×
Ad

ಬಾಬರಿ ಮಸೀದಿ ಧ್ವಂಸ ಪ್ರಕರಣ: ಮೋದಿ ದೇಶದ ಜನತೆಯ ಕ್ಷಮೆಯಾಚಿಸಲಿ: ಉಗ್ರಪ್ಪ ಆಗ್ರಹ

Update: 2017-04-20 20:35 IST

ಬೆಂಗಳೂರು, ಎ. 20: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಎಲ್.ಕೆ. ಅಡ್ವಾಣಿ ಸೇರಿದಂತೆ 13 ಮಂದಿ ವಿರುದ್ಧದ ಒಳಸಂಚು ಆರೋಪದ ವಿಚಾರಣೆ ಮುಂದುವರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ಮೋದಿ ದೇಶದ ಜನತೆ ಕ್ಷಮೆಯಾಚಿಸಬೇಕು ಎಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ 2 ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಕೋರ್ಟ್ ಆದೇಶಿಸಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರ ಎಲ್ಲ ರೀತಿಯ ಅಗತ್ಯ ನೆರವು ನೀಡಬೇಕೆಂದು ಒತ್ತಾಯಿಸಿದರು.

ಸಂಘ ಪರಿವಾರವೇ ಹೊಣೆ: ಬಾಬರಿ ಮಸೀದಿ ಧ್ವಂಸ ಪ್ರಕರಣದ ಒಳಸಂಚಿಗೆ ಕೇವಲ ಅಡ್ವಾಣಿ, ಜೋಷಿ, ಉಮಾಭಾರತಿ ಸೇರಿದಂತೆ 13 ಮಂದಿ ನಾಯಕರು ಹಾಗೂ ಕರಸೇವಕರು ಕಾರಣವಲ್ಲ. ಈ ಕೃತ್ಯಕ್ಕೆ ಬಿಜೆಪಿ. ವಿಶ್ವಹಿಂದೂ ಪರಿಷತ್, ಆರೆಸೆಸ್ಸ್ ಮತ್ತು ಸಂಘಪರಿವಾರವೂ ಹೊಣೆ ಎಂದು ಉಗ್ರಪ್ಪ ಟೀಕಿಸಿದರು

ಬಾಬರಿ ಮಸೀದಿ ಪುರಾತನ, ರಾಷ್ಟ್ರೀಯ ಸ್ಮಾರಕ. ಅದನ್ನು ಧ್ವಂಸಗೊಳಿಸಲಾಗಿದ್ದು, ಸಂವಿಧಾನದ ಮೇಲೆ ಪ್ರಮಾಣ ಮಾಡಿದವರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ದೂರಿದ ಅವರು, ‘ತಾನು ಬಲಿದಾನಕ್ಕೂ ಸಿದ್ಧ’ ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿಕೆ ಸಲ್ಲ. ಇದರ ಹಿಂದೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹುನ್ನಾರವಿದೆ ಎಂದು ಕಿಡಿಕಾರಿದರು.

ಕಾಶ್ಮೀರ ಸ್ವಾಯತ್ತತೆ, ಗೋಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ ಮತ್ತು ರಾಮಜನ್ಮಭೂಮಿ ವಿವಾದಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಅಧಿಕಾರಕ್ಕಾಗಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗೌರವವಿದ್ದರೆ ಕೂಡಲೆ ಉಭಯ ನಾಯಕರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಉಗ್ರಪ್ಪ, ವಿವಾದಿತ ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಸ್ಥಳ ಸಮಾಜದಲ್ಲಿ ಸಾಮರಸ್ಯ ಬೆಸೆಯುವ ಕೇಂದ್ರಗಳಾಗಬೇಕೆ ಹೊರತು ಸಂಘರ್ಷದ ತಾಣಗಳಾಗಬಾರದೆಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News