ಬೆಲೆ ನೀಡಿ, ಇಲ್ಲದಿದ್ದಲ್ಲಿ ವಿದ್ಯುತ್ ಕಂಬ ಕತ್ತರಿಸುತ್ತೇವೆ: ವಿದ್ಯುತ್ ಇಲಾಖೆಗೆ ರೈತ ಸಂಘ ಎಚ್ಚರಿಕೆ

Update: 2017-04-20 17:26 GMT

ಬೆಂಗಳೂರು, ಎ.20: ಪವರ್ ಗ್ರಿಡ್ ನಿರ್ಮಾಣ ಮಾಡಲು ಆಕ್ರಮಿಸಿಕೊಂಡಿರುವ ರೈತರ ಭೂಮಿಗೆ ನ್ಯಾಯಾಲಯದ ಆದೇಶದಂತೆ ಸೂಕ್ತ ಬೆಲೆ ನಿಗದಿಪಡಿಸಿ ಕೂಡಲೇ ಪರಿಹಾರ ನೀಡದಿದ್ದರೆ, ರೈತರ ಜಮೀನಿನಲ್ಲಿರುವ ವಿದ್ಯುತ್ ಕಂಬ ಕತ್ತರಿಸುತ್ತೇವೆ ಎಂದು ರೈತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ಎಚ್ಚರಿಸಿದ್ದಾರೆ.

ಗುರುವಾರ ವಿವಿಧ ರೈತಪರ ಸಂಘಟನೆಗಳು ನಗರದ ಯಲಹಂಕದ ಸಿಂಗನಾಯಕನಹಳ್ಳಿಯ ಪವರ್ ಗ್ರಿಡ್ ಕೇಂದ್ರದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಭಾಗಗಳಲ್ಲಿ ಪವರ್ ಗ್ರಿಡ್ ಹಾದುಹೋಗಿದ್ದು, ಈ ಭಾಗದ ರೈತರಿಗೆ ಸೂಕ್ತ ಪರಿಹಾರ ಸಿಗದೆ, ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದರು.

ಪವರ್ ಗ್ರಿಡ್ ನಿರ್ಮಾಣ ವೆಚ್ಚದಲ್ಲಿ ಶೇ.52 ರಷ್ಟು ರೈತರಿಗೆ ಪರಿಹಾರ ನೀಡಬಹುದಾಗಿದ್ದು, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಕ್ಕೆ 9 ಕೋಟಿ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಮಾರುಕಟ್ಟೆ ಬೆಲೆಯಲ್ಲಿ ಪವರ್ ಗ್ರಿಡ್ ಲೈನ್‌ಗೆ ಶೇ. 55, ಪವರ್ ನಿರ್ಮಾಣಕ್ಕೆ ಶೇ.100 ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬರಗಾಲದಿಂದ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಧ್ಯೆ ಪ್ರವೇಶಿಸಿ ಪರಿಹಾರ ನೀಡದಿದ್ದಲ್ಲಿ ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರಕಾರ ಹಾಗೂ ಪವರ್ ಗ್ರಿಡ್‌ನ ಅಧಿಕಾರಿಗಳು ನೇರ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಪಿಳ್ಳಮುನಿಶಾಮಪ್ಪ, ರೈತ ಮುಖಂಡರಾದ ವಿರೂಪಾಕ್ಷ, ಚನ್ನಳ್ಳಿ ರಾಜಣ್ಣ, ನಾರಾಯಣ ರೆಡ್ಡಿ, ಸುಲೋಚನ, ಶ್ರೀನಿವಾಸ್ ತರಿದಾಳ್, ಕಡತಣಮಲೆ ಸತೀಶ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News