ದಿಡ್ಡಳ್ಳಿ ಜನರಿಗೆ ಬೇರೆ ಕಡೆ ಮನೆ, ಜಮೀನು ಮಂಜೂರು: ಕಾಗೋಡು ತಿಮ್ಮಪ್ಪ
ಬೆಂಗಳೂರು, ಎ.17: ದಿಡ್ಡಳ್ಳಿ ಜಾಗ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದ ಆ ಜಾಗದಲ್ಲಿ ದಿಡ್ಡಳ್ಳಿ ಜನರಿಗೆ ನಿವೇಶನವನ್ನು ಒದಗಿಸದೆ ಪರ್ಯಾಯವಾಗಿ ಬೇರೆ ಕಡೆ ಮನೆಗಳನ್ನು ಹಾಗೂ ಜಮೀನನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 600 ಮನೆಗಳ ನಿರ್ಮಾಣಕ್ಕೆ ಈಗಾಗಲೇ ಲೇಔಟ್ ನಿರ್ಮಾಣ ಮಾಡಿ ಟೆಂಡರ್ ಕರೆಯಲಾಗಿದ್ದು, ಮನೆಗಳ ನಿರ್ಮಾಣವಾದ ತಕ್ಷಣವೇ ದಿಡ್ಡಳ್ಳಿ ಜನರಿಗೆ ಮನೆಗಳನ್ನು ಹಾಗೂ ಜಮೀನನ್ನು ನೀಡಲಾಗುವುದು ಎಂದು ಹೇಳಿದರು.
"ನಿನ್ನೆ ನಾನೇ ಖುದ್ದಾಗಿ ದಿಡ್ಡಳ್ಳಿಗೆ ಭೇಟಿ ನೀಡಿದಾಗ ಅಲ್ಲಿಯ ಜನರು ಇದೇ ಜಾಗದಲ್ಲಿ ನಿವೇಶನಗಳು ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಈ ಜಾಗ ಅರಣ್ಯಕ್ಕೊಳಪಟ್ಟಿರುವುದರಿಂದ ಅಲ್ಲಿ ನಿವೇಶನವನ್ನು ನೀಡಲು ಆಗುವುದಿಲ್ಲ. ಕಂದಾಯ ಜಾಗ ಯಾವುದೇ ಇದ್ದರೂ ನೀಡಲು ಸಿದ್ಧನಿದ್ದೇನೆ" ಎಂದು ತಿಳಿಸಿದರು.
ದಿಡ್ಡಳ್ಳಿ ಗ್ರಾಮದ ಜನರಿಗೆ ಹೋರಾಟಗಾರರು ತಪ್ಪು ಮಾಹಿತಿ ನೀಡುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಅಲ್ಲದೆ, ದಿಡ್ಡಳ್ಳಿ ಜಾಗಕ್ಕೆ ಸಂಬಂಧಪಟ್ಟಂತೆ ಹಾಗೂ ಈ ಜಾಗ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಎ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬಗರಹುಕುಂ ಅರ್ಜಿಗಳು ವಿಲೇವಾರಿಯಾಗಿಲ್ಲ: ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬಗರಹುಕುಂ ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ. ಈ ಅರ್ಜಿಗಳ ವಿಲೇವಾರಿಗೆ ನಮ್ಮ ಶಾಸಕರೇ ಸಹಕರಿಸುತ್ತಿಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.
ಬಗರಹುಕುಂ ಅರ್ಜಿಗಳ ವಿಲೇವಾರಿಗಾಗಿಯೇ ಸಮಿತಿಯನ್ನು ರಚಿಸಲೂ ಸಿದ್ಧನಿದ್ದು, ಆದಷ್ಟು ಬೇಗ ಬಗರಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಇದುವರೆಗೂ 16 ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಲಾಗಿದ್ದು, ಇನ್ನು 10 ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಬೇಕಾಗಿದೆ. ಅಲ್ಲದೆ, ಕೆಲವೊಂದು ಕಡೆ ತಾಂತ್ರಿಕ ದೋಷದಿಂದಾಗಿ ರೈತರ ಖಾತೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಆದರೆ, ಈ ತಿಂಗಳ ಅಂತ್ಯದೊಳಗೆ ಬೆಳೆ ಪರಿಹಾರವನ್ನು ರೈತರಿಗೆ ನೀಡುತ್ತೇವೆ ಎಂದು ತಿಳಿಸಿದರು.