ಮೇ 4 ರಂದು ಟಿಪ್ಪು ದಿನಾಚರಣೆ

Update: 2017-04-24 17:41 GMT

ಬೆಂಗಳೂರು, ಎ. 24: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮೈಸೂರು ಹುಲಿ, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಹುತಾತ್ಮ ದಿನಾಚರಣೆ ಹಾಗೂ ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶವನ್ನು ಮೇ 4 ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದ್ದಾರೆ.

ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ, ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿಕೊಂಡಿದ್ದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವ್ಯಕ್ತಿ ಟಿಪ್ಪುಮಾತ್ರ. ಟಿಪ್ಪು ಒಬ್ಬ ರಾಜನಾಗಿರಲಿಲ್ಲ, ಸೈನಿಕನಾಗಿ ತನ್ನ ಸಂಸ್ಥಾನ ಹಾಗೂ ರಾಷ್ಟ್ರದ ರಕ್ಷಣೆಗೆ ಮುಂದಾದ ವ್ಯಕ್ತಿಯಾಗಿದ್ದ. ಆದರೆ, ಇಂದು ಕೆಲವು ಕೋಮುವಾದಿಗಳು ಟಿಪ್ಪು ದೇಶದ್ರೋಹಿ ಎಂದು ಪಟ್ಟ ಕಟ್ಟುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಟಿಪ್ಪುವಿನ ವ್ಯಕ್ತಿತ್ವ ಹಾಗೂ ಅವರ ಆಶಯಗಳನ್ನು ಪ್ರಚಾರ ಮಾಡಬೇಕಾದ ಅಗತ್ಯವಿದೆ ಎಂದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಒಂದು ಅವಧಿಯಲ್ಲಿ ದಂಡನಾಯಕನಾಗಿ, ಧರ್ಮ ಸಹಿಷ್ಣುತೆಗೆ ಮಾದರಿಯಾಗಿ, ಸ್ವತಂತ್ರ ಕರ್ನಾಟಕದ ಹರಿಕಾರನಾಗಿ ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ವ್ಯಕ್ತಿ ಟಿಪ್ಪು ಆಗಿದ್ದಾರೆ. ಹೀಗಾಗಿ ಸಮಕಾಲೀನ ಭಾರತದ ಸಂದರ್ಭದಲ್ಲಿ ಇಂದಿಗೂ ಟಿಪ್ಪುವನ್ನು ನೆನೆಸಿಕೊಳ್ಳುತ್ತಿದ್ದೇವೆ. ಅಂದು ಸ್ವಾವಲಂಬಿ ಅಭಿವೃದ್ಧಿ ಮಾದರಿಯನ್ನು ಪ್ರಾರಂಭಿಸಿದ್ದರು. ಅದು ಇಂದಿನ ವಸಾಹತು ನೀತಿಗಳ ನಡುವೆ ಮರೆಯಾಗಿದ್ದು, ಎಲ್ಲಿ ನೋಡಿದರೂ ಕಾರ್ಪೋರೇಟ್ ಕಂಪೆನಿಗಳೇ ಕಾಣುತ್ತಿವೆ ಎಂದರು.

ಮೇ.4 ರಂದು ಮೈಸೂರಿನ ವಸ್ತು ಪ್ರದರ್ಶನದ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಶ್ರೀರಂಗಪಟ್ಟಣದಲ್ಲಿ ಸಮಾವೇಶದ ಜಾಥ ಉದ್ಘಾಟನೆಯಾಗಲಿದೆ. ಅನಂತರ ಬೈಕ್ ರ್ಯಾಲಿ ಮೂಲಕ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ಕಿರು ಚಿತ್ರ ಪ್ರದರ್ಶನ, ಸೂಫಿ ಮತ್ತು ಟಿಪ್ಪು ಲಾವಣಿಗಳ ಗಾಯನ ಸೇರಿದಂತೆ ಸಾಂಸ್ಕೃತಿಕ ಕಲಾಪ್ರಕಾರಗಳನ್ನು ಅನಾವರಣ ಮಾಡಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News