ದಿಲ್ಲಿ ದರ್ಬಾರ್

Update: 2017-04-22 18:48 GMT

ಹೊಸ ರಾಷ್ಟ್ರಪತಿ ಅಭ್ಯರ್ಥಿ
 ಮತ್ತೆ ಹೊಸ ವಾರ; ಜಾರ್ಖಂಡ್ ರಾಜ್ಯಪಾಲರಾಗಿರುವ ದ್ರೌಪದಿ ಮುರ್ಮು ಎಂಬ ಹೊಸ ರಾಷ್ಟ್ರಪತಿ ಅಭ್ಯರ್ಥಿ ಹೆಸರು ದಿಢೀರ್ ಚಲಾವಣೆಗೆ ಬಂದಿರುವುದು ಈ ವಾರದ ಸ್ಪೆಷಲ್. ಬುಡಕಟ್ಟು ಜನಾಂಗದ ಮುರ್ಮು ಒಡಿಶಾ ಮೂಲದವರು. ಇವರಿಗೆ ಭಡ್ತಿ ನೀಡಿದರೆ ಇಡೀ ಬುಡಕಟ್ಟು ವೋಟ್‌ಬ್ಯಾಂಕ್‌ಗೆ ಒಳ್ಳೆಯ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು. ಇದೇ ವೇಳೆಗೆ ಇತರ ಹಲವು ಹೆಸರುಗಳೂ ಸುತ್ತುತ್ತಿವೆ. ಮೋದಿ ಮುಂದಿರುವ ಆಯ್ಕೆ ಈಗ ರಾಜಕೀಯ ಮತ್ತು ಸಂದೇಶ ನೀಡಬಲ್ಲ ವ್ಯಕ್ತಿಗಳ ನಡುವೆ. ಪಕ್ಷದ ಒಳಗಿನವರು ಹೇಳುವಂತೆ, ಪಕ್ಷದ ಹಿರಿ ತಲೆಗಳನ್ನು ಬಿಟ್ಟು ಎರಡನೆ ಸ್ತರದ ನಾಯಕರತ್ತ ಮೋದಿ ಒಲವು ತೋರಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ ಎನ್ನುವುದು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸಮತೋಲನಕ್ಕೆ ತರಲು ಉಪರಾಷ್ಟ್ರಪತಿ ಹುದ್ದೆಗೆ ಸುಶ್ಮಾ ಸ್ವರಾಜ್ ಅಥವಾ ವೆಂಕಯ್ಯ ನಾಯ್ಡು ಅವರನ್ನು ಹೆಸರಿಸುವುದು ಮತ್ತು ಸಾಂಕೇತಿಕ ಮೌಲ್ಯದ ವ್ಯಕ್ತಿಯೊಬ್ಬರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡುವುದು. ಸ್ಪಷ್ಟ ಚಿತ್ರಣಕ್ಕೆ ಇನ್ನೂ ಕಾಯುವಿಕೆ ಅನಿವಾರ್ಯ.

ನಿವೃತ್ತಿ ಬಳಿಕ ಪ್ರಣವ್ ಯೋಚನೆ!?
