ಮಕ್ಕಳ ಬೆಳವಣಿಗೆಯಲ್ಲಿ ಎಡರು ತೊಡರುಗಳು

Update: 2017-04-21 14:05 GMT

ಸಣ್ಣ ಮಕ್ಕಳನ್ನು ಸರಿಯಾಗಿ ಗಮನಿಸದೇ ಹೋದ ಪಕ್ಷದಲ್ಲಿ ಆಟಿಸಂ, ಅತಿಚುರುಕು, ಕಲಿಕೆಯಲ್ಲಿ ಸಮಸ್ಯೆ ಅಥವಾ ಇಂದ್ರಿಯಗಳಿಂದ ಪ್ರತಿಕ್ರಿಯಿಸುವಂತೆ ಉಂಟಾಗುವ ಸಮಸ್ಯೆಗಳು ಯಾವುದಾದರೂ ಬರಬಹುದು. ಇವುಗಳನ್ನು ಗುರುತಿಸಿ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆಯ ಕ್ರಮ ತೆಗೆದುಕೊಂಡರೆ ಖಂಡಿತ ಸರಿಪಡಿಸಬಹುದು.

ಶಿಶುತಜ್ಞ ಮತ್ತು ಪ್ಲೇ ಹೋಂ ನಿರ್ವಾಹಕರ ಹೊಣೆಗಾರಿಕೆ

ಸಣ್ಣ ಮಕ್ಕಳ ತಂದೆ ತಾಯಿಯರು ತಮ್ಮ ಮಗುವಿನ ಪ್ರಾರಂಭಿಕ ಹಂತಗಳನ್ನು ಅದೆಷ್ಟು ಗಮನಿಸಬೇಕೋ ಅಷ್ಟೇ ಜವಾಬ್ದಾರಿಯನ್ನು ಮಕ್ಕಳ ವೈದ್ಯರೂ ಮತ್ತು ಅಂಗನವಾಡಿ ಅಥವಾ ಪ್ಲೇ ಹೋಂ ನಿರ್ವಾಹಕರೂ ಕೂಡಾ ಹೊರಬೇಕಾಗುತ್ತದೆ.

ಶಿಶುವಿನ ಮೊದಲ ಏಳು ವರ್ಷಗಳು ಬಹಳ ಮುಖ್ಯವಾದದ್ದು ಹಾಗೂ ಮೆದುಳು ಮತ್ತು ಶರೀರ ಬಹಳ ಗಮನೀಯವಾಗಿ ರಚನೆಗೊಳ್ಳುವ ಸಮಯ ಅದು. ತಂದೆ ಮತ್ತು ತಾಯಿಯರೇ ಮೊದಲಾಗಿ ಮಗುವಿನ ಕುಟುಂಬದ ಸದಸ್ಯರು ಗಮನಿಸದೇ ಹೋಗುವಂತಹ ಲಕ್ಷಣಗಳನ್ನು ಅಥವಾ ಸಂಕೇತಗಳನ್ನು ಶಿಶುತಜ್ಞರು ಮತ್ತು ಬಾಲಪಾಠ ಹೇಳಿಕೊಡುವಂತವರು ಗುರುತಿಸದೇ ಹೋದರೆ ಮಗುವು ಎಷ್ಟೋ ಸಮಸ್ಯೆಗೆ ಒಳಗಾಗುತ್ತದೆ.

ಮಗುವಿಗೆ ಜ್ವರ ಅಥವಾ ಇನ್ನೇನಾದರೂ ಕಾಣುವಂತಹ ಹಾಗೂ ಕಾಡುವಂತಹ ಸಮಸ್ಯೆ ಬಂದಾಗ ಮಾತ್ರ ವೈದ್ಯರ ಬಳಿಗೆ ಹೋಗುವುದಲ್ಲ. ನಿಯಮಿತವಾಗಿ ಮತ್ತು ನಿಗದಿತವಾಗಿ ಮಗುವನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಲ್ಲದೇ, ವೈದ್ಯರು ಮಗುವಿನ ಸಹಜ ವರ್ತನೆಯಲ್ಲಿ ಮತ್ತು ಪೋಷಕರ ಪಾಲನೆಯ ಅವಧಿ ಯಲ್ಲಿ ಗಮನಿಸಬೇಕಾಗಿರುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಉತ್ತರಗಳು ಸಮರ್ಪಕವಾಗಿದ್ದರೆ, ಸಮಂಜಸವಾಗಿದ್ದರೆ ಸರಿ. ಇಲ್ಲವೆಂದರೆ ವೈದ್ಯರು ವಿಶೇಷ ಪರೀಕ್ಷೆಗಳನ್ನು ನಡೆಸಿ ಮಕ್ಕಳನ್ನು ಗಮನಿಸಿ ಏನಾದರೂ ಎಡರುತೊಡರುಗಳಿದ್ದರೆ ಗಮನಕ್ಕೆ ತರುತ್ತಾರೆ ಮತ್ತು ಚಿಕಿತ್ಸೆಗೆ ಪ್ರಾರಂಭಿಸುತ್ತಾರೆ.

