ರಾಜ್ ಪ್ರಶಸ್ತಿಗೆ ಲಕ್ಷ್ಮಿದೇವಿ, ಕಣಗಾಲ್ ಪ್ರಶಸ್ತಿಗೆ ಕೆ.ವಿ.ರಾಜು, ವಿಷ್ಣುವರ್ಧನ್ ಪ್ರಶಸ್ತಿಗೆ ಚಿನ್ನಪ್ಪ ಆಯ್ಕೆ

Update: 2017-04-19 15:04 GMT

ಬೆಂಗಳೂರು, ಎ. 19: ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ನಟಿ ಆದವಾನಿ ಲಕ್ಷ್ಮಿದೇವಿ "ಡಾ.ರಾಜ್‌ಕುಮಾರ್ ಪ್ರಶಸ್ತಿಗೆ", ನಿರ್ದೇಶಕ ಕೆ.ವಿ. ರಾಜು "ಪುಟ್ಟಣ್ಣ ಕಣಗಾಲ್ ಪ್ರಶಸ್ತಿ" ಹಾಗೂ ಕಲಾವಿದ ಕೆ.ಚಿನ್ನಪ್ಪ "ಡಾ.ವಿಷ್ಣುವರ್ಧನ್ ಪ್ರಶಸ್ತಿ"ಗೆ ಆಯ್ಕೆಯಾಗಿದ್ದಾರೆ.