ರಾಷ್ಟ್ರಪತಿ ಹುದ್ದೆ ಪೂರೈಸಿದ ಬಳಿಕ ಪ್ರಣವ್ ಮುಖರ್ಜಿ ಏನು ಮಾಡುತ್ತಾರೆ ಎಂಬ ಬಗ್ಗೆ ಅವರ ಆಪ್ತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿಂತಕರ ವರ್ತುಲದಲ್ಲಿ ವದಂತಿ ಹರಡುತ್ತಿದೆ. ಪ್ರಣವ್ ಹೆಸರಿನ ಸಂಸ್ಥೆಯೊಂದು ಆಗಸ್ಟ್‌ನಲ್ಲಿ ಹುಟ್ಟಿಕೊಳ್ಳಲು ಸಿದ್ಧತೆ ನಡೆದಿದೆ. ಮುಖರ್ಜಿ ಅವರ ಹೃದಯಕ್ಕೆ ತೀರಾ ಹತ್ತಿರವಾದ ಸಂಶೋಧನಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದು ಇದರ ಉದ್ದೇಶ ಎನ್ನಲಾಗಿದೆ. ಪ್ರಣವ್ ಮುಖರ್ಜಿ ಫೌಂಡೇಷನ್, ಮುಖರ್ಜಿ ಅವರ ಆದರ್ಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದು, ಅತ್ಯುತ್ತಮ ಹಾಗೂ ಪ್ರತಿಭಾವಂತರನ್ನು ಇಲ್ಲಿಗೆ ಆಕರ್ಷಿಸುವ ಸಲುವಾಗಿ ಸ್ಕಾಲರ್‌ಶಿಪ್ ನೀಡಲು ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ. ವಿದೇಶಾಂಗ ನೀತಿ, ಆರ್ಥಿಕತೆ, ಕಾನೂನು, ರಕ್ಷಣೆ ಹಾಗೂ ವಿದ್ಯುತ್ ಕ್ಷೇತ್ರಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಇಲ್ಲಿ ಖಾಯಂ ಬೋಧಕ ಸಿಬ್ಬಂದಿಯೂ ಇರುತ್ತಾರೆ. ಮುಖರ್ಜಿ ಅವರಿಂದ ಸ್ಫೂರ್ತಿ ಪಡೆದ ಹಲವು ಉದ್ಯಮಿಗಳು ಹಾಗೂ ದೇಶದ ಕೈಗಾರಿಕೋದ್ಯಮಿಗಳು ತಮ್ಮ ಸಾಮಾಜಿಕ ಅಭಿವೃದ್ಧಿ ಹೊಣೆಗಾರಿಕೆ ನಿಧಿಯಿಂದ ಸ್ವಯಂಪ್ರೇರಿತರಾಗಿ ಇದಕ್ಕೆ ಉದಾರ ಕೊಡುಗೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೆಗೂ ಹಲವು ಬಲಪಂಥೀಯ ಚಿಂತಕ ಕೂಟಗಳು ದಿಲ್ಲಿಯಲ್ಲಿ ತಲೆ ಎತ್ತಿದ್ದು ಮೋದಿ ಸರಕಾರದ ಮೇಲೆ ಪ್ರಭಾವ ಬೀರುತ್ತಿವೆ. ಪ್ರಣವ್ ದಾ ಅವರ ಚಿಂತಕ ಕೂಟ ಎತ್ತ ತಿರುಗುತ್ತದೆ? ಎಡಕ್ಕೋ, ಬಲಕ್ಕೋ?.

ಸೂಕ್ಷ್ಮ ನಡೆಯಲ್ಲಿ ಎಡವಿದ ಸೋನಿಯಾ!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸತ್ತಿನ ಬಜೆಟ್ ಅಧಿವೇಶನ ಕೊನೆಗೊಳ್ಳುವ ಸಂದರ್ಭ, ಪಕ್ಷದ ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದರು. ಮೆನುಕಾರ್ಡ್‌ನ ಐಟಂಗಳು ಆಪ್ಯಾಯಮಾನವಾಗಿದ್ದವು ಮತ್ತು ಹಾಜರಾತಿ ಕೂಡಾ ಉತ್ತಮವಾಗಿತ್ತು. ಆದರೆ ವಿಚಿತ್ರವೆಂದರೆ ಸೋನಿಯಾ, ರಾಹುಲ್ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಾವು ಕುಳಿತಿದ್ದ ಟೇಬಲ್‌ಗೇ ಅಂಟಿಕೊಂಡಿದ್ದರು. ಹೈಟೇಬಲ್‌ನಲ್ಲಿ ಸ್ಥಾನ ಗಳಿಸುವ ಅದೃಷ್ಟ ಪಡೆದ ಭಾಗ್ಯಶಾಲಿಗಳೆಂದರೆ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್, ಎ.