ಹಾಗೆಯೇ ಇವುಗಳನ್ನು ಗುರುತಿಸುವಂತಹ ತರಬೇತಿ ಅಂಗನವಾಡಿ ಅಥವಾ ಪ್ಲೇ ಹೋಂ ನಿರ್ವಾಹಕರಿಗೂ ತಿಳಿದಿರಬೇಕು. ಬಹಳಷ್ಟು ಅಂಗನವಾಡಿಗಳಲ್ಲಿ ಮಕ್ಕಳಿಗೆ ಏನೋ ಒಂದಿಷ್ಟು ತಿನ್ನಿಸಿ, ಆಟವಾಡಿಸಿಕೊಂಡು, ಸಾಮಾನ್ಯ ಆರೋಗ್ಯದ ಮುಂಜಾಗರೂಕತೆಯ ಕ್ರಮದ ಬಗ್ಗೆ ತಿಳಿಸಿ, ಕಾಲಕಾಲಕ್ಕೆ ಹಾಕಬೇಕಾದ ಚುಚ್ಚುಮದ್ದಿನ ಬಗ್ಗೆ ತಿಳಿಸಿಬಿಡುವುದಷ್ಟೇ ಕೆಲಸವಲ್ಲ.

ತಮ್ಮ ನಿರ್ವಹಣೆಯಲ್ಲಿರುವ ಒಂದೊಂದು ಮಗುವನ್ನು ಒಂದೊಂದಾಗಿಯೇ ಗುರುತಿಸಬೇಕು. ಆ ಗಳು ಅವರಿಗೆ ತಿಳಿದಿರುವಷ್ಟು ಮತ್ತು ಗುರುತಿಸುವಷ್ಟು ಕಲಿಕೆ ಮತ್ತು ತರಬೇತಿ ಇರಬೇಕು. ಮಗುವು ಸಹಜವಾಗಿದೆಯೇ ಇಲ್ಲವೇ, ಏನಾದರೂ ಜೈವಿಕ, ಮಾನಸಿಕ, ನರ ಸಂಬಂಧಿತ ಸಮಸ್ಯೆಗಳಿವೆಯೇ ಇಲ್ಲವೇ ಎಂದು ನೋಡುವಂತಹ ಸಹಜ ಮಾನದಂಡ

ಪ್ರತಿಷ್ಠಿತ ಮತ್ತು ಹೆಸರಾಂತ ಕೆಲವು ಪ್ಲೇ ಹೋಂಗಳಲ್ಲಿ ಇದರ ಸೂಕ್ತ ತರಬೇತಿ ಯನ್ನು ನೀಡಿರುತ್ತಾರೆ. ಆದರೆ ಅಂಗನವಾಡಿಗಳಲ್ಲಿ ಇಂತಹ ತರಬೇತಿಗಳ ಕೊರತೆ ಕಾಣುತ್ತದೆ.

ಮಗುವಿನ ಸಾಧಾರಣವಾದ ಬೆಳವಣಿಗೆಯ ಹಂತಗಳಾದ ಬೋರಲು ಬೀಳುವುದು, ತೆವಳುವುದು, ಅಂಬೆಗಾಲಿಡುವುದು, ಎದ್ದು ನಿಲ್ಲುವುದು, ಆಧಾರ ಹಿಡಿದುಕೊಂಡು ನಡೆಯುವುದು; ಈ ರೀತಿಯ ಸಹಜ ಹಂತಗಳಿಗೂ ಮೀರಿ ಹಲವು ವಿಷಯಗಳನ್ನು ಮಕ್ಕಳಲ್ಲಿ ಸೂಕ್ಷ್ಮತೆಯಿಂದ ಗಮನಿಸಬೇಕಾಗುತ್ತದೆ. ಒಂದು ವೇಳೆ ಗಮನಿಸದೇ ಹೋದ ಪಕ್ಷದಲ್ಲಿ ಮಗುವು ಆಟಿಸಂ ಅಥವಾ ಇನ್ನಿತರ ಸಮಸ್ಯೆಗಳಿಗೆ ಒಳಗಾಗಿರುವುದನ್ನು ಗುರುತಿಸದೇ ಹೋಗುತ್ತಾರೆ.

