ಗುಡಿ ಕೈಗಾರಿಕೆಗಳ ಪುನಶ್ಚೇತನಕ್ಕೆ ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ

Update: 2017-04-24 15:14 GMT

ಬೆಂಗಳೂರು, ಎ.24: ಭಾರೀ ಕೈಗಾರಿಕೆಗಳ ಪ್ರಭಾವದಿಂದ ಅವನತಿಯ ಅಂಚಿನಲ್ಲಿರುವ ಗುಡಿ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಯೋಜಿಸಿರುವ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ‘ಖಾದಿ ಉತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚರಕದ ಸದ್ದು ಕೇಳುವ ಊರಲ್ಲಿ ನಿರುದ್ಯೋಗ, ಬಡತನವಿರುವುದಿಲ್ಲ ಎಂದು ಗಾಂಧಿ ಹೇಳುತ್ತಿದ್ದರು. ಹಿಂದೆ ಗುಡಿ ಕೈಗಾರಿಕೆಗಳಿಂದ ವ್ಯವಸಾಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಹಳ್ಳಿಗಳಲ್ಲೇ ಸಿಗುತ್ತಿದ್ದವು. ಹೀಗಾಗಿ ಹಳ್ಳಿಗಳು ಸ್ವಾವಲಂಬನೆ ಹೊಂದಿದ್ದವು. ಆದರೆ ಈಗ ಕಾಲ ಬದಲಾಗಿದೆ ಎಂದರು.

ಗುಡಿ ಕೈಗಾರಿಕೆಗಳು ಮಾರುಕಟ್ಟೆಯಲ್ಲಿ ಭಾರಿ ಕೈಗಾರಿಕೆಗಳ ಜೊತೆ ನೇರವಾಗಿ ಸ್ಪರ್ಧಿಸಬೇಕಿದೆ. ಗುಡಿ ಕೈಗಾರಿಕೆಗಳು ಗುಣಮಟ್ಟವನ್ನು ಸುಧಾರಿಸದಿದ್ದರೆ ಸೋಲು ಖಚಿತ. ಹೀಗಾಗಿ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ. ರಾಜ್ಯದಲ್ಲಿ ಖಾದಿ ಉದ್ಯಮ ಅಭಿವೃದ್ದಿಗಾಗಿ ಈಗಾಗಲೇ 147 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಖಾದಿ ಉದ್ಯಮದ ಅಭಿವೃದ್ಧಿಗೆ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನವನ್ನು ನಿರ್ಮಾಣ ಮಾಡಲು ಬಜೆಟ್‌ನಲ್ಲಿ ತಲಾ ಮೂರು ಕೋಟಿ ರೂ. ಅನುದಾನ ನೀಡಲಾಗಿದೆ. ಶೀಘ್ರದಲ್ಲೇ ಗಾಂಧಿ ಭವನದ ನಿರ್ಮಾಣ ಕಾರ್ಯರೂಪಕ್ಕೆ ತರಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ರಾಜಕಾರಣಿಗಳು ಖಾದಿ ಬಟ್ಟೆಗಳು ತೊಡದೆ ಗಾಂಧಿ ಕುರಿತು ಮಾತನಾಡುತ್ತಿದ್ದಾರೆ. ಗಾಂಧಿ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ದೇಶ ಉದ್ಧಾರ ಆಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಮಂಡಳಿಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡುವ ವಿಧಾನವನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ, 75 ವರ್ಷದಿಂದ ಖಾದಿ ಉದ್ಯಮದಲ್ಲಿ ತೊಡಗಿಕೊಂಡಿರುವ ಹಿರಿಯ ನಾಗರಿಕರಾದ ಪುಟ್ಟಮಾದಮ್ಮ, ಜೀಜಮ್ಮ, ಜೆ.ಬಿ.ಸೂರವಿ ಅವನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ಇತರರು ಇದ್ದರು.

 ಶೇ.10ರಿಂದ 50ರಷ್ಟು ರಿಯಾಯಿತಿ
ನಗರದ ಸ್ವಾತಂತ್ರ ಉದ್ಯಾನದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ಖಾದಿ ಉತ್ಸವದಲ್ಲಿ 370ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ.ಉತ್ಸವದಲ್ಲಿ ಖಾದಿ ವಸ್ತ್ರಗಳು, ಕೈಮಗ್ಗ, ಕರಕುಶಲ ವಸ್ತುಗಳು ಮಾರಾಟದಲ್ಲಿ ಶೇ.10ರಿಂದ ಶೇ.50ರಷ್ಟು ರಿಯಾಯಿತಿ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News