ಇಂಜಿನಿಯರ್ ಆಗಿದ್ದಾಗ ರೂ.24 ಲಕ್ಷ ವಾರ್ಷಿಕ ವೇತನ ಪಡೆಯುತ್ತಿದ್ದ ಈತ ಈಗ ರೈತನಾಗಿ ರೂ 2 ಕೋಟಿ ಆದಾಯ ಗಳಿಸುತ್ತಿದ್ದಾರೆ

Update: 2017-04-21 10:01 GMT

ಹೊಸದಿಲ್ಲಿ,ಎ.21 : ನಾಲ್ಕು ವರ್ಷದ ಹಿಂದೆ ಸಚಿನ್ ಕಾಳೆ ಎಂಬ ಪ್ರತಿಭಾನ್ವಿತ ಇಂಜಿನಿಯರಿಂಗ್ ಪದವೀಧರ ಗುರ್ಗಾಂವ್ ಇಲ್ಲಿನ ಪುಂಜ್ ಲಾಯ್ಡಿ ಎಂಬ ಪ್ರತಿಷ್ಠಿತ ಕಂಪೆನಿಯಲ್ಲಿ ವಾರ್ಷಿಕ ರೂ 24 ಲಕ್ಷ ವೇತನ ನೀಡುತ್ತಿದ್ದ ಮ್ಯಾನೇಜರ್ ಹುದ್ದೆಯನ್ನು ತ್ಯಜಿಸಿ ತನ್ನ ಹುಟ್ಟೂರು ಮೇಧಪರ ಎಂಬಲ್ಲಿಗೆ ಹಿಂದಿರುಗಿ ರೈತನಾಗಲು ನಿರ್ಧರಿಸಿದ್ದರು.

ನಂಬಲಸಾಧ್ಯವಾದ ರೀತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯಾಚರಿಸಿರುವ ಸಚಿನ್ ಇದೀಗ ವಾರ್ಷಿಕ ರೂ 2 ಕೋಟಿ ಸಂಪಾದಿಸುತ್ತಿದ್ದಾರೆಂದು ಹೇಳಿದರೆ ನಂಬಲೇ ಬೇಕು.

ಛತ್ತೀಸಗಢದ ಬಿಲಾಸಪುರ ಜಿಲ್ಲೆಯಲ್ಲಿರುವ ಮೇಧಪರ್ ಗ್ರಾಮದಲ್ಲಿದ್ದ ಅವರ ಅಜ್ಜ ವಸಂತ್ ರಾವ್ ಕಾಳೆ ಅವರೇ ಸಚಿನ್ ಅವರ ಈ ಸಾಧನೆಗೆ ಸ್ಫೂರ್ತಿ. ಸರಕಾರಿ ಉದ್ಯೋಗಿಯಾಗಿದ್ದ ವಸಂತ್ ಅವರು ನಿವೃತ್ತಿಯಾದ ನಂತರ ಕೃಷಿ ಮುಂದುವರಿಸಿಕೊಂಡು ಹೋಗಬೇಕೆಂದು ನಿರ್ಧರಿಸಿದ್ದರೂ ಈ ಕ್ಷೇತ್ರದಲ್ಲಿರುವ ಎಡರುತೊಡರುಗಳು ಅವರನ್ನು ಧೃತಿಗೆಡಿಸಿದ್ದವು ಆದರೆ ತನ್ನ ಮೊಮ್ಮಗ ಸಚಿನ್ ಬಳಿ ಯಾವತ್ತೂ ಕೃಷಿ ಬಗ್ಗೆ ಮಾತನಾಡಿ ಆತನಲ್ಲಿ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಕಾರಣರಾಗಿದ್ದರು. ಆದರೆ ಎಲ್ಲ ಹೆತ್ತವರಂತೆಯೇ ಸಚಿನ್ ಹೆತ್ತವರೂ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದರು. ಅವರ ಇಚ್ಛೆಯಂತೆಯೇ ಸಚಿನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ನಾಗ್ಪುರದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿ ನಂತರ ಎಂಬಿಎ ಹಾಗೂ ಕಾನೂನು ಪದವಿಯನ್ನೂ ಪಡೆದರು. 2007ರಲ್ಲಿ ಅವರು ಡೆವಲಪ್ಮೆಂಟಲ್ ಇಕನಾಮಿಕ್ಸ್ ನಲ್ಲಿ ಪಿಎಚ್‌ಡಿ ಮಾಡುತ್ತಿರುವಾಗ ಉದ್ಯಮಶೀಲರಾಗುವ ಆಸೆ ಟಿಸಿಲೊಡೆದಿತ್ತು. ಊರಿನಲ್ಲಿರುವ 24 ಎಕರೆ ಆಸ್ತಿಯಲ್ಲಿ ಕೃಷಿ ಮಾಡಬೇಕೆಂಬ ತಮ್ಮ ಅಜ್ಜನ ಕನಸನ್ನು ನನಸಾಗಿಸಲು ತಮ್ಮ ನೌಕರಿ ತೊರೆದು ಬಂದ ಅವರು ಹಿಂದಿರುಗಿ ನೋಡುವ ಪ್ರಶ್ನೆಯೇ ಎದುರಾಗಲಿಲ್ಲ.