ಎಷ್ಟೋ ಬಾರಿ ಶಿಶುತಜ್ಞರು ಮತ್ತು ಪ್ಲೇ ಹೋಂ ನಿರ್ವಾಹಕರೂ ಸೂಕ್ಷ್ಮಮತಿ ಗಳಲ್ಲದೇ ಹೋಗಿಬಿಟ್ಟರೆ ಮಗುವಿನ ಸುಸ್ಯೆಗಳು ಬೆಳಕಿಗೇ ಬರುವುದಿಲ್ಲ.

ಏಳು ವರ್ಷದೊಳಗೆಯೇ ಗುರುತಿಸಬಹುದಾದ ಆಟಿಸಂ, ಎಡಿಎಚ್‌ಡಿ (ಅಟೆಂಶನ್ ಡಿಫಿಸಿಟ್ ಹೈಪರ್ಯಾಕ್ಟಿವಿಟಿ ಡಿಸಾರ್ಡರ್ ಅಂದರೆ ಮಗುವು ತನ್ನದೇ ಕ್ರಿಯೆಗಳ ಮೇಲೆ ಗಮನ ಕೊಡಲಾಗದೇ ಇರುವಷ್ಟು ಅತಿಶಯವಾಗಿ ಚಟುವಟಿಕೆ ಅಥವಾ ಚುರುಕಿನಿಂದಿರುವಂತಹ ಸಮಸ್ಯೆ) ಮತ್ತು ಹೇಳಿಕೊಡುವುದನ್ನು ಕಲಿಯದೇ ಇರುವಂತಹ ಸಮಸ್ಯೆಗಳು ತಲೆದೋರಬಹುದು. ಕೆಲವೊಮ್ಮೆ ಈ ಮೂರರಲ್ಲಿ ಎರಡು ಸಮಸ್ಯೆಗಳು ಒಟ್ಟಿಗೇ ತಲೆದೋರಿದರೂ ಪೋಷಕರು ಅದೊಂದು ರೋಗ ಎಂದುಕೊಳ್ಳುವುದಿಲ್ಲ. ಬದಲಾಗಿ ಮಗುವು ನಿಧಾನವಾಗಿ ಬೆಳೆಯುತ್ತಿದೆ ಎಂದೋ ಅಥವಾ ಚಟುವಟಿಕೆಗಳು ಅತಿಶಯವಾಗಿದ್ದಲ್ಲಿ ತೀಟೆ ಎಂದೋ ಸುಮ್ಮನಿದ್ದುಬಿಡುತ್ತಾರೆ. ಸಾಮಾನ್ಯವಾಗಿ ಮಕ್ಕಳು ದಿನದಿಂದ ದಿನಕ್ಕೆ ಬೆಳೆಯುವಂತವರಾದ್ದರಿಂದ ನೇರ ನೋಟದಿಂದ ಕೆಲವು ಸಮಸ್ಯೆಗಳನ್ನು ಗುರುತಿಸುವುದು ಅಷ್ಟೇನೂ ಸುಲಭವಾಗುವುದಿಲ್ಲ.

ಸಣ್ಣ ಮಕ್ಕಳನ್ನು ಸರಿಯಾಗಿ ಗಮನಿಸದೇ ಹೋದ ಪಕ್ಷದಲ್ಲಿ ಆಟಿಸಂ, ಅತಿಚುರುಕು, ಕಲಿಕೆಯಲ್ಲಿ ಸಮಸ್ಯೆ ಅಥವಾ ಇಂದ್ರಿಯಗಳಿಂದ ಪ್ರತಿಕ್ರಿಯಿಸುವಂತೆ ಉಂಟಾಗುವ ಸಮಸ್ಯೆಗಳ್ಯಾವುದಾದರೂ ಬರಬಹುದು. ಇವುಗಳನ್ನು ಗುರುತಿಸಿ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆಯ ಕ್ರಮ ತೆಗೆದುಕೊಂಡರೆ ಖಂಡಿತ ಸರಿಪಡಿಸಬಹುದು.

ಮನೆಯಲ್ಲಿ ಹಿರಿಯರಿಲ್ಲದಂತಹ ಎಳೆಯ ಅಥವಾ ಮೊದಲ ಯುವ ತಂದೆ ತಾಯಿಗಳಿಗೆ ಮಕ್ಕಳಲ್ಲಿನ ಸಹಜತೆ ಅಥವಾ ಅಸಹಜತೆಯನ್ನು ಗುರುತಿಸಲು ಬರುವುದಿಲ್ಲ. ಮೂರನೆಯ ವ್ಯಕ್ತಿಗಳು ಅದನ್ನು ಗುರುತಿಸಿ ಹೇಳುವಷ್ಟರಲ್ಲಿ ಸಮಸ್ಯೆಗಳು ಉಲ್ಬಣಗೊಂಡಿರಲು ಸಾಧ್ಯವಿರುತ್ತದೆ. ಆದ್ದರಿಂದ ಆಗಷ್ಟೇ ಮೊಟ್ಟಮೊದಲ ಬಾರಿಗೆ ಪೋಷಕರಾಗಿ ಮಕ್ಕಳಿರುವಂತಹ ಯುವ ತಂದೆ ತಾಯಿಯರು ತಮ್ಮಷ್ಟಕ್ಕೇ ತಾವೇ ಇರುವುದಕ್ಕಿಂತ ಅನುಭವೀ ತಂದೆತಾಯಿಗಳ ಅಥವಾ ನುರಿತ ವೈದ್ಯರ ಮಾರ್ಗದರ್ಶನದಲ್ಲಿದ್ದರೆ ಒಳಿತು.

