ಗಾಂಧಿ ದಲಿತ ವಿರೋಧಿಯಲ್ಲ: ದಿನೇಶ್ ಅಮೀನ್ ಮಟ್ಟು
ಅಸ್ಪೃಶ್ಯತೆ ನಿವಾರಣೆ ಮತ್ತು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಗಾಂಧಿ ಮತ್ತು ಅಂಬೇಡ್ಕರ್ ಬಯಸಿದ್ದರು
ಬೆಂಗಳೂರು, ಎ.20: ಬಹುಮುಖ ಆಯಾಮಗಳನ್ನು ಹೊಂದಿದ್ದ ಗಾಂಧಿಯನ್ನು ದಲಿತರು ಸೇರಿದಂತೆ ಎಲ್ಲ ಸಮುದಾಯದವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರನ್ನು ದಲಿತವಿರೋಧಿ ಎಂದು ಕಾಣುತ್ತಾರೆ. ಆದರೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಅವರ ಭಿನ್ನಾಭಿಪ್ರಾಯಗಳ ಮೂಲಕ ಅರಿಯುವ ಬದಲು ಸಹಮತ ಹೊಂದಿದ್ದ ವಿಚಾರಗಳ ಮೂಲಕ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟ ಅಭಿಪ್ರಾಯಿಸಿದ್ದಾರೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಆರೋಗ್ಯಕರ ಸಮಾಜಕ್ಕೆ ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳ ಕೊಡುಗೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಹಿಂದೂ ಸಮಾಜದಲ್ಲಿನ ಅಸ್ಪಶ್ಯತೆ ಮತ್ತು ಅಸಮಾನತೆಯನ್ನು ಗಾಂಧೀಜಿ ತೀಕ್ಷ್ಣವಾಗಿ ವಿರೋಧಿಸುತ್ತಿದ್ದರು. ಪುನರ್ಜನ್ಮವೇನಾದರೂ ಇದ್ದರೆ ದಲಿತನಾಗಿ ಹುಟ್ಟಬೇಕೆಂಬ ಆಸೆ ಇದೆ ಎಂದು ಹೇಳಿದ್ದ ಗಾಂಧೀಜಿಯನ್ನು ದೇಶವಿಭಜಕ, ದಲಿತ ವಿರೋಧಿ ಎನ್ನುವಂತೆ ಬಿಂಬಿಸುವುದು ಸರಿಯಲ್ಲ ಎಂದ ಅವರು, ನಮ್ಮಲ್ಲಿ ಹೆಚ್ಚಿನ ದಲಿತರು ಗಾಂಧೀಜಿಯವರ ಬಗ್ಗೆ ಪೂರ್ವಗ್ರಹ ಹೊಂದಿದ್ದಾರೆ ಎಂದರು.
ಭಾರತದಲ್ಲಿ ಅಂಬೇಡ್ಕರ್‌ರನ್ನು ದಲಿತರಿಗೆ, ಬಸವಣ್ಣರನ್ನು ಲಿಂಗಾಯಿತರಿಗೆ ಹೀಗೆ ನಮ್ಮಲ್ಲಿನ ನಾಯಕರನ್ನು ಒಂದೊಂದು ಜನಾಂಗ ಅಥವಾ ಸಮುದಾಯದ ನಾಯಕರಂತೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಅವರನ್ನೆಲ್ಲ ಪ್ರಶ್ನಿಸುವುದಾಗಲಿ, ಟೀಕಿಸುವುದಾಗಲಿ ಕಷ್ಟವಾಗಿದೆ. ಆದರೆ, ಯಾರ ಹಿಡಿತಕ್ಕೂ ಸಿಗದ ಗಾಂಧಿ ಬಗ್ಗೆ ಎಂಥದೇ ಟೀಕೆ ಮಾಡಿದರೂ ಯಾರೂ ಬೀದಿಗಿಳಿಯುವುದಿಲ್ಲ. ಇದು ಗಾಂಧೀಜಿಯ ಶಕ್ತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಎಲ್ಲರೂ ನಿಜವಾದ ಪ್ರಜಾಪ್ರಭುತ್ವವಾದಿಗಳು. ಕೇವಲ ಒಬ್ಬರನ್ನು ಮಾತ್ರ ಅಧ್ಯಯನ ಮಾಡಿ ಎಲ್ಲರನ್ನು ವಿರೋಧಿಸುವುದು ಸರಿಯಲ್ಲ. ಎಲ್ಲರನ್ನೂ ಅಧ್ಯಯನ ಮಾಡಬೇಕು. ಆಗ ಮಾತ್ರ ದೇಶದ ಸಂಕೀರ್ಣತೆ ಅರ್ಥವಾಗುತ್ತದೆ. ಅಸ್ಪೃಶ್ಯತೆಯ ನಿವಾರಣೆ ಮತ್ತು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಬಯಸಿದ್ದರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ಇಂದಿಗೂ ದೇಶದ ಒಂದು ಬೀದಿಗೆ ಅಂಬೇಡ್ಕರ್ ಹೆಸರನ್ನು ಇಡುವುದು ಸುಲಭವಾಗಿಲ್ಲ. ದಲಿತ ವರ್ಗದ ಕೆಲಸಗಳೆಲ್ಲವೂ ಹೋರಾಟದ ಮೂಲಕವೇ ಆಗಬೇಕಾಗಿದೆ. ಮಾನವೀಯ ನೆಲೆಯ ಮೇಲೆ ಭಾರತವನ್ನು ಕಟ್ಟಬೇಕೆನ್ನುವ ಅವರ ಕನಸನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷ ವೂಡೆ ಕೃಷ್ಣ, ದಲಿತ ಮುಖಂಡರಾದ ರುದ್ರಪ್ಪ ಹನಗವಾಡಿ, ಇಂದಿರಾ ಕೃಷ್ಣಪ್ಪ, ಮಂಗ್ಳೂರ ವಿಜಯ, ಪ್ರೊ.ಶಿವರಾಜು ಮುಂತಾದವರು ಉಪಸ್ಥಿತರಿದ್ದರು.