×
Ad

ಅಪಘಾತದಲ್ಲಿ ಪೊಲೀಸ್ ಪೇದೆ ಮೃತ್ಯು

Update: 2017-04-19 22:52 IST

ಕರ್ನೂಲು/ಬೆಂಗಳೂರು, ಎ.19: ಯುವತಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗಾಗಿ ಹೈದರಾಬಾದ್‌ಗೆ ಹೋಗುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ ಎಚ್‌ಎಎಲ್ ಪೊಲೀಸ್ ಠಾಣೆಯ ಪೇದೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಎಚ್‌ಎಎಲ್ ಪೊಲೀಸ್ ಠಾಣೆಯ ಪೇದೆ ಸುರೇಶ್(26) ಮತ್ತು ದೂರುದಾರರ ಸಂಬಂಧಿ ಜಯಣ್ಣ (30) ಎಂಬವರು ಮೃತಪಟ್ಟಿದ್ದು, ಘಟನೆಯಲ್ಲಿ ಎಚ್‌ಎಎಲ್ ಠಾಣೆಯ ಪ್ರೊಬೆಷನರಿ ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್ (28) ಮತ್ತು ಚಾಲಕ ಮಂಜುನಾಥ್ (25) ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಗಿನ ಜಾವ 5:30ರ ಸುಮಾರಿಗೆ ಆಂಧ್ರಪ್ರದೇಶ ರಾಜ್ಯ ಹೆದ್ದಾರಿ 44 ರ, ಕರ್ನೂಲು ಬಳಿಯ ದೋನೆ ಮಂಡಲದ ಒಬಳಾಪುರದಲ್ಲಿ ರಸ್ತೆ ಅಪಘಾತ ನಡೆದಿದೆ. ರಸ್ತೆಯ ಎಡಬದಿಯಲ್ಲಿರುವ ಸುರಕ್ಷಾ ಕಂಬಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಹೆದ್ದಾರಿ ಪಕ್ಕದ ಜಮೀನಿಗೆ ಕಾರು ಉರುಳಿ ಬಿದ್ದಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ಕುಳಿತಿದ್ದ ಎಚ್‌ಎಎಲ್ ಠಾಣೆ ಪೇದೆ ಸುರೇಶ್ ಮತ್ತು ದೂರುದಾರರ ಸಂಬಂಧಿ ಜಯಣ್ಣ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ, ಅಪಘಾತದ ರಭಸಕ್ಕೆ ಜಮೀನಿಗೆ ಉರುಳಿ ಬಿದ್ದಿರುವ ಇನ್ನೊವಾ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಯಾವ ಪ್ರಕರಣ: ಇತ್ತೀಚೆಗೆ ಎಚ್‌ಎಎಲ್ ಠಾಣೆಯಲ್ಲಿ ರೆವೆನ್ಯೂ ಇನ್ಸ್‌ಪೆಕ್ಟರ್ ರಮೇಶ್ ಎಂಬವರ ಮಗಳು ನಾಪತ್ತೆಯಾಗಿದ್ದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಯುವತಿ ಹೈದರಾಬಾದ್‌ನಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಎಚ್‌ಎಎಲ್ ಪೊಲೀಸರು ಮಂಗಳವಾರ ರಾತ್ರಿ ದೂರುದಾರರ ಸಂಬಂಧಿ ವೈಟ್‌ಫೀಲ್ಡ್ ನಿವಾಸಿ ಜಯರಾಮು ಅವರ ಕಾರಿನಲ್ಲಿ ಹೈದರಾಬಾದ್‌ಗೆ ತೆರಳುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News