ಆಟಿಸಂ

ಆಟಿಸಂ ಎನ್ನುವುದು ಒಂದು ನರ-ಜೈವಿಕ ದೌರ್ಬಲ್ಯ. ಇದು ಆಟಿಸ್ಟಿಕ್ ಸ್ಪೆಕ್ಟ್ರಮ್ ಡಿಸಾರ್ಡರ್ ಎನ್ನುವುದರ ಒಂದು ಭಾಗ. ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಬೇರೆ ಬೇರೆ ವಿಭಾಗಗಳ ಕೊರತೆ ಅಥವಾ ಸಮಸ್ಯೆಗಳು ತಲೆದೋರುವಂತಹ ಈ ರೋಗಕ್ಕೆ ಕೆಲವು ಲಕ್ಷಣಗಳಿವೆ.

1.ಮಗುವು ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯದೇ ಇರುವಂತೆ ಕಾಣುವುದು.

2.ಭಾಷೆಯನ್ನು ಗ್ರಹಿಸುವುದರಲ್ಲಿ ಮತ್ತು ಅಭಿವ್ಯಕ್ತಿಸುವುದರಲ್ಲಿ ಸಮಸ್ಯೆ ಇರುವುದು.

3.ಕೆಲವು ಚಟುವಟಿಕೆಗಳನ್ನು ಮಾಡದೇ ಇರುವುದು ಅಥವಾ ಕೆಲವೊಂದು ಚಟುವಟಿಕೆಗಳನ್ನು ಪುನರಾವರ್ತಿತವಾಗಿ ಮಾಡುತ್ತಲೇ ಇರುವುದು.

4.ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಇರುವುದು. ಸಮರ್ಥವಾಗಿ ಮುಖ ಕೊಡದೇ ಇರುವುದು.

5.  ಕರೆದಾಗ ನೋಡದೇ ಇರುವುದು.

6.ಹೇಳಿದ್ದನ್ನು ಮಾಡದೇ ಇರುವುದು. ಉದಾಹರಣೆಗೆ, ಮಕ್ಕಳ ಕೈಗೆ ನಮ್ಮ ಬೆರಳು ಕೊಟ್ಟಾಗ ಹಿಡಿದುಕೊಳ್ಳದೇ ಇರುವುದು. ಕೆಲವೊಮ್ಮೆ ಇಂತಹ ಕೆಲವು ಸೂಚನೆಗಳನ್ನು ಗಮನಿಸಿ ಆಟಿಸಂನನ್ನು ಬುದ್ಧಿ ಮಾಂದ್ಯತೆ ಎಂದುಕೊಳ್ಳುವುದುಂಟು. ಆದರೆ ಇದು ಬುದ್ಧಿಮಾಂದ್ಯವಲ್ಲ. ಕೆಲವು ಆಟಿಸಂ ಇರುವ ಮಕ್ಕಳು ಪ್ರಕಾಂಡ ಬುದ್ಧಿವಂತರಾಗಿರುತ್ತಾರೆ. ಕೆಲವರು ಇತರ ಮಕ್ಕಳಂತೆ ಸಾಧಾರಣ ಬುದ್ಧಿಮತ್ತೆಯನ್ನೇ ಹೊಂದಿರುತ್ತಾರೆ. ಕೆಲವು ಆಟಿಸಂ ಇರುವ ಮಕ್ಕಳಲ್ಲಂತೂ ಚಿತ್ರಿಕ-ಸ್ಮರಣೆ (ಪೋಟೋಗ್ರಾಫಿಕ್ ಮೆಮೋರಿ) ಅಂದರೆ ಕಾಣುವ ದೃಶ್ಯ ಮತ್ತು ಚಿತ್ರಗಳನ್ನು ವಿವರಗಳೊಂದಿಗೆ ಸ್ಮರಣೆಯಲ್ಲಿಟ್ಟುಕೊಂಡಿರುತ್ತಾರೆ. ಆದರೆ ಆ ಹೊತ್ತಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಹೋಗಬಹುದು. ಯಾವುದೋ ಒಂದು ಕ್ರಿಯೆಗೆ ತಕ್ಷಣವೇ ಪ್ರತಿಕ್ರಿಯಿಸಲು ಅವರ ನರಮಂಡಲವು ಕೆಲಸ ಮಾಡದೇ ಇರಬಹುದು. ಈ ಆಟಿಸಂ ಮಕ್ಕಳಲ್ಲಿ ಇತರ ಮಕ್ಕಳಲ್ಲಿ ಕಾಣುವ ಜೊಲ್ಲು ಸುರಿಯುವುದು, ಬೋರಲು ಬೀಳುವುದು, ತೆವಳುವುದು, ಅಂಬೆಗಾಲಿಡುವುದು, ನಿಲ್ಲುವುದು; ಈ ರೀತಿಯ ವಿವಿಧ ಹಂತಳು ಸಾಮಾನ್ಯವಾಗಿಯೇ ಇರುವುದು.

