ಹುಲಿ ಸಂರಕ್ಷಣಾ ಅಭಿಯಾನದಿಂದ ಮಾನವ-ವನ್ಯಜೀವಿ ನಡುವಿನ ಸಂಘರ್ಷ ತಿಳಿಗೊಳ್ಳಬಹುದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಎ.19: ವನ್ಯಜೀವಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ‘ಹುಲಿ ಸಂರಕ್ಷಣಾ ಅಭಿಯಾನ’ ಸಹಕಾರಿಯಾಗಲಿದ್ದು, ಈ ಅಭಿಯಾನದ ಮೂಲಕ ವನ್ಯಜೀವಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ತಿಳಿಗೊಳಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸುವರ್ಣ ವಾಹಿನಿ ಮತ್ತು ಕನ್ನಡಪ್ರಭ ದಿನ ಪತ್ರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಹುಲಿ ಸಂರಕ್ಷಣಾ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಎ.24ರಿಂದ ಅಭಿಯಾನ ಆರಂಭ: ರಾಜ್ಯದ ಅರಣ್ಯ ಪ್ರದೇಶದ ಎಲ್ಲ ಶಾಲಾ ಕಾಲೇಜುಗಳಲ್ಲಿ ಅಭಿಯಾನ ನಡೆಯಲಿದ್ದು, ಈ ಅಭಿಯಾನ ಎ. 24 ಮತ್ತು 25ರಂದು ಬಂಡೀಪುರ ಅಭಯಾರಣ್ಯದಲ್ಲಿ ಆರಂಭವಾಗಲಿದೆ. ಅರಣ್ಯ ಸಚಿವ ರಮಾನಾಥ ರೈ ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆ 2017ನೆ ವರ್ಷವನ್ನು ವನ್ಯಜೀವಿಗಳ ವರ್ಷವೆಂದು ಈಗಾಗಲೇ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿಯಾನದಡಿ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು.
ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಹುಲಿಗಳಿರುವ ರಾಜ್ಯ ಎನ್ನುವ ಕೀರ್ತಿ ಕರ್ನಾಟಕದ್ದು. ಹುಲಿಗಳನ್ನು ಸಂರಕ್ಷಿಸುವ ಜೊತೆಗೆ ಆನೆಗಳನ್ನು ಸಂರಕ್ಷಿಸಲು ಹೆಚ್ಚಿನ ಗಮನ ಹರಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ವಿವರಿಸಿದರು.
ಅಭಿಯಾನದ ರಾಯಭಾರಿ ನಟ ಪ್ರಕಾಶ್ ರೈ ಮಾತನಾಡಿ, ಮೊದಲು ಮನುಷ್ಯರು ವನ್ಯಜೀವಿಗಳ ಜೊತೆ ಕೂಡಿ ಬಾಳುತ್ತಿದ್ದರು. ಕಾಲ ಕ್ರಮೇಣ ವನ್ಯಜೀವಿಗಳಿಂದ ದೂರ ಸರಿದ ಮಾನವನಲ್ಲಿ ದ್ವೇಷ, ಹಿಂಸೆಯ ಗುಣಗಳು ಹೆಚ್ಚಾಗಿವೆ. ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷವನ್ನು ಕಡಿಮೆಗೊಳಿಸಲು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಐಡಿಯಾ ಟು ಪಿಒಸಿ ಯೋಜನೆಯಡಿ ಆಯ್ಕೆಯಾದ ಪ್ರವಾಸೋದ್ಯಮ ವಲಯದ ಫಲಾನುಭವಿಗಳಿಗೆ ಅನುದಾನದ ಚೆಕ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಅರಣ್ಯ ಸಚಿವ ಬಿ. ರಮಾನಾಥ ರೈ, ಪ್ರಿಯಾಂಕ ಖರ್ಗೆ, ನಟಿ ಭಾವನಾ, ಪರ್ತಕರ್ತ ರವಿ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.