ್ಕೆ ಆಗದಂತೆ ಎಡಪಕ್ಷಗಳು ತಡೆದು ನಿಲ್ಲಿಸಿದ್ದವು. ಅಂತಲೇ ಸಾರ್ವಜನಿಕ ರಂಗದ ವಿಮಾ ವಲಯ ಮತ್ತು ಬ್ಯಾಂಕಿಂಗ್ ಕ್ಷೇತ್ರ ಈ ದೇಶದಲ್ಲಿ ಸುರಕ್ಷಿತವಾಗಿ ಉಳಿಯಿತು. ಎಡಪಕ್ಷಗಳ ಒತ್ತಡಕ್ಕೆ ಮಣಿದು ಮನಮೋಹನ್ ಸಿಂಗ್ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಿಲ್ಲ. ಇನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳಬೇಕಾದರೆ, ವೈಚಾರಿಕ ಸಂವಾದ ತಾಣವಾಗಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಂತಹ ಶೈಕ್ಷಣಿಕ ಕೇಂದ್ರಗಳ ತಂಟೆಗೆ ಯುಪಿಎ ಹೋಗುತ್ತಿರಲಿಲ್ಲ.

ಪಿ.ವಿ.ನರಸಿಂಹರಾವ್ ಕಾಲದಲ್ಲಿ ಸಂಘ ಪರಿವಾರದ ಪ್ರಚೋದನೆಯಿಂದ ಬಾಬರಿ ಮಸೀದಿ ನೆಲಸಮಗೊಂಡಿದ್ದೇನೋ ನಿಜ. ಆದರೆ, ಆನಂತರ ಕಾಂಗ್ರೆಸ್ ಆ ತಪ್ಪನ್ನು ತಿದ್ದಿಕೊಂಡಿತು. ಎಡಪಕ್ಷಗಳು ಕಾಂಗ್ರೆಸ್ ಜೊತೆ ಇದ್ದಾಗಲೆಲ್ಲ, ಅದು ದಾರಿ ತಪ್ಪದಂತೆ ತಡೆದು ಫ್ಯಾಶಿಸ್ಟ್ ಶಕ್ತಿಗಳನ್ನು ಮೂಲೆಗುಂಪು ಮಾಡಿವೆ. ಸಿಪಿಎಂ ನಾಯಕರಾದ ಹರಕಿಶನ್ ಸಿಂಗ್ ಸುರ್ಜಿತ್ ಮತ್ತು ಜ್ಯೋತಿ ಬಸು ಇದ್ದಾಗ, ಬಿಜೆಪಿ ಅಧಿಕಾರ ಕೇಂದ್ರ ಸಮೀಪದ ಬರದಂತೆ ತಡೆದು ನಿಲ್ಲಿಸಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದರೂ ಕೂಡ ಕೆಲ ಸಂದರ್ಭಗಳಲ್ಲಿ ಸುರ್ಜಿತ್ ಮತ್ತು ಬಸು ಮಾತಿಗೆ ಬೆಲೆ ಕೊಡುತ್ತಿದ್ದರು. ಹೀಗಾಗಿ ಈಗ ನಡೆಯುತ್ತಿರುವ ಅತಿರೇಕಗಳು ಆಗ ನಡೆಯುತ್ತಿರಲಿಲ್ಲ.

ಯುಪಿಎ-1 ಕಾಲಾವಧಿಯಲ್ಲಿ ಎಡಪಕ್ಷಗಳ ಸಲಹೆಗೆ ಬೆಲೆ ಕೊಟ್ಟು ಅಂದಿನ ಸರಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಂತಹ ಜನಪರ ಯೋಜನೆ ಗಳನ್ನು ಜಾರಿಗೆ ತಂದಿತು. ಆದರೆ ಅಮೆರಿಕದೊಂದಿಗೆ ಮಾಡಿಕೊಂಡ ಅಣುಶಕ್ತಿ ಒಪ್ಪಂದದ ಪ್ರಶ್ನೆಯಲ್ಲಿ ಭಿನ್ನಾಭಿಪ್ರಾಯ ಬಂದು ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದವು. ಆಗಲೂ ಜ್ಯೋತಿ ಬಸು ಅವರಿಗೆ ಬೆಂಬಲ ಪಡೆಯುವುದು ಇಷ್ಟವಿರಲಿಲ್ಲ. ಯಾಕೆಂದರೆ, ಯುಪಿಎ ಹೋದರೆ ಫ್ಯಾಶಿಸ್ಟ್ ಶಕ್ತಿಗಳೇ ಅಧಿಕಾರಕ್ಕೆ ಬರುತ್ತವೆ ಎಂಬ ಅಪಾಯದ ಅರಿವು ಅವರಿಗಿತ್ತು.

