×
Ad

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇಡ: ಎಚ್.ಎಸ್.ದೊರೆಸ್ವಾಮಿ

Update: 2017-04-18 23:48 IST

ಬೆಂಗಳೂರು,ಎ.18: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ಪಕ್ಷಗಳ ಮಾದರಿಯ ಚುನಾವಣೆ ಬದಲಾಗಿ, ನೇರ ಆಯ್ಕೆ ವಿಧಾನ ಅನುಸರಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಕಸಾಪದಲ್ಲಿ ಅವ್ವ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ರಚಿಸಿರುವ "ವರ್ತಮಾನ" ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಕಸಾಪ ಅಧ್ಯಕ್ಷ ಸ್ಥಾನವನ್ನು ಮಾರುಕಟ್ಟೆಯ ವಸ್ತುವನ್ನಾಗಿಸಿಕೊಂಡಿದ್ದಾರೆ. ಕಸಾಪ ಅಧ್ಯಕ್ಷಗಿರಿಯ ಸ್ಥಾನದ ಚುನಾವಣೆಯಲ್ಲಿ ಅನೇಕ ಅಕ್ರಮಗಳು ನಡೆಯುತ್ತಿವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರಿಗೆ ಹಣವನ್ನು ಹಂಚುತ್ತಿದ್ದಾರೆ. ಹಣದ ಬಲದಿಂದ ಗೆದ್ದು ಬಂದವರಿಂದ ಕನ್ನಡದ ರಕ್ಷಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ಬದಲಾಗಿ ನೇರವಾಗಿ ಆಯ್ಕೆ ಮಾಡುವ ವಿಧಾನವನ್ನು ಬಳಸಿಕೊಳ್ಳಬೇಕು. ಕಸಾಪದ ಜಿಲ್ಲಾಧ್ಯಕ್ಷರು, ಸದಸ್ಯರೆಲ್ಲರೂ ಒಂದು ಕಡೆ ಸೇರಿ ಅರ್ಹತೆವುಳ್ಳವರನ್ನು ನೇರವಾಗಿ ನೇಮಕ ಮಾಡಬೇಕು. ಈ ಕುರಿತು ನಿಕಟ ಪೂರ್ವ ಅಧ್ಯಕ್ಷರು, ಸಾಹಿತಿಗಳು ಒಂದು ಕಡೆ ಸೇರಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಮತ್ತು ಅನಿವಾರ್ಯ ಎಂದು ಸಲಹೆ ನೀಡಿದರು.

ಪ್ರತ್ಯೇಕ ನೀತಿ ರೂಪಿಸಲಿ: ಎಲ್ಲ ರಾಜ್ಯಗಳಲ್ಲೂ ಖಾಸಗಿ ಸಂಸ್ಥೆಯ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೊದಲು ಪ್ರಾತಿನಿಧ್ಯ ನೀಡಬೇಕು. ಸ್ಥಳೀಯರಲ್ಲಿ ಅರ್ಹತೆಯನ್ನು ಪರಿಗಣಿಸಿ ಉದ್ಯೋಗಕ್ಕೆ ನೇಮಕ ಮಾಡುವಂತ ಪ್ರತ್ಯೇಕ ನೀತಿಯೊಂದನ್ನು ರೂಪಿಸಬೇಕಿದೆ. ಒಂದು ವೇಳೆ ಯೋಗ್ಯರು ಇಲ್ಲವಾದಲ್ಲಿ ಬೇರೆಯವರನ್ನು ನೇಮಕ ಮಾಡಿಕೊಳ್ಳಲ್ಲಿ. ಅದಕ್ಕೇನು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ಹಿರಿಯ ಸಾಹಿತಿ ಡಾ.ವಿಜಯಾ ಸುಬ್ಬರಾಜ್, ಕವಿ ಬಾಗೂರು ಮಾರ್ಕಂಡೇಯ, ಲೇಖಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ಸೇರಿದಂತೆ ಇತರರು ಇದ್ದರು.

ಬಳಿಗಾರ್ ಉತ್ತರ
ಕಸಾಪ ಚುನಾವಣಾ ಸ್ವರೂಪದ ಬಗ್ಗೆ ದೊರೆಸ್ವಾಮಿಯವರು ಆಡಿದ ಮಾತು ವೇದಿಕೆಯ ಮೇಲಿದ್ದ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ತಾಗಿದ್ದು ಸ್ಪಷ್ಟವಾಗಿತ್ತು. ಅವರ ಅಸಮಾಧಾನಕ್ಕೆ ಉತ್ತರಿಸಿದ ಬಳಿಗಾರ್, ಕಸಾಪ ಚುನಾವಣೆ ಆದಷ್ಟೂ ನ್ಯಾಯಸಮ್ಮತವಾಗಿಯೇ ನಡೆದಿದೆ. ಪರಿಷತ್‌ನ ಮತದಾರರು ಜಾತಿ ಲೆಕ್ಕಾಚಾರಗಳನ್ನು ಮೀರಿ, ಪ್ರಬುದ್ಧತೆಯಿಂದ ವರ್ತಿಸಿಕೊಂಡು ಬಂದಿದ್ದಾರೆ. ಇಲ್ಲದಿದ್ದರೆ ನಿಜವಾದ ಸಾಹಿತ್ಯಾಸಕ್ತರು ಇದರ ಚುಕ್ಕಾಣಿ ಹಿಡಿಯುವುದು ಸಾಧ್ಯವಿರಲಿಲ್ಲ. ಆದರೂ ಅಲ್ಲಲ್ಲಿ ಲೋಪಗಳಿವೆ ಎನ್ನುವುದು ಕೂಡ ನಿಜ ಎಂದರು.

ಈ ಹಂತದಲ್ಲಿ ಎದ್ದು ನಿಂತ ಸಭಿಕರೊಬ್ಬರು "ಸ್ವಾಮಿ, ಹೋದ ಸಲ ಬೆಂಗಳೂರು ನಗರ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಏನ್ ನಡೀತು ಹೇಳಿ?" ಎಂದು ದನಿ ಏರಿಸಿದರು. ಆಗಲೂ ಬಳಿಗಾರ್ ಅವರು "ಈಗಾಗಲೇ ಹೇಳಿರುವಂತೆ ಕಸಾಪ ಚುನಾವಣೆಯಲ್ಲಿ ಅಲ್ಲಲ್ಲಿ ಲೋಪಗಳಾಗಿವೆ ಎನ್ನುವುದು ನಿಜ. ಅದನ್ನೆಲ್ಲ ಸರಿಪಡಿಸುವ ಕೆಲಸ ಆಗಬೇಕಾಗಿರುವುದು ವಾಸ್ತವ" ಎಂದು ಹೇಳುವ ಮೂಲಕ ಸಮಾಧಾನ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News