2016ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ವಿಚಾರ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-04-24 15:09 GMT

ಬೆಂಗಳೂರು, ಎ.24: ಕಳೆದ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್ ಅವರು, ಚಲನಚಿತ್ರ ಆಯ್ಕೆ ಸಮಿತಿಯು ಮಾರ್ಗಸೂಚಿಗಳ ಪ್ರಕಾರವಾಗಿ 2016ನೆ ಸಾಲಿನ ರಾಜ್ಯ ಚಲನಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ. ಇದರಿಂದ, "ಶವದ ಮುಂದೆ" ಸೇರಿ ಮತ್ತಿತರ ಸಾಮಾಜಿಕ ಕಾಳಜಿ ಇರುವ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕಿಲ್ಲ ಎಂದು ಪೀಠಕ್ಕೆ ತಿಳಿಸಿದರು.

2016ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಯು ಕಾನೂನು ಬಾಹಿರವಾಗಿದೆ. ಹೀಗಾಗಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮುಂದೂಡಿತು.

ಚಲನಚಿತ್ರ ಆಯ್ಕೆ ಸಮಿತಿ ಅಧ್ಯಕ್ಷೆ ಕವಿತಾ ಲಂಕೇಶ್ ನೇತೃತ್ವದ 9 ಜನರ ಸಮಿತಿಯು 2016ನೆ ಸಾಲಿನ ರಾಜ್ಯ ಚಲನಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News