ಕೆ.ಆ್ಯಂಟನಿ ಹಾಗೂ ಆನಂದ ಶರ್ಮಾ. ಕಾಂಗ್ರೆಸ್ ಪಕ್ಷದ ಹಲವು ಮಂದಿ ಹಿರಿಯ ಮುಖಂಡರ ಅಭಿಪ್ರಾಯದಂತೆ, ಸೋನಿಯಾ, ರಾಹುಲ್, ಸಿಂಗ್ ಹಾಗೂ ಇತರ ಪಟ್ಟಭದ್ರರು, ವಿವಿಧ ಸಂಸದರ ಗುಂಪುಗಳ ಜತೆ ಬೆರೆಯಬೇಕಿತ್ತು. ಇದು ಸಂಸದರಲ್ಲಿ ಒಂದು ರೀತಿಯ ಸಮಾನತೆಯ ಭಾವನೆ ಬೆಳೆಯಲು ಕಾರಣವಾಗುತ್ತಿತು ಎನ್ನುವುದು ಹಿರಿಯರ ಅಂಬೋಣ. ನವಿರಾದ ಹಾಗೂ ಸೂಕ್ಷ್ಮ ಸಂಕೇತಗಳಿಂದ ಪ್ರಯೋಜನವಿದೆ; ರಾಹುಲ್ ಗಾಂಧಿಯವರಿಗೆ ಪಕ್ಷಾಧ್ಯಕ್ಷ ಹುದ್ದೆಗೆ ಭಡ್ತಿ ನೀಡುವಂತೆ ಸೂಕ್ಷ್ಮ ವಿಷಯಕ್ಕೆ ಬೆಂಬಲ ಗಳಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಕ್ರಮ ಅನಿವಾರ್ಯವಾಗಿತ್ತು ಎನ್ನುವುದು ಅವರ ಅಭಿಮತ. ನಯಗಾರಿಕೆ ಕೌಶಲಕ್ಕೆ ಹಿಂದೊಮ್ಮೆ ಹೆಸರುವಾಸಿಯಾಗಿದ್ದ ಸೋನಿಯಾ ಕೂಡಾ ಈ ವಿಚಾರದಲ್ಲಿ ಎಡವಿದರು ಎನ್ನುವುದು ಕೆಲವರ ಅಭಿಪ್ರಾಯ.

ಗುಲಾಂ ಸಲಹೆ
ಸೋಲಿನ ಸರಣಿಯಿಂದ ಹೊರಬರಲಾಗದ ಕಾಂಗ್ರೆಸ್ ಪಕ್ಷ, ಭವಿಷ್ಯದಲ್ಲಿ ಸಂಘಟಿತ ಹೋರಾಟಕ್ಕೆ ಮುಂದಾಗುತ್ತದೆ ಎಂಬ ಯೋಚನೆ ಹಲವರಲ್ಲಿದೆ. ಆದರೆ ಪಕ್ಷ ಮಾತ್ರ ಇನ್ನೂ ಒಡೆದ ಮನೆಯಾಗಿಯೇ ಉಳಿದಿದೆ. ಬಜೆಟ್ ಅಧಿವೇಶನದ ವೇಳೆ, ರಾಜ್ಯಸಭೆಯಲ್ಲಿ ಇದು ಸ್ಪಷ್ಟವಾಗಿ ಕಂಡುಬಂತು. ಕಪಿಲ್ ಸಿಬಲ್, ಪಿ.ಚಿದಂಬರಂ ಮತ್ತು ಆನಂದ್ ಶರ್ಮಾ ನಡುವೆ ವೈಯಕ್ತಿಕ ಮುನ್ನಡೆಯ ಮೇಲಾಟ ನಡೆದಿತ್ತು. ರಾಜ್ಯಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಆನಂದ ಶರ್ಮಾ, ಕಲಾಪದ ಚರ್ಚಾ ಅವಧಿಯಲ್ಲಿ ಸಿಂಹಪಾಲು ಪಡೆದರು. ಇದು ಚಿದಂಬರಂ ಹಾಗೂ ಸಿಬಲ್ ದೂರು ನೀಡಲು ಕಾರಣವಾಯಿತು. ಈ ಇಬ್ಬರೂ ನಾಯಕರು ಜಿಎಸ್‌ಟಿ ಬಗ್ಗೆ ಹರಿತವಾದ ಅಸ್ತ್ರ ಹೊಂದಿರುವುದಾಗಿ ಭಾವಿಸಿಕೊಂಡಿದ್ದರು, ಅಪಾಯದ ಮುನ್ಸೂಚನೆ ಅರಿತ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್, ಅವರು ಉಭಯ ಮುಖಂಡರಿಗೆ ಸಲಹೆ ಮಾಡಿ, ಸೋನಿಯಾ ಹಾಗೂ ರಾಹುಲ್ ಬಳಿ ಈ ವಿಷಯ ಚರ್ಚಿಸುವಂತೆ ಸೂಚಿಸಿದರು. ಅವರ ಸಲಹೆ ಏನು ಎನ್ನುವುದು ಮಾತ್ರ ಬಹಿರಂಗವಾಗಿಲ್ಲ.

