​ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಡಾ.ರಾಜ್ ದಿನಾಚರಣೆ: ಸಿದ್ದರಾಮಯ್ಯ

Update: 2017-04-24 17:08 GMT

ಬೆಂಗಳೂರು, ಎ.24: ಮುಂದಿನ ವರ್ಷದಿಂದ ವರನಟ ಡಾ.ರಾಜ್‌ಕುಮಾರ್ ದಿನಾಚರಣೆಯನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಏಕಕಾಲದಲ್ಲಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಕರ್ನಾಟಕ ವಾರ್ತಾ ಇಲಾಖೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 2016ನೆ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಸಿನಿಮಾ ರಂಗದ ಕೋರಿಕೆಯಂತೆ ಮುಂದಿನ ವರ್ಷದಿಂದ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ದೆಹಲಿಯಲ್ಲಿರುವ ಕರ್ನಾಟಕ ಕನ್ನಡ ಸಂಘದ ಭವನದ ಮುಂಭಾಗ ಡಾ.ರಾಜ್‌ಕುಮಾರ್ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಸಿನಿಮಾ ರಂಗದ ಬಹುಮುಖ್ಯವಾದ ಬೇಡಿಕೆಯಾಗಿತ್ತು. ಅದನ್ನು ಸಹ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಜೊತೆಗೂಡಿ ಮಾಡಲಾಗುವುದು ಎಂದು ಅವರು ಹೇಳಿದರು.

ಕನ್ನಡಕ್ಕೆ ಮೊದಲ ಆದ್ಯತೆ: ರಾಜ್ಯದಲ್ಲಿ ವಾಸಿಸುವವರು ಹಾಗೂ ಕನ್ನಡ ಮಾತನಾಡುವವರ ಮೊದಲ ಆದ್ಯತೆ ಕನ್ನಡ ಸಿನಿಮಾವಾಗಿರಲಿ. ನಮ್ಮ ಸಿನಿಮಾವನ್ನು ನಾವೇ ನೋಡಿ ಪ್ರೋತ್ಸಾಹಿಸದಿದ್ದರೆ ಇನ್ಯಾರು ನೋಡುತ್ತಾರೆ. ಹೀಗಾಗಿ ಕನ್ನಡ ಸಿನಿಮಾಗಳನ್ನು ನೋಡುವ ಮೂಲಕ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.

ಗುಣಾತ್ಮಕ ಸಿನಿಮಾ ಬರಲಿ: ಹಿಂದಿನ ದಿನಗಳಲ್ಲಿ ಕಡಿಮೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಬಹುತೇಕ ಸಿನಿಮಾ ಗುಣಾತ್ಮಕತೆಯಿಂದ ಕೂಡಿರುತ್ತಿದ್ದವು. ಆಗಿನ ಕಾಲದಲ್ಲಿ ನಟಿಸಿದ ನಟ, ನಟಿಯರು ಇಂದಿಗೂ ನೆನಪಿನಲ್ಲಿ ಉಳಿದಿದ್ದಾರೆ. ಆದರೆ, ಈಗ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತವೆ. ಗುಣಮಟ್ಟ ಮಾತ್ರ ತೀರ ಕಳಪೆಯಿಂದ ಕೂಡಿರುತ್ತದೆ ಎಂದು ಅವರು ವಿಷಾದಿಸಿದರು.

ಕಾರ್ಯಕ್ರಮದಲ್ಲಿ 2016ನೆ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ, ಮೇಯರ್ ಜಿ.ಪದ್ಮಾವತಿ, ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜ್, ಟಿ.ಎ.ಶರವಣ, ಹಿರಿಯ ನಟಿ ಜಯಂತಿ, ನಿರ್ದೇಶಕಿ ಕವಿತಾ ಲಂಕೇಶ್, ನಟ ಪುನಿತ್ ರಾಜ್‌ಕುಮಾರ್ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಲಂಕೇಶ್ ನನಗೆ ಗುರುಗಳ ಸಮಾನರು. ಅವರ ಚಿಂತನೆಗಳಿಂದ ಸಾಕಷ್ಟು ಪ್ರಭಾವಿತಗೊಂಡಿದ್ದೇನೆ. ಅವರು ಬರವಣಿಗೆಯ ಜೊತೆಗೆ ಅತ್ಯುತ್ತಮ ಸಿನಿಮಾಗಳನ್ನೂ ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದ ‘ಎಲ್ಲಿಂದಲೋ ಬಂದವರು’ ಸಿನಿಮಾವನ್ನು ಅನೇಕ ಬಾರಿ ನೋಡಿದ್ದೇನೆ. ಇತ್ತೀಚಿಗೆ ಬರುವ ಸಿನಿಮಾಗಳಲ್ಲಿ ಅಶ್ಲೀಲ ಸಂಭಾಷಣೆಗಳು ಹೆಚ್ಚಿವೆ. ಇದರಿಂದ ಕನ್ನಡ ಸಿನಿಮಾಗಳನ್ನು ಕುಟುಂಬ ಸಮೇತವಾಗಿ ನೋಡಲಾಗುವುದಿಲ್ಲ. ಹಾಗೂ ಇಂತಹ ಸಿನಿಮಾಗಳು ಕನ್ನಡ ಸಂಸ್ಕೃತಿಗೆ ಧಕ್ಕೆ ತರುವಂತಹವು. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ದ್ವಂದ್ವಾರ್ಥ ಮೂಡಿಸುವ ಸಂಭಾಷಣೆಗಳಿಗೆ ಕಡಿವಾಣ ಹಾಕುವುದು ಸಿನಿಮಾರಂಗದ ಜವಾಬ್ದಾರಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News