ಕಂಬಾಲಪಲ್ಲಿಯ ನರಮೇಧ ಕೊಂದವರ್ಯಾರು?

Update: 2017-04-21 15:12 GMT

ಕಂಬಾಲಪಲ್ಲಿ ಘೋರ ದುರಂತದ ಪ್ರತ್ಯಕ್ಷಸಾಕ್ಷಿ ಚಿಕ್ಕವೆಂಕಟರಾಯಪ್ಪ ನಿಧನರಾಗಿದ್ದಾರೆ. ಇಡೀ ದುರಂತವನ್ನು ಅತ್ಯಂತ ಹತ್ತಿರದಿಂದ ಕಂಡ ಕಣ್ಣುಗಳು ಇನ್ನಿಲ್ಲ. ಈ ಹೊತ್ತಿನಲ್ಲಿ ಕಂಬಾಲಪಲ್ಲಿಯ ದುರಂತದತ್ತ ಹೊರಳು ನೋಟ ಇಲ್ಲಿದೆ-

ಹದಿನೇಳು ವರ್ಷಗಳು ಕಳೆದೇ ಹೋದವು, ಆ ಭಯಾನಕ ಮಾರಣಹೋಮ ನಡೆದು.ಆ ನರಮೇಧ ನಡೆಸಿದವರನ್ನು ಕೊಂಚವೂ ಅಲುಗಾಡಿಸಲಿಲ್ಲ ನಮ್ಮ ದೇಶದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ. ಇನ್ನು ನಾಲ್ಕನೆ ಅಂಗವೆಂದು ಘೋಷಿಸಿಕೊಂಡಿರುವ ಮಾಧ್ಯಮವೂ ಬಿರುಗಾಳಿಯನ್ನೆಬ್ಬಿಸಲಿಲ್ಲ. ಅದೇಕೋ ಕಾಣೆ. ಗುಂಡು ಸೂಜಿಯ ಶಬ್ದಕ್ಕೂ ಸಂವೇದಿಸುವ ಮಾಧ್ಯಮ ಬಾಂಬಿನ ಸ್ಫೋಟಕ್ಕೆ ಕಿವುಡಾಗಿದೆ.ನೆನಪಾಗುತ್ತಿಲ್ಲವೆ ಆ ದಿನ.

ಒಂದೇ ಮನೆಯೊಳಗೆ ಏಳೂ ಜನರನ್ನು ನೂಕಿ ಬಾಗಿಲು ಜಡಿದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ದಿನ. ಆ ಬೆಂಕಿಯಲ್ಲಿ ಜೀವಗಳು ಬೆಳಕಿಗೆ ಹುಡುಕುತ್ತಾ ಚೀರಾಡಿದ ದಿನ. ಮೇಲ್ಜಾತಿಯ ಕೇಕೆ, ಅಟ್ಟಹಾಸಕ್ಕೆ ಸುಟ್ಟು ಕರಕಲಾದ ದಿನ. 2000ದ ಮಾರ್ಚ್ ತಿಂಗಳ 11ನೆಯ ಆ ದಿನ. ಈಗಲೂ ನೆನಪಾಗುತ್ತಿಲ್ಲವೇ? ಸ್ಮತಿಯ ಕುಲುಕಿದರೂ ನೆನಪಾಗುತ್ತಿಲ್ಲವೇ? ಆಗದು ಏಕೆಂದರೆ ಸತ್ತವರು ದಲಿತರು. ಈ ನೆಲದ ಸವರ್ಣೀಯ ಮನಸುಗಳು ನಾಯಿಗಿಂತ ಕೀಳಾಗಿ ನೋಡುವ, ನಡೆಸಿಕೊಳ್ಳುವ ದಲಿತ ಜೀವಗಳು ಅವು.

ಕಂಬಾಲಪಲ್ಲಿಯ ದಲಿತರು ಅವರು. ಇಂದಿಗೂ ತಮ್ಮ ಕುಟುಂಬದ ಕರುಳು ಬಳ್ಳಿಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿವೆ. ತಾವು ಹೇಳಿದ ಸಾಕ್ಷಿ ಹೇಳಿಕೆಗಳು ಏನಾದವು ಎಂಬುದನ್ನೂ ತಿಳಿಯದೆ ಆಕಾಶ ನೋಡುತ್ತಾ ‘ದೇವರೇ ನನ್ನನ್ನು ಎಂದು ಕರೆದುಕೊಳ್ಳುವೆಯಪ್ಪಾ’ ಎಂದು ಬೇಡುತ್ತಿವೆ. ‘ಸಾಯುವುದರೊಳಗಾಗಿ ಅವರಿಗೆ ಶಿಕ್ಷೆಯಾಗಲಿ’ ಎಂದು ಕುದಿಯುತ್ತಿವೆ.