ಐಕ್ಯೂ ಪರೀಕ್ಷೆ ಮಾಡಿ ಈ ಮಕ್ಕಳ ಸಾಧಾರಣ ಬುದ್ಧಿಮಟ್ಟವನ್ನು ಕಂಡುಹಿಡಿಯಲು ಆಗುವುದಿಲ್ಲ. ಏಕೆಂದರೆ ಆಟಿಸಂ ಇರುವ ಮಕ್ಕಳು ನೇರಾನೇರ ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸುವುದಿಲ್ಲ. ಸಂಭಾಷಣೆ ಅಥವಾ ಸಂವಹನ ನಡೆಸುವುದಿಲ್ಲ, ನಿರ್ದೇಶನಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಕ್ರಿಯೆಗೆ ತಕ್ಷಣವೇ ಪ್ರತಿಕ್ರಿಯಿಸುವುದಾಗಲಿ, ಸ್ಪಂದಿಸುವುದಾಗಲಿ ಮಾಡುವುದಿಲ್ಲ. ಹಾಗಾಗಿ ಅವರ ನಿಜವಾದ ಅಥವಾ ಇರುವಂತಹ ಬೌದ್ಧಿಕ ಸಾಮರ್ಥ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅವರಿಗೆ ಅದೆಷ್ಟೇ ಬುದ್ಧಿ ಇದ್ದರೂ ಮೆಂಟಲ್ ರಿಟಾರ್ಡೇಶನ್ ಇರುವವರಂತೆ, ಅಂದರೆ ಬುದ್ಧಿಮಾಂದ್ಯರಂತೆ ಕಾಣುತ್ತಾರೆ. ಆದೆ ಅವರು ಖಂಡಿತ ಬುದ್ಧಿಮಾಂದ್ಯರಲ್ಲ.

ಆಟಿಸಂನ ಮಕ್ಕಳ ದುರಂತವೆಂದರೆ ಅವರೆಷ್ಟೇ ಬೌದ್ಧಿಕವಾಗಿ ಸಂಪನ್ನರಾಗಿದ್ದರೂ, ಕೆಲವೊಮ್ಮೆ ಸಾಧಾರಣ ಮಕ್ಕಳಿಗಿಂತ ಬುದ್ಧಿವಂತ ಮತ್ತು ಪ್ರತಿಭಾವಂತರಾಗಿದ್ದರೂ, ಅವರ ನಿಜಜೀವನದಲ್ಲಿ ಮತ್ತು ಸುತ್ತಮುತ್ತಲ ಸಾಮಾಜಿಕ ವಾತಾವರಣದಲ್ಲಿ ಇತರರಂತೆ ಅದನ್ನು ಪ್ರದರ್ಶಿಸಲು ಅಥವಾ ಪ್ರಯೋಗಿಸಲು ಅಸಮರ್ಥರಾ ಗುವುದು. ಹಾಗಾಗಿ ಪೋಷಕರಿಗೆ ಮತ್ತು ಮಗುವಿನ ಬಗ್ಗೆ ಕಾಳಜಿ ಇರುವ ಯಾರೇ ಆದರೂ ಮೊದಲು ಮಾಡಬೇಕಾದ ಕೆಲಸವೆಂದರೆ ವಿವಿಧ ರೀತಿಯ ಪ್ರತಿಭೆೆಗಳ ಕೆಲಸಗಳಿಗೆ ಅವರನ್ನು ತೊಡಗಲು ಬಿಟ್ಟು, ಆ ಮಕ್ಕಳ ನಿಜವಾದ ಪ್ರತಿಭೆ ಮತ್ತು ಸಾಮರ್ಥ್ಯ ಯಾವುದರಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ಈಗ ಡಿಜಿಟಲ್ ತಾಂತ್ರಿಕತೆಯಿಂದಾಗಿ ಆಟಿಸಂ ಅಥವಾ ಸಮಗ್ರ ವ್ಯಕ್ತಿತ್ವ ಬೆಳವಣಿಗೆಯ ದೋಷವುಳ್ಳ ಮಕ್ಕಳಿಗೆ ಅನುಕೂಲಕರವಾಗುವಂತಹ ಬರವಣಿಗೆ ಮತ್ತು ಇತರ ರೀತಿಯಲ್ಲಿ ಅಭಿವ್ಯಕ್ತಗೊಳಿಸುವ ಪರ್ಯಾಯ ವಿಧಾನಗಳನ್ನು ಕಂಡುಹಿಡಿದಿದ್ದಾರೆ. ಆಟಿಸಂನ ಸಮಸ್ಯೆ ಇರುವ ಮಕ್ಕಳಲ್ಲಿ ಕೈಯಲ್ಲಿ ಹಿಡಿಯುವ, ಬೆರಳುಗಳನ್ನು ಬಳಸುವಂತಹ ಕೆಲವು ತೊಡಕುಗಳು ಇರುವುದರಿಂದ ಈ ಡಿಜಿಟಲ್ ಟೆಕ್ನಾಲಜಿ ಪರ್ಯಾಯವಾಗಿ ಕೆಲಸ ಮಾಡುತ್ತದೆ.

