ರಾಜ್ಯದ ಶಿಕ್ಷಣ ವ್ಯವಸ್ಥೆ ನೋಡಿದರೆ ಸಂಕಟವಾಗುತ್ತದೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2017-04-20 17:21 GMT

ಬೆಂಗಳೂರು, ಎ.20: ಕರ್ನಾಟಕದ ಕೆಲ ಖಾಸಗಿ ಶಾಲೆಗಳಲ್ಲಿ ಇಂದಿಗೂ ಕನ್ನಡ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುತ್ತಿದ್ದಾರೆ. ರಾಜ್ಯದ ಶಿಕ್ಷಣ ವ್ಯವಸ್ಥೆ ನೋಡಿದರೆ ಸಂಕಟವಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ನಗರದ ಎಸ್‌ಸಿಎಂಐ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಹಮ್ಮಿಕೊಂಡಿದ್ದ, ಎರಡು ದಿನಗಳ ಶೈಕ್ಷಣಿಕ ಸಮಾಲೋಚನಾ ಮತ್ತು ಸಂಘಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ನೋಡುತ್ತಿದ್ದರೆ ಸಂಕಟದ ವಾತಾವರಣ ಸೃಷ್ಟಿಯಾಗಿದೆ. ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಖಾಸಗಿ ಶಾಲೆಗಳು "ಹೊರಗೆ ಶೃಂಗಾರ ಒಳಗೆ ಗೋಣಿ ಸೊಪ್ಪುಇದ್ದಂತೆ ಇವೆ" ಎಂದು ಹೇಳಿದ ಅವರು, ಇಂದಿಗೂ ಸಹ ಕೆಲ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಮಾತನಾಡಿದರೆ, ದಂಡ ಹಾಕುವ ಪದ್ಧತಿಯೇ ಇದೆ ಎಂದು ಹೇಳಿದರು.

ಸರಕಾರಿ ಶಾಲೆಗಳ ಶಿಕ್ಷಕರು ಗುಣಾತ್ಮಕತೆಯುಳ್ಳವರು. ಆದರೆ ಖಾಸಗಿ ಶಾಲೆಗಳ ಶಿಕ್ಷಕರು ಯಾವುದೇ ಗುಣಾತ್ಮಕ ಕಲಿಕೆಗೆ ಬೇಕಾದ ತರಬೇತಿಗಳನ್ನು ಹೊಂದಿಲ್ಲ. ಆದರೂ ಜನ ಅಲ್ಲಿಗೆ ಮುಗಿಬೀಳುತ್ತಿದ್ದಾರೆ. ಅಲ್ಲದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹೋಗಿ ಉಳ್ಳವರಿಗೆ ಶಿಕ್ಷಣ ಎಂಬಂತಾಗಿದೆ. ಶಿಕ್ಷಣ ನೀತಿ ಎಡವಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಂತದಲ್ಲಿ ಎಂದು ಸಿದ್ದರಾಮಯ್ಯ ನುಡಿದರು.

ಮಗು ಮತ್ತು ಕಾನೂನು ಕೇಂದ್ರದ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಎಸ್‌ಡಿಎಂಸಿಗಳು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಒಂದೂವರೆ ದಶಕಗಳಿಂದ ಮೂಲವಾರಸುದಾರರ ಜೊತೆ ಕೆಲಸ ಮಾಡುತ್ತಾ ಬಂದಿವೆೆ. ಈ ಎಲ್ಲ ಪ್ರಯತ್ನಗಳ ನಡುವೆಯೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದರು.

ಅಂಕಿ ಅಂಶ: 2010-11 ನೆ ಸಾಲಿನಲ್ಲಿ 1 ರಿಂದ 8 ನೆ ತರಗತಿ 45,687 ಸರಕಾರಿ ಶಾಲೆಗಳಿದ್ದವು. ಆದರೆ, 2015-16 ನೆ ಸಾಲಿಗೆ ಇವುಗಳ ಸಂಖ್ಯೆ 44,101ಕ್ಕೆ ಇಳಿದಿದೆ. ಅಂದರೆ, 1576 ಸರಕಾರಿ ಶಾಲೆಗಳು ಮುಚ್ಚಿವೆ. ಅದೇ ರೀತಿ, 2010-11 ನೆ ಸಾಲಿನಲ್ಲಿದ್ದ ಖಾಸಗಿ ಅನುದಾನರಹಿತ ಶಾಲೆಗಳ ಸಂಖ್ಯೆ 10,252 ಯಿಂದ 2015-16 ನೆ ಸಾಲಿಗೆ 12,891ಕ್ಕೆ ಏರಿದೆ. ಅಂದರೆ, 2639 ಶಾಲೆಗಳು ಹೆಚ್ಚಾಗಿವೆ ಎಂದು ಡಾ.ವಿ.ಪಿ.ನಿರಂಜನಾರಾಧ್ಯ ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಸಮ ಸಮಾಜ ನಿರ್ಮಾಣ ಗೆಳೆಯರ ಬಳಗದ ಅಧ್ಯಕ್ಷ ಗಂಗಾಧರ್, ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎಂ.ದಿನೇಶ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News