ಅಂಬೇಡ್ಕರ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ: ಆಂಜನೇಯ
ಬೆಂಗಳೂರು, ಎ.18: ರಾಜ್ಯ ಸರಕಾರ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳವನ್ನು ಜು.21ರಿಂದ 23ರವರೆಗೆ ಜಿಕೆವಿಕೆಯಲ್ಲಿ ಆಯೋಜಿಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಅಂತಾರಾಷ್ಟ್ರೀಯ ಸಮ್ಮೇಳನ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ತತ್ವಗಳು ವಿಶ್ವಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ತತ್ವಜ್ಞಾನಿಗಳು, ರಾಜಕೀಯ ಚಿಂತಕರು, ಸಾಹಿತಿಗಳು ಹಾಗೂ ಹೋರಾಟಗಾರರ ಭಾಗವಹಿಸುತ್ತಾರೆ. ದೇಶದ ಹಾಗೂ ರಾಜ್ಯದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಅವರು ಹೇಳಿದರು.
125 ಅಂಬೇಡ್ಕರ್ ವಸತಿ ಶಾಲೆ: ಮುಂದಿನ ಜೂನ್‌ನಿಂದಲೇ ಪ್ರತೀ ಹೋಬಳಿ ಮಟ್ಟದಲ್ಲಿ 125 ಅಂಬೇಡ್ಕರ್ ವಸತಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ. ಹಾಗೂ ವಸತಿ ಹೀನರಿಗೆ ಅಂಬೇಡ್ಕರ್ ನಿವಾಸ್ ಯೋಜನೆಯಡಿ ವಸತಿ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಅಂಬೇಡ್ಕರ್ ಕುರಿತು ಸಿನಿಮಾ: ಮಹಾರಾಷ್ಟ್ರದಲ್ಲಿ ಜಬ್ಬರ್ ಪಟೇಲ್ ನಿರ್ದೇಶನದಲ್ಲಿ ಅಂಬೇಡ್ಕರ್ ಕುರಿತು ಸಿನಿಮಾ ತಯಾರಾಗಿದೆ. ಅದನ್ನು ಕನ್ನಡಕ್ಕೆ ಡಬ್ ಮಾಡಲಾಗುವುದು. ಹಾಗೂ ಕನ್ನಡದಲ್ಲೇ ಹೊಸ ರೀತಿಯಲ್ಲಿ ಅಂಬೇಡ್ಕರ್ ಕುರಿತು ಸಿನಿಮಾ ತಯಾರಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಜೊತೆ ಚರ್ಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.