ಆದರೆ ಇದಾವುದೂ ನಮ್ಮ ವ್ಯವಸ್ಥೆಗೆ ಮುಖ್ಯವಾಗುವುದೇ ಇಲ್ಲ. ಅಷ್ಟೆ ಏಕೆ, ತಿಂಗಳಿಗೆ ನೂರಾರು ಸೆಮಿನಾರುಗಳನ್ನು ಮಾಡಿ ಸೈ ಎನಿಸಿಕೊಳ್ಳುವ ದಲಿತ ನಾಯಕರಿಗೇ ಸುಸ್ತಾಗಿ ಹೋಗಿದೆ. ಇದು ಮುಗಿದು ಹೋದ ಕಥೆಯೆನಿಸಿಬಿಟ್ಟಿದೆ. ಅದರೆ ಹೈಕೋರ್ಟ್ ವಕೀಲರಾದ ಬಿ.ಟಿ. ವೆಂಕಟೇಶ್‌ರವರು ಹೇಳುವುದನ್ನು ಕೇಳಿದರೆ ಎಂತಹವರಿಗೂ ಒಮ್ಮೆ ಎದೆ ಝಲ್ ಎನ್ನುತ್ತದೆ. ಈ ವ್ಯವಸ್ಥೆಯ ಮೇಲೆ ವಾಕರಿಕೆ ಉಂಟಾಗುತ್ತದೆ.

ಅವರು ಗುರುತಿಸುವಂತೆ ಕಂಬಾಲಪಲ್ಲಿಯ ಕೇಸಿನ ವಿಚಾರಣೆಯಾಗಲೀ, ಆ ಕೇಸನ್ನು ನ್ಯಾಯಾಂಗ ವ್ಯವಸ್ಥೆ ನಡೆಸಿಕೊಂಡಿರುವುದಾಗಲೀ ತೀರ ಬೇಜವಾಬ್ದಾರಿತನದ್ದು. ಒಂದಷ್ಟು ಉದಾಹರಣೆ ಹೇಳುವುದಾದರೆ, ಕಂಬಾಲಪಲ್ಲಿ ಪ್ರಕರಣದ ವಿಚಾರಣೆಯಲ್ಲಿ, ಅಲ್ಲಿ ಘಟನೆ ನಡೆದ ದಿನ ಹಾಜರಿದ್ದ ಪೊಲೀಸ್ ಪೇದೆಗಳನ್ನು ವಿಚಾರಣೆ ಮಾಡಿಲ್ಲ. ಆ ಕೇಸಿನ ತನಿಖಾಧಿಕಾರಿಯ ವಿಚಾರಣೆ ಮಾಡಿಲ್ಲ, ಆದರೆ ಕಂಬಾಲಪಲ್ಲಿಯ ದಲಿತರ ಮೇಲೆ ಆರೋಪಿಸಿ ಹೂಡಿರುವ ಕೃಷ್ಣಾರೆಡ್ಡಿಯ ಕೇಸಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ವಿಚಾರಿಸಲಾಗಿದೆ. ಕೆಇಬಿ ಲೈನ್‌ಮೆನ್‌ನನ್ನು ವಿಚಾರಿಸಲಾಗಿಲ್ಲ. ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿಲ್ಲ. ಸಾಕ್ಷಿಗಳು ಪೊಲೀಸರ ಸಮಕ್ಷಮದಲ್ಲಿ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದರ ಕಾರಣವನ್ನು ಕೇಳಿಲ್ಲ.