ಆದರೆ ಆಟಿಸಂ ಇರುವ ಮಕ್ಕಳಿಗೇ ಆಗಲಿ, ಇನ್ನಾವುದೇ ರೀತಿಯ ಸಮಸ್ಯೆ ಇರುವ ಮತ್ತು ಸಮಸ್ಯೆ ಇಲ್ಲದಿರುವ ಮಕ್ಕಳಿಗೇ ಆಗಲಿ, ಮೊದಲಿನಿಂದಲೇ ಕೀ ಬೋರ್ಡ್‌ಗಳು, ಐ ಪಾಡ್‌ಗಳು, ಮೊಬೈಲ್ ಇತರ ಇಲೆಕ್ಟ್ರಾನಿಕ್ ಉಪಕರಣ ಗಳನ್ನು ಕೊಟ್ಟು ಅಭ್ಯಾಸ ಮಾಡದಿರುವುದೇ ಒಳಿತು. ಏಕೆಂದರೆ ಯಂತ್ರದ ಯಾಂತ್ರಿಕತೆಗಿಂತಲೂ ಇತರ ರೀತಿಯ ನೈಸರ್ಗಿಕ ತಂತ್ರಗಳನ್ನು ಬಳಸುವುದರಿಂದ ಮೆದುಳಿಗೆ ಮತ್ತು ನರ ಮಂಡಲಕ್ಕೆ ಒಳ್ಳೆಯ ವ್ಯಾಯಾಮ ಮತ್ತು ಬುದ್ಧಿಗೆ ಕಸರತ್ತು ದೊರಕುತ್ತದೆ.

ಮತ್ತೊಂದು ಆತಂಕದ ವಿಷಯವೆಂದರೆ ವರ್ಷದಿಂದ ವರ್ಷಕ್ಕೆ ಆಟಿಸಂ ಇರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಏರುತ್ತಿರುವ ಸಂಖ್ಯೆ ಗಂಡು ಮಕ್ಕಳಲ್ಲೇ ಹೆಚ್ಚಾಗಿ ಕಾಣುತ್ತದೆ.

ಆಟಿಸಂಗೆ ಕಾರಣಗಳು

ನಿರ್ದಿಷ್ಟವಾಗಿ ಇಂತದ್ದೇ ಕಾರಣಗಳು ಎಂದು ವೈಜ್ಞಾನಿಕವಾಗಿ ನಿರ್ಧರಿಸುವುದಕ್ಕಿಂತ ಇದಿರಬಹುದು ಎಂಬ ಊಹೆಗಳೇ ಆಟಿಸಂನ ಕಾರಣಗಳನು್ನ ಕಂಡುಹಿಡಿಯುವಲ್ಲಿ ಕಾಣಬರುತ್ತದೆ.

    1.ಗರ್ಭದಲ್ಲಿರುವ ಮಗುವಿಗೆ ಯಾವುದಾದರೂ ರೀತಿಯಲ್ಲಿ ಪೆಟ್ಟಾಗುವುದರಿಂದ.

    2.ಹೆರಿಗೆಯ ಸಮಯದಲ್ಲಿ ಅಥವಾ ಹೆರಿಗೆಯ ನಂತರ ಮಗುವಿಗೆ ಉಂಟಾಗುವ ಾಯಗಳಿಂದ ಅಥವಾ ಸೋಂಕುಗಳಿಂದ.

