ಆಗಸ್ಟ್‌ನಲ್ಲಿ ಕಲಬುರ್ಗಿ-ಬೀದರ್ ಮಾರ್ಗದ ಪರೀಕ್ಷಾರ್ಥ ರೈಲು ಸಂಚಾರ: ಖರ್ಗೆ
ಕಲಬುರ್ಗಿ, ಎ.24: ಮುಂದಿನ ಆಗಸ್ಟ್‌ನಲ್ಲಿ ಕಲಬುರ್ಗಿ-ಬೀದರ್ ರೈಲು ಮಾರ್ಗದ ಪರೀಕ್ಷಾರ್ಥ ರೈಲು ಸಂಚಾರ ಆರಂಭವಾಗಲಿದೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿ-ಬೀದರ್ ರೈಲು ಮಾರ್ಗ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ನಡೆದಿದೆ. ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವರಾದ ಸುರೇಶ ಪ್ರಭು ಅವರಿಗೆ ಪತ್ರ ಬರೆಯಲಾಗಿದೆ. ಮರಳಿನ ಕೊರತೆಯಿಂದಾಗಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈ ಸಂಬಂಧ ಪ್ರಾದೇಶಿಕ ಆಯುಕ್ತರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.
ಯಾದಗಿರಿಯಿಂದ ಮರಳು ತರಿಸುವ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿಯೊಂದಿಗೂ ಮಾತುಕತೆ ನಡೆಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಮಾರ್ಗದಲ್ಲಿ ಗೂಡ್ಸ್ ವಾಹನ ಓಡಿಸುವುದರ ಮೂಲಕ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು. ಕಲಬುರ್ಗಿಯಿಂದ ಸೊಲ್ಲಾಪುರವರೆಗಿನ ದ್ವಿಪಥ ರೈಲು ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರೈಲು ಸಂಚಾರ ಆರಂಭವಾದರೆ ಕಲಬುರಗಿಯಿಂದ ಬೆಂಗಳೂರಿಗೆ ಹೋಗಲು ಒಂದೂವರೆ ಗಂಟೆ ಸಮಯ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ತಾವು ರೈಲ್ವೆ ಸಚಿವರಾಗಿದ್ದಾಗ ಘೋಷಣೆ ಮಾಡಲಾಗಿದ್ದ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ರೈಲ್ವೆ ಸಚಿವರಿಗೆ ಪತ್ರ ಬರೆದು ರೈಲ್ವೆ ವಿಭಾಗೀಯ ಕೇಂದ್ರ ಆರಂಭಿಸುವಂತೆ ಒತ್ತಾಯಿಸಲಾಗಿದ್ದು, ರೈಲ್ವೆ ಮಾರ್ಗ ವಿದ್ಯುದೀಕರಣ ಕಾಮಗಾರಿಯನ್ನು ಸಹ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ವಿಜಯಪುರ-ಹೈದರಾಬಾದ್ ಮತ್ತು ಸೊಲ್ಲಾಪುರ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿದ್ದು, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಎರಡೂ ಹೆದ್ದಾರಿಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದಾಗ ಜೇವರ್ಗಿ-ಶ್ರೀರಂಗಪಟ್ಟಣ, ಕಮಲನಾಥ ಅವರು ಸಚಿವರಾಗಿದ್ದಾಗ ಕಲಬುರ್ಗಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿದ್ದವು. ಇದೀಗ ಮತ್ತೆ ಎರಡು ಹೊಸ ರಾಷ್ಟ್ರೀಯ ಹೆದ್ದಾರಿಗಳು ಮಂಜೂರಾಗಿ ಟೆಂಡರ್ ಆಗಿದ್ದು, ಕೆಲಸ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ನಗರದ ಹೊರ ಭಾಗದಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿಯಿಂದ ಇನ್ನೊಂದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಲಿಂಕ್ ರೋಡ್ ನಿರ್ಮಾಣಕ್ಕೂ ಕೇಂದ್ರ ಹೆದ್ದಾರಿ ನಿರ್ಮಾಣ ಸಚಿವಾಲಯ ಅನುಮೋದನೆ ನೀಡಲಾಗಿದೆ. ಹಾಗೆಯೇ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ 109 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ 10-11 ತಿಂಗಳಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿದೆ. ಮೂರನೆ ಹಂತದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು
ಕಲಬುರಗಿಗೆ 15 ಮತ್ತು ಯಾದಗಿರಿಗೆ 9 ಸಿಆರ್‌ಎಫ್ ಕಾಮಗಾರಿ ದೊರೆತಿದ್ದು, ಈ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೋರುವುದಾಗಿ ಖರ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಖಮರುಲ್ ಇಸ್ಲಾಂ ಉಪಸ್ಥಿತರಿದ್ದರು.