ಅದಲ್ಲದೆ ಕೋರ್ಟ್ ದಾಖಲೆಗಳಲ್ಲಿ ಎಲ್ಲಾ ಸಾಕ್ಷಿಗಳ ಹೇಳಿಕೆಯೂ ಒಂದೇ ಆಗಿದೆ. ಅದೆಷ್ಟರ ಮಟ್ಟಿಗೆಂದರೆ ಒಂದು ಅಕ್ಷರವೂ ವ್ಯತ್ಯಾಸವಾಗದಂತೆ ಹೇಳಿಕೆ ನೀಡಿದ್ದಾರೆ. ಅಂದರೆ ಟೈಪ್ ಮಾಡುವವರು ಕಟ್ ಆ್ಯಂಡ್ ಪೇಸ್ಟ್ ಮಾಡಿದ್ದಾರೆ. ಈ ಪ್ರಕರಣದ ಮುಖ್ಯ ಸಾಕ್ಷಿ ವೆಂಕಟರಾಯಪ್ಪನ ಭಾಷೆ ತೆಲುಗು ಆಗಿದ್ದು ಆತನ ಸಹಾಯಕ್ಕೆ ನೇಮಿಸಲಾಗಿದ್ದ ಭಾಷಾಂತರಕಾರನ ನೇಮಕ ನಿಯಮಗಳ ಪ್ರಕಾರ ಆಗಿಲ್ಲ. ತಿಂಗಳ ನಂತರ ನಡೆದ ವಿಚಾರಣೆಯಲ್ಲಿ ವೆಂಕಟರಾಯಪ್ಪನಿಗೆ ಭಾಷಾಂತರಕಾರನನ್ನೇ ನೇಮಿಸಿಲ್ಲ. ಅಂದರೆ ತಿಂಗಳಲ್ಲಿ ಕನ್ನಡ ಕಲಿತು ಬಿಟ್ಟಿದ್ದಾನೆ!

ತನಿಖೆ ಮಾಡುವಾಗ ಯಾವುದೇ ಮಾರಕಾಸ್ತ್ರ, ವಸ್ತುಗಳ ತನಿಖೆ ಮಾಡಿಲ್ಲ. ಹೀಗೆ ತನಿಖೆಯಲ್ಲಿ ಮತ್ತು ವಿಚಾರಣೆಯಲ್ಲಿ ಹಲವಾರು ಲೋಪದೋಷಗಳನ್ನು ಹೊಂದಿದ್ದ ಪ್ರಕರಣವನ್ನು ಮರುವಿಚಾರಣೆಗೆ ಒಳಪಡಿಸದೆ ಹೈಕೋರ್ಟ್ ನಿರಾಕರಿಸಿದ್ದು ನ್ಯಾಯಕ್ಕಾದ ಹಿನ್ನ್ನಡೆ. ಏಕೆಂದರೆ ಈ ಮೇಲಿನ ಕೆಲವು ಕಾರಣಗಳು ತನಿಖೆ ಮತ್ತು ವಿಚಾರಣೆ ಸರಿಯಾಗಿ ನಡೆದಿಲ್ಲವೆಂಬುದನ್ನು ಸಾರಿ ಸಾರಿ ಹೇಳುತ್ತಿವೆ.

ಸೋನಿಯಾ ಗಾಂಧಿ ಬಂದು ಹೋಗಿದ್ದರು. ರಾಮ್ ವಿಲಾಸ್ ಪಾಸ್ವಾನ್ ಭೇಟಿ ನೀಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಸರಕಾರದ ಗೃಹ ಮಂತ್ರಿಗಳಾಗಿದ್ದರು. ವಿದೇಶದ ಜಾತಿರಹಿತ ಸಮಾಜದಲ್ಲಿ ವ್ಯಾಸಂಗ ಮಾಡಿ ಬಂದ ಎಸ್. ಎಂ. ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದರು. ಎಲ್ಲಕ್ಕೂ ಹೆಚ್ಚಾಗಿ ದಲಿತಪರರು ಎಂದು ಬಿಂಬಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಅಧಿಕಾರ ವರ್ಗದಲ್ಲಿ ಮೇಲಿನಿಂದ ಕೆಳಗೆವರೆಗೆ ದಲಿತರೇ ತುಂಬಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅನ್ಯಾಯ ನಡೆದಿದ್ದಾದರೂ ಹೇಗೆ? ಇವರೆಲ್ಲರೂ ದಲಿತರಿಗೆ ನ್ಯಾಯ ಕೊಡಿಸುವಲ್ಲಿ ಸೋತಿದ್ದಾದರೂ ಹೇಗೆ?

