​ಗೋ ರಕ್ಷಕರ ಹಾವಳಿ ನಿಯಂತ್ರಿಸುವಂತೆ ಆಗ್ರಹ

Update: 2017-04-24 15:42 GMT

ಬೆಂಗಳೂರು, ಎ. 24: ಇತ್ತೀಚಿಗೆ ದೇಶದಲ್ಲಿ ಹೆಚ್ಚುತ್ತಿರುವ ಗೋ ರಕ್ಷಕರ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಆಲ್ ಇಂಡಿಯಾ ತೌಹೀದ್ ಜಮಾಅತ್ ಸಂಘಟನೆ ಆಗ್ರಹಿಸಿದೆ.

ರಾಜಸ್ತಾನದ ಆಳ್ವಾರ್‌ನಲ್ಲಿ ಹೈನುಗಾರಿಕೆ ಮಾಡುತ್ತಿದ್ದ ಮುಸ್ಲಿಂ ರೈತನ ಮೇಲೆ 50-60 ಜನರ ಗುಂಪು ಗೋ ರಕ್ಷಣೆ ಹೆಸರಿನಲ್ಲಿ ದಾಳಿ ನಡೆಸಿ, ಅಮಾನುಷವಾಗಿ ಕೊಲೆ ಮಾಡಿದೆ. ಅಲ್ಲದೆ, ಹಲ್ಲೆಗೊಳಗಾದ ವ್ಯಕ್ತಿಯಿಂದ 75 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ. ಇಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಧಿಕಾರ ನಡೆಸುತ್ತಿರುವ ಸರಕಾರಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮತ್ತೊಂದು ಕಡೆ ನ್ಯಾಯ ನೀಡಬೇಕಾದ ನ್ಯಾಯಾಂಗ ಅಸಹಾಯಕ ಸ್ಥಿತಿಯಲ್ಲಿದೆ ಎಂದು ಸಂಘಟನೆ ಅಧ್ಯಕ್ಷ ಅಬ್ದುಲ್ ರೆಹಮಾನ್ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ತಲೆ ತಗ್ಗಿಸುವಂತಹ ಅಮಾನುಷವಾದ ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವೀ  ಇಂತಹ ಘಟನೆಗಳು ನಡೆದ ವರದಿಯೇ ಇಲ್ಲ ಎಂದು ಕೀಳಾಗಿ ಮಾತನಾಡಿರುವುದು ಖಂಡನೀಯ. ದೇಶದಲ್ಲಿ ನಡೆಯುತ್ತಿರುವ ಇಂತಹ ಅಮಾನುಷ ಕೃತ್ಯಗಳ ಕುರಿತು ಎಲ್ಲಿಯೂ ಚರ್ಚೆ ನಡೆಯದೇ ಇರುವುದರಿಂದ ಜವಾಬ್ದಾರಿ ಸ್ಥಾನದಲ್ಲಿರುವವರು ಅಸಂಬದ್ಧ ಹೇಳಿಕೆ ನೀಡಲು ಸಾಧ್ಯ ಎಂದು ಹೇಳಿದರು.

ಹೀಗಾಗಿ ಕೂಡಲೇ ಸರಕಾರ ಗೋ ರಕ್ಷಣೆ ಹೆಸರಿನಲ್ಲಿ ಹಲ್ಲೆ ಮಾಡುವ, ಕೊಲೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದುವರೆಗೂ ಹಲ್ಲೆಗೊಳಗಾದ, ಕೊಲೆಯಾದ ಕುಟುಂಬಗಳಿಗೆ 20 ಲಕ್ಷ ಪರಿಹಾರ ನೀಡಬೇಕು. ರೈತ ಅವಲಂಬಿತ ಕುಟುಂಬಗಳಿಗೆ ಪ್ರೋತ್ಸಾಹ ಧನ ನೀಡಬೇಕು. ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುವವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News