ಈಗ ಅದೆಲ್ಲ ಮುಗಿದು ಹೋದ ಕತೆ. ದೇಶದಲ್ಲಿ ಏನು ಆಗಬಾರದಿತ್ತೋ, ಅದು ಆಗಿದೆ. ಯಾವ ದಿಕ್ಕಿಗೆ ಹೋಗಬಾರದಿತ್ತೋ, ಆ ದಿಕ್ಕಿಗೆ ದೇಶ ಹೊರಟಿದೆ. 2014ರಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಹೆಸರಿನಲ್ಲಿ ಜನಾದೇಶ ಪಡೆದ ನರೇಂದ್ರ ಮೋದಿ ಅವರು ಈಗ ಆರೆಸ್ಸೆಸ್ ಮತ್ತು ಕಾರ್ಪೊರೇಟ್ ಕಂಪೆನಿಗಳ ನಿರ್ದೇಶನದಂತೆ ದೇಶವನ್ನು ನಡೆಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಶೇ.31ರಷ್ಟು ಮತವನ್ನು ಮಾತ್ರ ಪಡೆದು ಅಧಿಕಾರಕ್ಕೆ ಬಂದವರು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತಿದ್ದಾರೆ. ಸರಕಾರದ ದೈನಂದಿನ ಆಡಳಿತದಲ್ಲಿ ಆರೆಸ್ಸೆಸ್ ಹಸ್ತಕ್ಷೇಪ ಮಿತಿ ಮೀರಿದೆ. ಯೋಗಿ ಆದಿತ್ಯನಾಥ್ ಆಯ್ಕೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ನಾಗಪುರದ ಸಂವಿಧಾನೇತರ ಅಧಿಕಾರ ಈ ಸರಕಾರವನ್ನು ನಿಯಂತ್ರಿಸುತ್ತಿದೆ.

ಆನಂತರ ನಡೆದ ಪ್ರತೀ ಚುನಾವಣೆಯಲ್ಲಿ ನರೇಂದ್ರ ಮೋದಿ ಜನಾದೇಶ ಪಡೆದಾಗಲೂ ಅದು ಹಿಂದುತ್ವದ ಪರವಾಗಿ ಪಡೆದ ಜನಾದೇಶವೆಂದು ಆರೆಸ್ಸೆಸ್ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಈ ರಹಸ್ಯ ಕಾರ್ಯಸೂಚಿ ಅಲ್ಪಸಂಖ್ಯಾತರನ್ನು ಮಾತ್ರವಲ್ಲ ದಲಿತರು ಮತ್ತು ಹಿಂದುಳಿದವರನ್ನು ಬಲಿ ತೆಗೆದುಕೊಳ್ಳುತ್ತಿದೆ. ಸಂವಿಧಾನದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರಿಗೆ ನೀಡಲಾಗಿರುವ ಮೀಸಲಾತಿ ರದ್ದುಗೊಳಿಸುವ ಕಾರ್ಯ ಅತ್ಯಂತ ತೀವ್ರಗತಿಯಲ್ಲಿ ನಡೆದಿದೆ. ಸ್ನಾತಕೋತ್ತರ ಶಿಕ್ಷಣದಲ್ಲಿ ಇದ್ದ ಮೀಸಲಾತಿಯನ್ನು ಈಗಾಗಲೇ ರದ್ದುಪಡಿಸಲಾಗಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ. ಅಂತಿಮವಾಗಿ ಪ್ರಜಾಪ್ರಭುತ್ವದ ಅಡಿಪಾಯವಾದ ಸಂವಿಧಾನವನ್ನೇ ನಾಶಪಡಿಸಿ, ದೇಶವನ್ನು ಮತ್ತೆ ಶತಮಾನಗಳ ಹಿಂದೆ ಕೊಂಡೊಯ್ಯುವ ಯತ್ನ ನಡೆದಿದೆ. ಸಂವಿಧಾನದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರಿಗೆ ಈಗ ಹಕ್ಕಿನ ರೂಪದಲ್ಲಿ ದೊರೆಯುವ ಸೌಕರ್ಯಗಳು ಇನ್ಮುಂದೆ ಭಿಕ್ಷೆ ರೂಪದಲ್ಲೂ ದೊರೆಯುವುದಿಲ್ಲ.