ಮೇಲ್ಕಂಡ ಪ್ರಶಸ್ತಿಗಳು ತಲಾ 2ಲಕ್ಷ ರೂ., ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮೂರು ಪ್ರಶಸ್ತಿಗಳ ಆಯ್ಕೆಗೆ ಹಿರಿಯ ನಟಿ ಜಯಂತಿ ಅವರ ಅಧ್ಯಕ್ಷತೆಯ ಸಮಿತಿ ಮೇಲ್ಕಂಡವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ನೆನಪಿನ ಮುತ್ತಿನಹಾರ ಪುಸ್ತಕ (ಅಂಕಿತ ಪುಸ್ತಕ) ಆಯ್ಕೆಯಾಗಿದೆ. ಲೇಖಕ ಹಾಗೂ ಪ್ರಕಾಶಕರಿಗೆ ತಲಾ 20 ಸಾವಿರ ರೂ. ಹಾಗೂ ಬೆಳ್ಳಿ ಪದಕ ನೀಡಲಾಗುವುದು. ಅಲ್ಲದೆ, ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಬೆಂಗಳೂರಿನ ಬಾನ್ ಬಯಲು ಚಿತ್ರ ಸಂಸ್ಥೆಯ ನಿರ್ಮಾಣದ "ಅನಲ" ಕಿರುಚಿತ್ರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿರ್ಮಾಪಕರಿಗೆ 50 ಸಾವಿರ ರೂ.ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಆದವಾನಿ ಲಕ್ಷ್ಮಿದೇವಿ: ಚಿತ್ರರಂಗದ ಹಿರಿಯ ಚಲನಚಿತ್ರ ಕಲಾವಿದೆ ಆದವಾನಿ ಲಕ್ಷ್ಮಿದೇವಿ ಬಳ್ಳಾರಿ ಜಿಲ್ಲೆಯ ಆದವಾನಿಯವರು. ಇವರು ಏಳನೆ ವಯಸ್ಸಿಗೆ ಬಣ್ಣ ಹಚ್ಚಿಕೊಂಡು ರಂಗಭೂಮಿಗೆ ಕಾಲಿಟ್ಟರು. ಮೊದಲಿಗೆ ಆದವಾನಿಯ ಹವ್ಯಾಸ ರಂಗಭೂಮಿಯಲ್ಲಿ ನಂತರ ಗುಬ್ಬಿ ಕಂಪೆನಿಯಲ್ಲಿ ಅಭಿನಯಿಸಿ ಅನುಭವ ಗಳಿಸಿದರು. 1956ರಲ್ಲಿ ಡಾ.ರಾಜ್ ಅವರೊಂದಿಗೆ ಭಕ್ತ ವಿಜಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಶುಕ್ರದೆಸೆ, ಮನೆತುಂಬಿದ ಹೆಣ್ಣು , ಮಂಗಳಸೂತ್ರ, ದಶಾವತಾರ, ಕಲಿತರೂ ಹೆಣ್ಣೆ, ಶ್ರೀರಾಮಾಂಜನೇಯ ಯುದ್ಧ, ವೀರ ಸಂಕಲ್ಪಚಿತ್ರಗಳಲ್ಲಿ ರಾಜ್ ಮತ್ತು ಇತರರಿಗೆ ನಾಯಕಿಯಾಗಿ ಅಭಿನಯಿಸಿ, ಅಪಾರ ಜನಪ್ರಿಯತೆ ಗಳಿಸಿದರು, ತೇಜಸ್ವಿನಿ, ಚಂದವಳ್ಳಿಯ ತೋಟ, ಕರುಣೆಯೆ ಕುಟುಂಬದ ಕಣ್ಣು ಚಿತ್ರಗಳಲ್ಲಿ ಉಪ ನಾಯಕಿಯಾಗಿ ನಟಿಸಿದರು. ರಾಜ್ ಅವರೊಂದಿಗೆ 31ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕೆ.ವಿ.ರಾಜು: ಚಿತ್ರಸಾಹಿತಿ, ನಿರ್ದೇಶಕ ಕೆ.ವಿ.ರಾಜು ಮೈಸೂರು ಪ್ರೀಮಿಯರ್ ಸ್ಟುಡಿಯೋದಲ್ಲಿ ಸಂಕಲನ ಕಲಿಯುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಹ ನಿರ್ದೇಶನ ಹಾಗೂ ಚಿತ್ರ ಸಾಹಿತ್ಯ ರಚನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. 1979ರಲ್ಲಿ ತಮ್ಮ ಅಣ್ಣ ಕೆ.ವಿ.ಜಯರಾಂ ನಿರ್ದೇಶನದ ಮೊದಲ ಚಿತ್ರ ಮರಳು ಸರಪಳಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾದರು. ಈವರೆಗೆ 38 ಚಲನಚಿತ್ರಗಳನ್ನು ನಿರ್ದೇಶನ ಮಾಡಿರುವ ಇವರು ಚಲನಚಿತ್ರದಲ್ಲಿ ತಾಂತ್ರಿಕತೆ ಮತ್ತು ಪದವೈಭವಕ್ಕೆ ಒತ್ತು ನೀಡಿ ಗಮನ ಸೆಳೆದಿದ್ದಾರೆ. ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ರಚಿಸಿದ್ದಾರೆ.
1987ರಲ್ಲಿ ಬಿಡುಗಡೆಯಾದ ಬಂಧಮುಕ್ತ ಚಿತ್ರದ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಗುರುತಿಸಿಕೊಂಡರು.ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಎಲ್ಲವೂ ಅವರದ್ದೆ ಆಗಿತ್ತು. ನಂತರ ಅವರ ಸಂಗ್ರಾಮ(1987), ನವಭಾರತ(1988), ಇಂದ್ರಜಿತ್(1989), ಅಭಿಜಿತ್, ಯುದ್ಧಕಾಂಡ, ನವಭಾರತ, ಕದನ, ಸುಂದರ ಕಾಂಡ, ಬೆಳ್ಳಿಮೋಡಗಳು, ಬೆಳ್ಳಿಕಾಲುಂಗುರ, ಓ ಗಂಡಸರೇ ನೀವೆಷ್ಟು ಒಳ್ಳೆಯವರು, ಯುದ್ಧ, ಹುಲಿಯಾ, ನಂ.1, ಹೀಗೆ 38 ಚಿತ್ರಗಳ ನಿರ್ದೇಶಕರಾದರು.