    3.ಹೆಚಿ್ಚಗೆ ವಿಕಿರಣಕ್ಕೆ ಒಳಪಡುವುದರಿಂದ.

    4.ಸಿಡುಬು, ದಡಾರದಂತಹ ತೀವ್ರತರ ರೋಗಳನ್ನು ಎದುರಿಸಲು ಕೊಡುವ ಚುಚ್ಚುಮದ್ದುಗಳು ದೋಷಪೂರಿತವಾಗಿದ್ದರೆ.

    5.ಆಹಾರದಲ್ಲಿ ಉಂಟಾಗುವ ಅಲರ್ಜಿಗಳಿಂದ.

ಆಟಿಸಂ ಇರುವ ಮಕ್ಕಳ ಮತ್ತು ಇಲ್ಲದೇ ಇರುವಂತಹ ಮಕ್ಕಳ ಮೆದುಳಿನ ರಚನೆಯಲ್ಲಿ ವ್ಯತ್ಯಾಸವನ್ನು ಗಮನಿಸಬಹುದಾಗಿದೆ. ವಂಶವಾಹಿನಿಗಳ ಅಧ್ಯಯನದ ಪ್ರಕಾರ ಅವಳಿ ಮಕ್ಕಳ ಮುಂದುವರಿದ ಪೀಳಿಗೆ ಅಥವಾ ಆಟಿಸಂ ಇದ್ದಿರುವಂತಹ ಸೋದರ ಪೀಳಿಗೆಗಲ್ಲಿ ಆಟಿಸಂ ಹೆಚ್ಚಾಗಿ ಕಾಣಬರುವುದು.

ವಿಜ್ಞಾನಿಗಳು ಗ್ರಹಿಸುವುದೇನೆಂದರೆ ವಂಶವಾಹಿನಿಯ ತಂತುಗಳೊಂದಿಗೆ ಹೊರಗಿನ ವಾತಾವರಣದ ಪ್ರಭಾವಗಳು ಆಟಿಸಂಗೆ ಕಾರಣವಾಗುತ್ತದೆ ಎಂದು. ಅದು ಗಾಳಿಯಲ್ಲಿ ವಿಷ ಕಣಗಳು, ಚುಚ್ಚುಮದ್ದುಗಳು, ಕೃತಕವಾಗಿ ಕೆಡದಂತೆ ಕಾಯ್ದಿರಿಸುವ ಆಹಾರಗಳು, ವಿದ್ಯುತ್ಕಾಂತೀಯ ವಿಕಿರಣಗಳು (ಇಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಶನ್) ಮತ್ತು ಮಿತಿ ಮೀರಿ ಆ್ಯಂಟಿಬಯಾಟಿಕ್ ಮತ್ತು ಪ್ಯಾಾಸಿಟಮೋಲ್‌ಗಳನ್ನು ಬಳಸುವುದು.

ಮೂರು ವರ್ಷದೊಳಗಿನ ಮಗುವು ಮಿತಿಮೀರಿ ಟಿವಿ ನೋಡಿಕೊಂಡಿರುವು ದರಿಂದ ಮತ್ತು ಪೋಷಕರೊಂದಿಗೆ ನೇರ ಸಂಪರ್ಕ ಮತ್ತು ಸಂವಹನವನ್ನು ಮಾಡದೇ ಇರುವುದರಿಂದ ಆಟಿಸಂ ಬರಬಹುದು ಅಥವಾ ಬರದೇ ಇರಬ ಹುದು. ಆದರೆ, ಅವರ ವಂಶವಾಹಿನಿಯಲ್ಲಿ ಇದ್ದಿರಬಹುದಾದ ನ್ಯೂನತೆಗಳನ್ನು ಹೆಚ್ಚಿಸುತ್ತದೆ. ಮಾನಸಿಕ ಮತ್ತು ನರ ಸಂಬಂಧಿತ ಮಸ್ಯೆಯನ್ನು ವೃದ್ಧಿ ಮಾಡುತ್ತದೆ.