ಉತ್ತರ ಪ್ರದೇಶ, ಗುಜರಾತ್, ಛತ್ತೀಸ್‌ಗಡ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಗೋರಕ್ಷಣೆ ಹೆಸರಿನಲ್ಲಿ ದಲಿತ, ದಮನಿತ ಸಮುದಾಯಗಳ ಆಹಾರ ಪದ್ಧತಿ ಮೇಲೆ ದಾಳಿ ನಡೆದಿದೆ. ಗೋಹತ್ಯೆ ಮಾಡಿದವರನ್ನು ಗಲ್ಲಿಗೇರಿಸುವುದಾಗಿ ಛತ್ತೀಸ್‌ಗಡ ಮುಖ್ಯಮಂತ್ರಿ ಬೆದರಿಕೆ ಹಾಕುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಸಾಯಿ ಖಾನೆ ಮುಚ್ಚಿಸುತ್ತಿದ್ದಾರೆ. ರಾಜಸ್ತಾನದಲ್ಲಿ ಖಾನ್ ಎಂಬ ರೈತನನ್ನು ದಾನ ಸಾಗಾಟಗಾರನೆಂದು ಹಾಡಹಗಲೇ ಕೊಚ್ಚಿ ಹಾಕಲಾಗಿದೆ. ಊನಾದಂತಹ ಅನೇಕ ಪ್ರಕರಣಗಳು ಅನೇಕ ಕಡೆ ನಡೆದರೂ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಮಾಧ್ಯಮ ಮತ್ತು ನ್ಯಾಯಾಂಗವನ್ನು ಕೂಡ ಈ ಶಕ್ತಿಗಳು ನಿಯಂತ್ರಿಸುತ್ತವೆ ಎಂಬ ದಟ್ಟ ಸಂದೇಹವಿದೆ. ಕಾಶ್ಮೀರದಲ್ಲಿ ಅಮಾಯಕ ಯುವಕರನ್ನು ಭಯೋತ್ಪಾದಕರೆಂದು ಹಿಡಿದು ಜೀಪಿಗೆ ಕಟ್ಟಿ ಎಳೆದು ಒಯ್ಯಲಾಗುತ್ತಿದೆ. ಇಂಥ ಅಮಾನುಷ ಘಟನೆಗಳು ಕಂಡು ಸಂಭ್ರಮಿಸುವ ಮನೋವಾಧ್ಯಿಯು ಹೆಚ್ಚಾಗುತ್ತಿದೆ.

ಇದೇ ಸ್ಥಿತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ರೋಹಿತ್ ವೇಮುಲಾ ರಂತಹವರ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಈ ಅಪಾಯದಿಂದ ದೇಶವನ್ನು ಪಾರು ಮಾಡಬೇಕಿದ್ದರೆ, ಬಿಜೆಪಿ ವಿರೋಧಿ ಶಕ್ತಿಗಳು ಒಂದಾಗಬೇಕು. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್‌ಕುಮಾರ್ ಒಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದರು. ಉತ್ತರಪ್ರದೇಶದಲ್ಲಿ ಮಾಯಾವತಿ, ಮುಲಾಯಂ ಮತ್ತು ಕಾಂಗ್ರೆಸ್ ಒಂದಾಗಿದ್ದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ ದೇವೇಗೌಡರ ಜಾತ್ಯತೀತ ಜನತಾ ದಳ ಬೆಂಬಲ ನೀಡಿದ ಪರಿಣಾಮವಾಗಿ ಮತ್ತು ಸಿದ್ದರಾಮಯ್ಯನವರ ನಿಷ್ಕಳಂಕ ನಾಯಕತ್ವ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು.

