×
Ad

ಪಕ್ಷದ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸುವೆ: ಸಚಿವ ಎಂ.ಬಿ.ಪಾಟೀಲ್

Update: 2017-04-17 21:26 IST

 ಬೆಂಗಳೂರು, ಎ. 17: ಪಕ್ಷಕ್ಕೆ ಷರತ್ತು ವಿಧಿಸುವಷ್ಟು ದೊಡ್ಡವ ನಾನಲ್ಲ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಪಕ್ಷದ ಯಾವುದೇ ಜವಾಬ್ದಾರಿಯನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ನಾನೆಲ್ಲೂ ಬಹಿರಂಗಹೇಳಿಕೆ ನೀಡಿಲ್ಲ. ನಾನಾಗಲಿ, ನನ್ನ ತಂದೆಯಾಗಲಿ ಅಧಿಕಾರದ ಹಿಂದೆ ಹೋದವರಲ್ಲ. ಜನಸೇವೆ ಮಾಡುತ್ತಿದ್ದೇವೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.

ಒಂದು ವರ್ಷದ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ನನ್ನನ್ನು ಹೊಸದಿಲ್ಲಿಗೆ ಕರೆಸಿಕೊಂಡು ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ, ಸ್ವಲ್ಪ ಕಾಲಾವಕಾಶ ಕೋರಿದ್ದೆ ಎಂದು ಪಾಟೀಲ್ ಹೇಳಿದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಹೊಸದಿಲ್ಲಿಗೆ ಭೇಟಿ ನೀಡಿದ ವೇಳೆ ಹೈಕಮಾಂಡ್‌ನೊಂದಿಗೆ ಏನು ಚರ್ಚೆ ಮಾಡಿದ್ದಾರೆಂಬುದು ನನಗೆ ಗೊತ್ತಿಲ್ಲ. ಉಪ ಚುನಾವಣೆ ಫಲಿತಾಂಶದಿಂದ ಪಕ್ಷ ಬಲಗೊಂಡಿದ್ದು, ಅದನ್ನು ಮತ್ತಷ್ಟು ಬಲಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News