ಆಟಿಸಂನ ಲಕ್ಷಣಗಳು

ಮಗುವು ಪ್ರಾರಂಭದಲ್ಲಿ ಆಟಿಸಂ ಇರುವಂತಹ ಲಕ್ಷಣಗಳೇನನ್ನೂ ತೋರುವುದಿಲ್ಲ. ಆದರೆ ಅದು ಸುಮಾರು ಮೂರುವರ್ಷಕ್ಕೆ ಬರುವಾಗ ಕೆಲವು ಲಕ್ಷಣಗಳು ಢಾಳಾಗಿ ಕಾಣುತ್ತದೆ. ಅದೆಂದರೆ ಮಾತು ಸರಿಯಾಗಿ ಬಾರದೇ ಇರುವುದು, ಸಾಮಾಜಿಕವಾಗಿ ಪ್ರತಿಕ್ರಿಯಿಸದೇ ಇರುವುದು. ಸರಿಯಾಗಿ ಗ್ರಹಿಸಿದ್ದೇ ಆದರೆ ಒಂದೂ, ಒಂದೂವರೆ ವರ್ಷದ ಹೊತ್ತಿಗೇ ಇದನ್ನು ಗುರುತಿಸಬಹುದು. ಆದರೆ ಸಾಮಾನ್ಯವಾಗಿ ಪೋಷಕರು ಮತ್ತು ಶಿಶುತಜ್ಞರು ಕೆಲವು ಮಕ್ಕಳು ನಿಧಾನ ಮತ್ತು ಸಂಕೋಚ ಎಂದುಕೊಂಡುಬಿಡುತ್ತಾರೆ. ನಂತರ ಸರಿಹೋಗುತ್ತಾನೆ ಎಂದುಕೊಳ್ಳುತ್ತಾರೆ. ಅದು ನಿಜವೂ ಇರಬಹುದು. ಕೆಲವೊಮ್ಮೆ ಅದೇ ಆಟಿಸಂನ ಪ್ರಾರಂಭಿಕ ಲಕ್ಷಣವೂ ಆಗಿರಬಹುದು.

ಆಟಿಸಂ ಎಂಬುದು ರೋಗವಲ್ಲದಿರುವುದರಿಂದ ಲಕ್ಷಣಗಳನ್ನು ಕಂಡರೂ ಚಿಕಿತ್ಸೆಯೇನೂ ಕೊಟ್ಟು ಗುಣಪಡಿಸಲಾಗದು. ಆದರೆ ಉಲ್ಬಣವಾಗದಿರುವಂತೆ, ಅದರಿಂದ ಮಗುವಿಗೆ ಕೌಟುಂಬಿಕ ಮತ್ತು ಸಾಮಾಜಿಕ ವಾತಾವರಣದಲ್ಲಿ ಪರಸ್ಪರ ತೊಡಕುಗಳಾಗದಿರುವಂತೆ ತರಬೇತಿಗೊಳಿಸಬಹುದು. ಆಟಿಸಂನನ್ನು ಮುನ್ನಾಗಿಯೇ ಕಂಡುಕೊಳ್ಳುವುದು ಮಗುವಿನ ಬೌದ್ಧಿಕ ಸಾಮರ್ಥ್ಯದ ಅನುಗುಣವಾಗಿರುತ್ತದೆ. ಮಗುವಿನ ಕುರಿತಾಗಿ ವಹಿಸುವ ಕಾಳಜಿ, ಸಮಯ, ಶ್ರಮ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ. ಆಟಿಸಂ ಇರುವ ಮಕ್ಕಳಿಗೆ ವಿಶೇಷ ರೀತಿಯ ಶಿಕ್ಷಣ, ಧ್ವನಿ ಚಿಕಿತ್ಸೆ, ವೃತ್ತಿ ತರಬೇತಿ, ವಿಶೇಷ ಸಂತುಲಿತ ಆಹಾರ ಪದ್ಧತಿಗಳಿಂದ ಆಟಿಸಂನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಿದೆ. ಅಲ್ಲದೇ ತರಬೇತಿ ನೀಡಿರುವ ಪ್ರಾಣಿಗಳನ್ನು ಆಟಿಸಂ ಇರುವ ಮಕ್ಕಳೊಂದಿಗೆ ಒಡನಾಟ ಮಾಡಿಸುವುದೂ ಕೂಡ ರೂಢಿಯಲ್ಲಿದೆ. ತಂದೆ ತಾಯಿ ಮತ್ತು ಇಡೀ ಕುಟುಂಬವೇ ಮಗುವಿನ ಸಲುವಾಗಿ ತಮ್ಮ ಜೀವನ ಶೈಲಿಯನ್ನು ವಿನ್ಯಾಸಗೊಳಿಸಿಕೊಳ್ಳುವ ಅಗತ್ಯವೂ ಕೂಡ ಕಾಣುತ್ತದೆ. ಹಾಗಾದಾಗ ಮಾತ್ರ ಆಟಿಸಂ ಇರುವ ಮಕ್ಕಳೂ ವಿದ್ಯಾಭ್ಯಾಸ ಮತ್ತು ವೃತ್ತಿಪರತೆಯನ್ನು ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಇತರರಂತೆ ಕಾಣಿಸಿಕೊಳ್ಳಲು ಸಾಧ್ಯವಿದೆ.

Writer - ಯೋಗೇಶ್ ಮಾಸ್ಷರ್

contributor

Editor - ಯೋಗೇಶ್ ಮಾಸ್ಷರ್

contributor

Similar News