×
Ad

ಮೇಲ್ಮನೆ ಸದಸ್ಯೆ ವಿಮಲಾಗೌಡ ನಿಧನ

Update: 2017-04-17 22:29 IST

ಬೆಂಗಳೂರು, ಎ.17: ವಿಧಾನ ಪರಿಷತ್ ಸದಸ್ಯೆ ಹಾಗೂ ಮೇಲ್ಮನೆ ಮಾಜಿ ಉಪ ಸಭಾಪತಿ ವಿಮಲಾಗೌಡ (63) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.

ಉಸಿರಾಟ, ಹೃದ್ರೋಗ ಸಮಸ್ಯೆ ಮತ್ತು ಮೆದುಳಿನ ತೊಂದರೆಯಿಂದ ಬಳಲುತ್ತಿದ್ದ ವಿಮಲಾ ಗೌಡ, ಮೂರು ತಿಂಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪತಿ ವೆಂಕಟೇಶ್, ಇಬ್ಬರು ಗಂಡು ಮಕ್ಕಳು, ಅಪಾರ ಸಂಖ್ಯೆ ಬಂಧು-ಮಿತ್ರರು ಹಾಗೂ ಅಭಿಮಾನಿಗಳನ್ನು ವಿಮಲಾಗೌಡ  ಅಗಲಿದ್ದಾರೆ.

1955ರ ನವೆಂಬರ್ 20ರಂದು ನಾಗಮಂಗಲ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ಅವರು, ಬೆಂಗಳೂರಿನಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ. 1980ರಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಗೊಂಡಿದ್ದ ವಿಮಲಾ ಗೌಡ, 1983 ಮತ್ತು 1990ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಬಿಜೆಪಿಯಲ್ಲಿ ದೀರ್ಘ ಕಾಲ ಕೆಲಸ ಮಾಡಿದ್ದ ವಿಮಲಾಗೌಡ, ವಿಧಾನ ಪರಿಷತ್ ಸದಸ್ಯರಾಗಿ, 2011ರಿಂದ 2014ರ ವರೆಗೆ ಮೇಲ್ಮನೆ ಉಪ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದು, ಅವರು ಮೂರನೆ ಮಹಿಳಾ ಉಪ ಸಭಾಪತಿ ಎಂಬುದು ಅವರ ಹೆಗ್ಗಳಿಕೆ.

ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದ ವಿಮಲಾಗೌಡ ಅವರ ಪಾರ್ಥಿವ ಶರೀರವನ್ನು ಎ.19ರಂದು 9:30ಕ್ಕೆ ಮನೆಗೆ ತಂದು, ನಂತರ ಮಧ್ಯಾಹ್ನ 3:30ಕ್ಕೆ ನಗರದ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ: ವಿಮಲಾಗೌಡರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮಂತ್ರಿಗಳಾದ ಆರ್.ಅಶೋಕ್, ಸುರೇಶ್‌ಕುಮಾರ್, ವಿ.ಸೋಮಣ್ಣ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News