ರಾಸಲೀಲೆ ಪ್ರಕರಣ: ಮಾಜಿ ಸಚಿವ ಮೇಟಿಗೆ ಕ್ಲೀನ್‌ಚಿಟ್?
ಬೆಂಗಳೂರು, ಎ.18: ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧದ ರಾಸಲೀಲೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಬಹುತೇಕ ಪೂರ್ಣಗೊಳಿಸಿದ್ದು, ಅವರಿಗೆ ಕ್ಲೀನ್‌ಚಿಟ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸೇರಿದಂತೆ ಯಾರೊಬ್ಬರೂ ಮೇಟಿ ವಿರುದ್ಧ ದೂರು ದಾಖಲಿಸದೆ ಇರುವುದರಿಂದ ಅವರಿಗೆ ಕ್ಲೀನ್‌ಚಿಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ತನಿಖಾಧಿಕಾರಿಗಳು ಸಿದ್ಧಪಡಿಸಿರುವ ವರದಿಯನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ, ಆನಂತರ ಸರಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮೇಟಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷಾಧಾರಗಳು ತನಿಖೆ ವೇಳೆ ದೊರೆತಿಲ್ಲ. ಅಲ್ಲದೆ, ವಿಚಾರಣೆ ಸಂದರ್ಭದಲ್ಲೂ ಅಂತಹ ಯಾವುದೆ ಅಂಶಗಳು ಬೆಳಕಿಗೆ ಬಾರದೆ ಇರುವ ಹಿನ್ನೆಲೆಯಲ್ಲಿ ಮೇಟಿಗೆ ಕ್ಲೀನ್‌ಚಿಟ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸರಕಾರದ ವಿರುದ್ಧ ಶೆಟ್ಟರ್ ವಾಗ್ದಾಳಿ
ರಾಸಲೀಲೆ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿಗೆ ಕ್ಲೀನ್‌ಚಿಟ್ ಸಿಗಲಿದೆ ಎಂದು ಮೊದಲಿನಿಂದಲೂ ನಮಗೆ ಅನುಮಾನವಿತ್ತು. ಸಚಿವ ಕೆ.ಜೆ.ಜಾರ್ಜ್ ಪ್ರಕರಣದಲ್ಲಿಯೂ ಇದೇ ರೀತಿಯಾಗಿತ್ತು. ಆರೋಪಿಗಳ ವಿರುದ್ಧ ಕೇವಲ ಹೆಸರಿಗೆ ಮಾತ್ರ ತನಿಖೆ ನಡೆಸುವ ಸರಕಾರ ಇದಾಗಿದೆ. ಎಸಿಬಿ ಹಾಗೂ ಸಿಐಡಿ ನೆಪಮಾತ್ರಕ್ಕೆ ತನಿಖೆಯ ಜವಾಬ್ದಾರಿಯನ್ನು ಹೊತ್ತಿರುತ್ತವೆ. ತನಿಖಾ ಹಂತದಲ್ಲಿಯೆ ಮೇಟಿ ಅವರನ್ನು ಆರೋಪ ಮುಕ್ತ ಮಾಡಲಾಗಿದೆ ಎಂದರು.