ಬೆಂಗಳೂರು ಮ್ಯಾನ್ ಹೋಲ್ ದುರಂತ: ಬೈಯಪ್ಪನಹಳ್ಳಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

Update: 2017-04-20 17:31 GMT

ಬೆಂಗಳೂರು, ಎ.20: ಮ್ಯಾನ್‌ಹೋಲ್ ದುರಂತದಲ್ಲಿ ಮೂವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಕೋರಿ ರಾಮ್ಕಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂ.ಡಿ.ಅಲ್ಲಾ ಅಯೋಧ್ಯಾ ರಾಮಿರೆಡ್ಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ, ಬೈಯಪ್ಪನಹಳ್ಳಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ನಮ್ಮ ಕಕ್ಷಿದಾರರಾದ ಎಂ.ಡಿ.ಅಲ್ಲಾ ಅಯೋಧ್ಯಾ ರಾಮಿರೆಡ್ಡಿ ಅವರು ಮುಖ್ಯ ಗುತ್ತಿಗೆದಾರರಾಗಿದ್ದು, ಮ್ಯಾನ್‌ಹೋಲ್ ದುರಸ್ತಿ ಗುತ್ತಿಗೆಯನ್ನು ಉಪ ಗುತ್ತಿಗೆದಾರರಿಗೆ ನೀಡಿದ್ದರು. ಹೀಗಾಗಿ, ಈ ದುರಂತಕ್ಕೆ ಸಹಗುತ್ತಿಗೆದಾರರು ಹಾಗೂ ಕಾರ್ಮಿಕರೇ ಕಾರಣರಾಗಿದ್ದಾರೆ.  ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಎಂ.ಡಿ.ಅಲ್ಲಾ ಅಯೋಧ್ಯಾ ರಾಮಿರೆಡ್ಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಮಧ್ಯಂತರ ತಡೆ ನೀಡಿದೆ.

ಪ್ರಕರಣವೇನು: ಮಾರ್ಚ್ 7ರ ಮಧ್ಯರಾತ್ರಿ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿನ ಮ್ಯಾನ್‌ಹೋಲ್ ದುರಸ್ತಿ ಮಾಡಲು ಒಳಗೆ ಹೋಗಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಸರಿಯಾದ ಕ್ರಮ ಮತ್ತು ಪೌರ ಕಾರ್ಮಿಕರ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರಕಾರದ ವಿರುದ್ಧ ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಸಾರ್ವಜನಿಕರ ವಿರೋಧದ ಬಳಿಕ ಎಚ್ಚೆತ್ತಿದ್ದ ಸರಕಾರ ಪ್ರಕರಣದ ತನಿಖೆಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News