ತಮ್ಮ 15 ವರ್ಷಗಳ ಪ್ರಾವಿಡೆಂಟ್ ಫಂಡ್ ಹಣವನ್ನು ಸಂಪೂರ್ಣವಾಗಿ ತೊಡಗಿಸಿದ ಅವರು ಮಾದರಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದೆ ಗುತ್ತಿಗೆ ಕೃಷಿ ಪದ್ಧತಿಯನ್ನು ಆರಂಭಿಸಿದರು. 201ರಲ್ಲಿ ತಮ್ಮ ಸ್ವಂತ ಕಂಪೆನಿ ಇನ್ನೊವೇಟಿವ್ ಅಗ್ರಿಲೈಫ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದ ಅವರು ಈ ಮೂಲಕ ರೈತರಿಗೆ ಗುತ್ತಿಗೆ ಮಾದರಿ ಕೃಷಿ ನಡೆಸಲು ಸಹಕರಿಸಿದರು. ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಬಿಲಾಸಪುರ್ ಕೃಷಿ ಕಾಲೇಜಿನ ತಜ್ಞರನ್ನೂ ಕರೆಸಿ ಮಾಹಿತಿ ನೀಡಿದರು. ಹೀಗೆ 200 ಎಕರೆ ಭೂಮಿಯಲ್ಲಿ ಗುತ್ತಿಗೆ ಮಾದರಿ ಕೃಷಿಯನ್ನು 137 ರೈತರು ನಡೆಸುತ್ತಿದ್ದು ಸಚಿನ್ ಅವರ ಕಂಪೆನಿಯ ವಾರ್ಷಿಕ ವಹಿವಾಟು ರೂ 2 ಕೋಟಿಯಷ್ಟಿದೆ. ಈ ಪದ್ಧತಿಯನುಸಾರ ಖರೀದಿದಾರನ ಇಚ್ಛೆಯಂತೆಯೇ ಆತ ನೀಡಿದ ಹಣದಿಂದಲೇ ಕೃಷಿ ನಡೆಸುವ ರೈತ ಬೆಳೆಯನ್ನು ಮೊದಲೇ ನಿರ್ಧರಿಸಿದ ಬೆಲೆಗೆ ಆತನಿಗೆ ಮಾರುತ್ತಾನೆ ಹಾಗೂ ಲಾಭದಲ್ಲಿ ತನ್ನ ಪಾಲನ್ನು ಪಡೆಯುತ್ತಾನೆ.

ಅತ್ತ ತಮ್ಮ ಕುಟುಂಬದ ಒಡೆತನದಲ್ಲಿರುವ 24 ಎಕರೆ ಭೂಮಿಯಲ್ಲಿ ಭತ್ತ ಮತ್ತು ಇತರ ತರಕಾರಿ ಕೃಷಿಯನ್ನು ಸಚಿನ್ ನಡೆಸುತ್ತಾರೆ. ಸಚಿನ್ ಅವರ ಪತ್ನಿ ಕಲ್ಯಾಣಿ ಸಮೂಹ ಮಾಧ್ಯಮದಲ್ಲಿ ಸ್ನಾತ್ತಕೋತ್ತರ ಪದವೀಧರೆಯಾಗಿದ್ದು, ಕಂಪೆನಿಯ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತಾರೆ.

ಕೃಪೆ : thebetterindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News