ಬ್ಯಾನರ್ ಕಲಾವಿದ ಚಿನ್ನಪ್ಪ: ಚಿತ್ರರಂಗದ ಕೇಂದ್ರ ಸ್ಥಳವಾದ ಗಾಂಧಿನಗರದಲ್ಲಿ ಕೆ. ಚಿನ್ನಪ್ಪರ ಹೆಸರು ಚಿರಪರಿಚಿತ. ಯಾವುದೇ ಸಿನಿಮಾಕ್ಕೆ ಕಟೌಟ್ ಬೇಕೆಂದರೆ ಎಲ್ಲರೂ ನೋಡುವುದು ಚಿನ್ನಪ್ಪರ ರಾಜ್‌ಕಮಲ್ ಆರ್ಟ್ಸ್ ಕಡೆಗೆ. ಇದರ ಮಾಲಕ ಕೆ.ಚಿನ್ನಪ್ಪನವರಿಗೆ ಈಗ 81ರ ಇಳಿ ವಯಸ್ಸು. ಈಗಲೂ ಸಿನಿಮಾಗಳ ಕಟೌಟ್ ನಿರ್ಮಾಣದಲ್ಲಿ ಇವರು ಕಾರ್ಯನಿರತರಾಗಿದ್ದಾರೆ. 

ಕನಕಪುರದ ಕೋಡಳ್ಳಿಯ ಬೇಸಾಯ ಕುಟುಂಬದಲ್ಲಿ ಜನಿಸಿದ ಚಿನ್ನಪ್ಪ, ತಮ್ಮ ತಾತನವರಿಂದ ಚಿತ್ರಕಲೆ ಕಲಿತರು. ನಂತರ ಎಸ್.ಕೆ.ಸೀನು ಆರ್ಟ್ಸ್‌ನಲ್ಲಿ ಬ್ಯಾನರ್ ಬರೆಯುವ ಕೆಲಸಕ್ಕೆ ಸೇರಿಕೊಂಡರು. ತಮ್ಮ ವಿಶೇಷ ಚಿತ್ರಕಲಾ ಶೈಲಿಯಿಂದ ಆರಂಭದಿಂದಲೆ ಅವರು ಚಿತ್ರರಂಗದಲ್ಲಿ ಗಮನ ಸೆಳೆದರು. ರಾಜ್‌ಕುಮಾರ್‌ರವರ ಆರಂಭಿಕ ಚಿತ್ರ ಬೇಡರ ಕಣ್ಣಪ್ಪಚಿತ್ರಕ್ಕೂ ಇವರು ಬ್ಯಾನರ್ ಬರೆದಿದ್ದಾರೆ.

1972ರಲ್ಲಿ ಸ್ವತಂತ್ರವಾಗಿ ರಾಜ್‌ಕಮಲ್ ಆರ್ಟ್ಸ್ ಎನ್ನುವ ಹೆಸರಿನ ಸಂಸ್ಥೆ ಆರಂಭಿಸಿದರು. ಮೂರುವರೆ ವಜ್ರಗಳು ಸಿನಿಮಾಕ್ಕೆ ಪ್ರಚಾರ ಸಾಮಗ್ರಿ ರಚಿಸುವ ಮೂಲಕ ಅವರು ಸ್ವಂತ ಉದ್ಯಮಿಯಾದರು. ಈವರೆಗೆ ಕನ್ನಡ, ತೆಲಗು, ತಮಿಳು, ಮಲೆಯಾಳಿ, ಹಿಂದಿ, ಇಂಗ್ಲಿಷ್ ಹೀಗೆ ಬಹುಭಾಷೆಯ ಸುಮಾರು 4,500ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಇವರು ಬ್ಯಾನರ್, ಕಟೌಟ್ ನಿರ್ಮಿಸಿ ಕೊಟ್ಟಿದ್ದಾರೆ. ಇವರ ವೃತ್ತಿ ಜೀವನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿನಿಮಾ ಪ್ರಚಾರ ಸಂಬಂಧಿ ಚಿತ್ರಕೃತಿಗಳನ್ನು ರಚಿಸಿರುವುದು ಇವರ ಹೆಗ್ಗಳಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News