ಕಂಬಾಲಪಲ್ಲಿ ಕೇಸಿನ ಕಥೆ ಮುಗಿಯಿತು ಎಂದುಕೊಂಡಿರುವ ದಲಿತ ನಾಯಕರು, ದಲಿತಪರರು, ಪ್ರಗತಿಪರರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಕಂಬಾಲಪಲ್ಲಿಯ ದಲಿತರಿಗೆ ನ್ಯಾಯ ಸಿಕ್ಕಿದ್ದರೆ ಜಾತೀವಾದಿ ಮನಸುಗಳು ನಾಗಲಾಪಲ್ಲಿಯ ಯಶೋದಮ್ಮನ ಎದೆ ಹರಿದು ಅವಳ ಮುಂದೆಯೇ ಮಕ್ಕಳ ಕೈಕಾಲು ಕತ್ತರಿಸಿ ಅಷ್ಟ ದಿಕ್ಕುಗಳಿಗೆ ಎಸೆದು ಅವಳನ್ನೂ ಭೀಕರವಾಗಿ ಕೊಲ್ಲುತ್ತಿರಲಿಲ್ಲ (ನಿರ್ಭಯಾಳನ್ನು ಹತ್ಯೆ ಮಾಡಿದಂತೆಯೇ ಮಾಡಲಾಗಿತ್ತು). ಹಳ್ಳಿ ಹಳ್ಳಿಗಳಲ್ಲಿ ಎಚ್ಚೆತ್ತ ದಲಿತರಿಗೆ ಸರಾಗವಾಗಿ ಬಹಿಷ್ಕಾರ ಹಾಕುತ್ತಿರಲಿಲ್ಲ. ಮನೆಗಳಿಗೆ ಬೆಂಕಿ ಇಡುತ್ತಿರಲಿಲ್ಲ. ದಲಿತ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಬೀಗುತ್ತಿರಲಿಲ್ಲ. ಸರಕಾರಗಳು ನಾಚಿಕೆ ಬಿಟ್ಟು ಪ್ರತೀ ಹದಿನೆಂಟು ನಿಮಿಷಗಳಿಗೊಂದು ದೌರ್ಜನ್ಯ ದಲಿತರ ಮೇಲಾಗುತ್ತದೆ ಎಂದು ವರದಿ ನೀಡುತ್ತಿರಲಿಲ್ಲ.

ಕಂಬಾಲಪಲ್ಲಿಯ ದಲಿತರಿಗೆ ನ್ಯಾಯ ಒದಗಿಸುವುದರಿಂದ ಇಡೀ ದೇಶದ ಪೊಲೀಸ್ ಠಾಣೆಗಳ ಕಡತಗಳಲ್ಲಿ ಧೂಳು ತಿನ್ನುತ್ತಿರುವ, ಕೋರ್ಟುಗಳ ಟೇಬಲ್‌ಗಳ ಮೇಲೆ ಸಮಾಧಿಯಾಗಿರುವ ಅದೆಷ್ಟೋ ದಲಿತರ ಮಾರಣಹೋಮ ಪ್ರಕರಣಗಳಿಗೆ ಜೀವ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಈ ದೇಶದ ಜಾತೀಯತೆಯೆಂಬ ನೀಚಪದ್ಧತಿಯನ್ನು ರಕ್ಷಿಸುವ ಸಂಚುಕೋರರನ್ನು ಮೀರಿ ಮಾನವಪರ ಶಕ್ತಿಯೊಂದು ಒಟ್ಟಾಗಿ ಕಂಬಾಲಪಲ್ಲಿಯಲ್ಲಿ ಕರಕಲಾದ ಜೀವಗಳಿಗೆ ನ್ಯಾಯ ಒದಗಿಸುವುದರ ಮೂಲಕ ಇಡೀ ಮಾನವೀಯತೆಗೆ ನ್ಯಾಯ ಒದಗಿಸಬೇಕಿದೆ.

ಹೇಗೂ ರಾಜ್ಯ ಸರಕಾರ ಹೋಗಿರುವ ಅಪೀಲಿಗೆ ಸ್ಪಂದಿಸಿರುವ ಉಚ್ಚ ನ್ಯಾಯಾಲಯ ಕಂಬಾಲಪಲ್ಲಿಯ ಕೇಸನ್ನು ಮರು ವಿಚಾರಣೆಗೆ ಆದೇಶಿಸಲಿ ಎಂಬ ಆಶಯವನ್ನಿಟ್ಟುಕೊಂಡು ಇಡೀ ಪ್ರಕರಣದ ಸಾಧಕ ಬಾಧಕಗಳನ್ನು ರಾಜ್ಯದ ಮೂಲೆ ಮೂಲೆಗೆ ಸಾಗಿಸುವುದರ ಮೂಲಕ ಮನುಜಪರರಲ್ಲಿ ಜಾಗೃತಿ ಮೂಡಿಸಲು ಜಾತಿರಹಿತ ಹೋರಾಟ ಕಟ್ಟಬೇಕಿದೆ. ಈ ಹೋರಾಟ ಜಾತಿರಹಿತ ಸಮಾಜದತ್ತ ಮುನ್ನುಡಿ ಬರೆಯಬೇಕಿದೆ.

Writer - ಪಂಪಾರೆಡ್ಡಿ ಅರಳಹಳ್ಳಿ

contributor

Editor - ಪಂಪಾರೆಡ್ಡಿ ಅರಳಹಳ್ಳಿ

contributor

Similar News