ಸಂಜೀವ್ ಬಲ್ಯನ್‌ಗೆ ಜಾಟ್ ಬಲ
ಕೇಂದ್ರ ಸಚಿವ ಸಂಜೀವ್ ಬಲ್ಯನ್ ಅವರಿಗೆ ಬಿಜೆಪಿ ದಿಲ್ಲಿಯ ವಿಶೇಷ ಹೊಣೆ ವಹಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಈ ಜಾಟ್ ಮುಖಂಡನಿಗೆ ವಹಿಸಿದ ಹೊಣೆ ಎಂದರೆ ದಿಲ್ಲಿಯಲ್ಲಿರುವ ಜಾಟ್ ಸಮುದಾಯದವರ ಮನವೊಲಿಸಿ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಪರ ಮತ ಚಲಾಯಿಸುವಂತೆ ಕೋರುವುದು. ಈಗಾಗಲೇ ಮೊದಲ ಪರೀಕ್ಷೆಯಲ್ಲಿ ಬಲ್ಯನ್ ತೇರ್ಗಡೆಯಾಗಿದ್ದಾರೆ. ರಾಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದಿಂದ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ, ಜಾಟ್ ಜನ ಇರುವ ಎಲ್ಲೆಡೆ ಪ್ರವಾಸ ಕೈಗೊಂಡು, ಅವರ ಬೆಂಬಲವನ್ನು ಪಡೆದಿದ್ದಾರೆ. ಪರಿಣಾಮವಾಗಿ ಪಕ್ಷದ ಅಭ್ಯರ್ಥಿ ಗೆಲುವನ್ನೂ ಸಾಧಿಸಿದ್ದಾರೆ. ವಿಚಿತ್ರವೆಂದರೆ ಜಾಟರು ಹಾಗೂ ಸಿಖ್ ಸಮುದಾಯದವರು ಪರಸ್ಪರರಿಗೆ ಮತ ಹಾಕುವುದಿಲ್ಲ. ಆದರೆ ಇದನ್ನು ಸಾಧಿಸಿದ್ದಾಗಿ ಬಲ್ಯನ್, ಕೃಷಿ ಸಚಿವಾಲಯದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇವರ ಮುಂದಿನ ಹೊಣೆಗಾರಿಕೆ, ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಾಟರು ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ನೋಡಿಕೊಳ್ಳುವುದು. ಕಾಂಗ್ರೆಸ್‌ನಂಥ ಪಕ್ಷಗಳು ಚುನಾವಣಾ ಸೋಲಿನ ಗಾಯದಿಂದ ಹೊರಬಾರದೆ ಒದ್ದಾಡುತ್ತಿದ್ದರೆ, ಬಿಜೆಪಿ ಪ್ರತೀ ಮತದ ಬಗ್ಗೆಯೂ ಲೆಕ್ಕಾಚಾರ ಹಾಕಿ ಹೇಗೆ ಎಚ್ಚರಿಕೆಯ ನಡೆ ಇಡುತ್ತದೆ ಎನ್ನುವುದನ್ನು ಅವರ ನಿಕಟವರ್ತಿಯೊಬ್ಬರು ಪತ್ರಕರ್ತರಿಗೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News