ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಚಿವ ಸಂಪುಟ ನಿರ್ಧಾರ: ಟಿ.ಬಿ.ಜಯಚಂದ್ರ
ಬೆಂಗಳೂರು, ಎ.19: ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ವಲಯಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ.ಕೆ.ಕಸ್ತೂರಿ ರಂಗನ್ ನೀಡಿರುವ ವರದಿಯನ್ನು ತಿರಸ್ಕರಿಸಲು ರಾಜ್ಯದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಜನವಸತಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಪ್ರದೇಶವನ್ನು ಅರಣ್ಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನಗಳಾಗಿ ಸಂರಕ್ಷಿಸಲಾಗುತ್ತಿದೆ. ಆದುದರಿಂದ, ಕಸ್ತೂರಿ ರಂಗನ್ ವರದಿ ಹಾಗೂ ಅದರಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸದಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ವಿಧಾನಮಂಡಲದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಅಲ್ಲದೆ, ಆ ಭಾಗದ ಶಾಸಕರ ಜೊತೆಯೂ ಸಭೆ ನಡೆಸಿ ವಿಸ್ತಾರವಾಗಿ ಚರ್ಚಿಸಲಾಗಿತ್ತು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಈಗಾಗಲೆ ಸಾಕಷ್ಟು ಭೂಮಿಯನ್ನು ನಾವು ಬಿಟ್ಟಿದ್ದೇವೆ. ಈಗ ಹೆಚ್ಚುವರಿಯಾಗಿ ಬೇರೆ ಏನನ್ನೂ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಬಂದಿತ್ತು ಎಂದು ಜಯಚಂದ್ರ ತಿಳಿಸಿದರು.
ಸಚಿವ ಸಂಪುಟ ಉಪ ಸಮಿತಿಯಲ್ಲೂ ಈ ವಿಚಾರ ಚರ್ಚೆಗೆ ಬಂದು ನಾವು ಕೈಗೊಂಡ ತೀರ್ಮಾನವನ್ನು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪಶ್ಚಿಮಘಟ್ಟಗಳಲ್ಲಿನ ಜನರಿಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಅವರು ಮಾಡಿರುವಂತಹ ತ್ಯಾಗಕ್ಕೆ ಯಾವುದೆ ಪರಿಹಾರ ಸಿಕ್ಕಿಲ್ಲ. ಕಸ್ತೂರಿ ರಂಗನ್ ವರದಿ ಯಂತೆ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದರೆ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಿ ಜನರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಆದ್ದರಿಂದ, ಕೇಂದ್ರ ಸರಕಾರವು ಫೆ.27ರಂದು ಈ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕು. ಕಸ್ತೂರಿ ರಂಗನ್ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಬಾಬಾ ಬುಡಾನ್‌ಗಿರಿ ವಿವಾದ
ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿ ವಿವಾದವನ್ನು ಮೇ 9ರೊಳಗೆ ಬಗೆಹರಿಸುವ ಸಂಬಂಧ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ತನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯಲ್ಲಿ ಗೃಹ, ಮುಜುರಾಯಿ, ವಕ್ಫ್ ಸಚಿವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.