ಈ ದೇಶದ ಸಂವಿಧಾನ ಉಳಿಯಬೇಕೆಂದಿದ್ದರೆ, ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ಪಕ್ಷಗಳು ಒಂದಾಗಬೇಕಿದೆ. ಇದು ಆಗಬೇಕಾದರೆ, ಕಾಂಗ್ರೆಸ್ ಕೂಡ ತನ್ನ ಜನವಿರೋಧಿ ನೀತಿಯನ್ನು ಕೈಬಿಡಬೇಕು, ಸಿದ್ದರಾಮಯ್ಯ ಸರಕಾರ ತಂದ ಅನ್ನಭಾಗ್ಯ ದಂತಹ ಯೋಜನೆಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಗಳು ಜಾರಿಗೆ ತರಬೇಕು. ಕಾಂಗ್ರೆಸ್‌ನಲ್ಲಿ ಸೇರಿಕೊಂಡಿರುವ ಅತ್ಯಾಚಾರ ಸ್ವಾಮಿಯ ರಕ್ಷಕರನ್ನು, ರಕ್ಷಕ ಮಂತ್ರಿಗಳನ್ನು ಹೊರದಬ್ಬಬೇಕು. ಕಾಂಗ್ರೆಸ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡರೆ ಪುನಶ್ಚೇತನ ಪಡೆಯಬಹುದು. ಬಿಜೆಪಿಯೇತರ ಮೈತ್ರಿಕೂಟವೊಂದು ಈ ದೇಶದಲ್ಲಿ ರಚನೆಯಾದರೆ, ಅದಕ್ಕೆ ಬೌದ್ಧಿಕ ಮಾರ್ಗದರ್ಶನ ಮಾಡಲು ಸೀತಾರಾಂ ಯೆಚೂರಿ ಅವರಂತಹ ಪ್ರಭಾವಶಾಲಿ ನಾಯಕರಿದ್ದಾರೆ.

ಈಗ ದೇಶದ ಮುಂದೆ ಉಳಿದಿರೋದು ಇದೊಂದೇ ದಾರಿ. ಚುನಾವಣಾ ರಾಜಕಾರಣ ಒಪ್ಪಿಕೊಂಡ ಮೇಲೆ ನಮ್ಮ ಪ್ರಧಾನ ಶತ್ರು ಯಾರು ಎಂಬುದನ್ನು ಮೊದಲು ಗುರುತಿಸಿಕೊಳ್ಳಬೇಕು. ಕಾಂಗ್ರೆಸ್, ಬಿಜೆಪಿ ಎರಡನ್ನೂ ವಿರೋಧಿಸಲು ಹೊರಟರೆ, ವೋಟು ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ. ಬಂದೂಕು ಹಿಡಿದು ಸಮಾಜವನ್ನು ಬದಲಾವಣೆ ಮಾಡಲು ಹೊರಟ ನಕ್ಸಲೀಯರು ಏನಾದರೂ ಮಾಡಿಕೊಳ್ಳಲಿ. ಆದರೆ ಮುಖ್ಯವಾಹಿನಿಯಲ್ಲಿರುವ ಜಾತ್ಯತೀತ ಪಕ್ಷಗಳು ವಾಸ್ತವ ಸಂಗತಿಯನ್ನು ಒಪ್ಪಿಕೊಂಡು ಫ್ಯಾಶಿಸ್ಟ್ ವಿರೋಧಿ ರಂಗ ಕಟ್ಟಲು ಮುಂದಾಗಬೇಕು. ಎರಡನೆ ಮಹಾಯುದ್ಧ ಕಾಲದಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನನ್ನು ಮಣಿಸಲು ರಷ್ಯಾದ ನಾಯಕ ಸ್ಟಾಲಿನ್ ಬ್ರಿಟನ್ ಮತ್ತು ಅಮೆರಿಕ ಅಧ್ಯಕ್ಷರಾದ ಚರ್ಚಿಲ್ ಮತ್ತು ರೂಸ್‌ವೆಲ್ಟ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

ಈಗಲೂ ಅಂಥದ್ದೇ ಪರಿಸ್ಥಿತಿಯಿದೆ. ಹಿಟ್ಲರ್‌ನ ಭೂತ ಅಮೆರಿಕದ ಅಧ್ಯಕ್ಷ ಟ್ರಂಪ್ ಮೈಯಲ್ಲಿ ಹೊಕ್ಕು ಜಗತ್ತನ್ನು ವಿನಾಶ ಮಾಡಲು ಹೊರಟಿದೆ. ಇಲ್ಲಿ ಭಾರತದಲ್ಲಿ ಮೋದಿ ಆಡಳಿತದಲ್ಲಿ ಸಂಘ ಪರಿವಾರ ಸಂವಿಧಾನ ನಾಶಕ್ಕೆ ಮಸಲತ್ತು ನಡೆಸಿದೆ. ಇಂಥ ಸನ್ನಿವೇಶದಲ್ಲಿ ಜಾತ್ಯತೀತ ಪಕ್ಷಗಳ ಏಕತೆಯೊಂದೇ ದೇಶಕ್ಕೆ ಉಳಿದಿರುವ ದಾರಿಯಾಗಿದೆ.

Writer - -ಸನತ್ ಕುಮಾರ್ ಬೆಳಗಲಿ

contributor

Editor - -ಸನತ್ ಕುಮಾರ್ ಬೆಳಗಲಿ

contributor

Similar News