×
Ad

‘ಬಾಕಿ ಹಣ ಕೇಳಿದ್ದಕ್ಕೆ’ ದಲಿತ ಕಾರ್ಮಿಕರ ಮೇಲೆ ಹಲ್ಲೆ ಆರೋಪ: ದೂರು

Update: 2017-04-19 20:40 IST

ಬೆಂಗಳೂರು, ಎ.19: ಬಾಕಿ ಹಣ ಕೇಳಿದ್ದಕ್ಕೆ ದಲಿತ ಸಮುದಾಯದ ಮಹಿಳಾ ಪೌರ ಕಾರ್ಮಿಕರಿಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೀಣ್ಯ ಠಾಣೆಗೆ ದೂರು ನೀಡಲಾಗಿದೆ.

ನಗರದ ವಾರ್ಡ್ ಸಂಖ್ಯೆ 39ರ ಚೊಕ್ಕಸಂದ್ರದಲ್ಲಿ ಕೆಲಸ ಮಾಡುತ್ತಿದ್ದ ಆಂಜಿನಮ್ಮ ಹಾಗೂ ಶಿವಮ್ಮ ಎಂಬವರ ಮೇಲೆ ಹಲ್ಲೆನಡೆದಿದ್ದು, ಗುತ್ತಿಗೆದಾರ ಸುನೀಲ್ ಹಾಗೂ ಕಟ್ಟಡ ನಿರ್ಮಾಣದ ಮೇಸ್ತ್ರಿ ರಂಗನಾಥನ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಘಟನೆ ವಿವರ: ಮೂವತ್ತಕ್ಕೂ ಹೆಚ್ಚು ದಿನಗಳಿಂದ ಚೊಕ್ಕಸಂದ್ರ ವಾರ್ಡ್‌ನಲ್ಲಿ 80ಕ್ಕೂ ಹೆಚ್ಚು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ, ಗುತ್ತಿಗೆದಾರ ಅವರಿಗೆ ಸಂಬಳ ನೀಡಿಲ್ಲ. ಇದರಿಂದ ಅಸಮಾಧಾನಗೊಂಡು ಮಂಗಳವಾರ ಮಧ್ಯಾಹ್ನ ಆಂಜಿನಮ್ಮ ಮತ್ತು ಶಿವಮ್ಮ, ಬಾಕಿ ಹಣ ನೀಡಿ, ಇಲ್ಲದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಇದಕ್ಕೆ ಉತ್ತರಿಸಿದ ಮೇಸ್ತ್ರಿ ರಂಗನಾಥನ್, ಬಾಕಿ ಬರಬೇಕಿದ್ದ ಹಣದ ಬಗ್ಗೆ ನನಗೆ ಮಾಹಿತಿ ಇಲ್ಲ, ನೀವು ಗುತ್ತಿಗೆದಾರನ ಬಳಿ ಮಾತನಾಡಿ, ಈಗ ನಾನು ಹೇಳಿದಷ್ಟು ಕೆಲಸ ಮಾಡಿ ಎಂದಿದ್ದಾರೆ. ಅಲ್ಲದೆ, ಅವಾಚ್ಯ ಪದಗಳಿಂದ ಜಾತಿ ನಿಂದನೆ ಮಾಡಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಸಮೀಪದ ಮರಿಸ್ವಾಮಿಯಪ್ಪ ಪಾರ್ಕ್‌ನಲ್ಲಿ ಕಸಗುಡಿಸುತ್ತಿದ್ದ ವೇಳೆ ಗುತ್ತಿಗೆದಾರ ಸುನೀಲ್ ಅವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಶಿವಮ್ಮ ಅವರ ಕೈಗೆ ಗಾಯಗಳಾಗಿದ್ದು, ಮಲ್ಲೇಶ್ವರಂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News