2 ತಿಂಗಳ ಹಿಂದಿನ ಮನವಿಯನ್ನು ಸ್ಮರಿಸಿದ ಸಿಎಂ: ಜಿಲ್ಲಾಧಿಕಾರಿ ಕಕ್ಕಾಬಿಕ್ಕಿ!
ಬೆಂಗಳೂರು, ಎ.18: ಎರಡು ತಿಂಗಳ ಹಿಂದೆ ಜನತಾದರ್ಶನದಲ್ಲಿ ಸಾರ್ವಜನಿಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ನಡೆಸಲಾದ ವಿಡಿಯೋ ಸಂವಾದದ ವೇಳೆ ಸ್ಮರಿಸಿಕೊಂಡು ಈ ಸಂಬಂಧ ಜಿಲ್ಲಾಧಿಕಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ ಪ್ರಸಂಗ ಜರಗಿತು.
ರಸ್ತೆ ಅಪಘಾತದಲ್ಲಿ 175 ಕುರಿಗಳು ಸಾವಿಗೀಡಾಗಿದ್ದು, ಇದಕ್ಕೆ ಪರಿಹಾರ ನೀಡಬೇಕು ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಲಂಬಾಣಿ ಸಮುದಾಯದ ವ್ಯಕ್ತಿಯೊಬ್ಬರು ಎರಡು ತಿಂಗಳ ಹಿಂದೆ ಜನತಾದರ್ಶನದಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದರು. ಬರ ಪರಿಸ್ಥಿತಿ ಮತ್ತು ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ವೀಡಿಯೋ ಸಂವಾದ ನಡೆಸುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ನೆನಪು ಮಾಡಿಕೊಂಡರು.
ಕುರಿಗಳನ್ನು ಕಳೆದುಕೊಂಡಿರುವವರಿಗೆ ಪರಿಹಾರ ನೀಡುವ ವಿಷಯ ಏನಾಯಿತು ಎಂದು ಮುಖ್ಯಮಂತ್ರಿ ಪ್ರಶ್ನಿಸಿದಾಗ ದಾವಣಗೆರೆ ಜಿಲ್ಲಾಧಿಕಾರಿ ಕ್ಷಣಕಾಲ ಕಕ್ಕಾಬಿಕ್ಕಿಯಾದರು. ಜನತಾದರ್ಶನ ಮೂಲಕ ಬಂದಿರುವ ಅರ್ಜಿ ಜಿಲ್ಲಾಧಿಕಾರಿ ಕಚೇರಿಗೆ ರವಾನೆಯಾಗಿದೆ. ಇನ್ನೂ ಪರಿಹಾರ ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಪರಿಹಾರ ಬಿಡುಗಡೆಗೆ ಕೂಡಲೇ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಮತ್ತು ಪಶು ಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಖತ್ರಿಗೆ ಮುಖ್ಯಮಂತ್ರಿ ಆದೇಶ ನೀಡಿದರು.