ರಾಜ್ಯ ಬಿಜೆಪಿಯೊಳಗಿನ ಇಬ್ಬರ ಜಗಳ-ಯಾರಿಗೆ ಲಾಭ?

Update: 2017-04-24 19:00 GMT

ಕಳೆದ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರ ನಾಯಕತ್ವದ ಬೇರನ್ನು ಇನ್ನಷ್ಟು ಆಳಕ್ಕೆ ಇಳಿಸಿದೆ. ಆದರೆ ಇತ್ತ ಬಿಜೆಪಿಯೊಳಗಿನ ನಾಯಕರು ಉಪಚುನಾವಣೆಯ ಸೋಲನ್ನು ಯಡಿಯೂರಪ್ಪ ಅವರ ಕುತ್ತಿಗೆಗೆ ಕಟ್ಟಿ, ನೇಣಿಗೇರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ರವಿವಾರ ನಡೆದ ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಇದು ಬಹಿರಂಗವಾಗಿದೆ. ಕಳೆದ ಉಪಚುನಾವಣೆಯ ಮುಖಭಂಗದ ಬಳಿಕ ಯಡಿಯೂರಪ್ಪ ಮೊದಲ ಬಾರಿಗೆ ಆತ್ಮಾವಲೋಕನ ಸಭೆಯೊಂದನ್ನು ಕರೆದಿದ್ದರು. ಸೋಲಿನ ಕಾರಣಗಳ ಕುರಿತಂತೆ ಚರ್ಚಿಸುವುದಕ್ಕಾಗಿ ಈ ಸಭೆಯನ್ನು ಏರ್ಪಡಿಸಲಾಗಿತ್ತು.

ವಿಪರ್ಯಾಸವೆಂದರೆ, ಈ ಆತ್ಮಾವಲೋಕನ ಸಭೆಯಲ್ಲಿ ಬಿಜೆಪಿಯೊಳಗಿನ ಎರಡು ಮುಖ್ಯ ಆತ್ಮಗಳೇ ಗೈರು ಹಾಜರಾಗಿದ್ದವು. ಶೆಟ್ಟರ್ ಈ ಸಭೆಯ ಕಡೆ ಮುಖ ಮಾಡಿಯೂ ನೋಡಿರಲಿಲ್ಲ. ಇನ್ನೋರ್ವ ಮುಖಂಡ ಈಶ್ವರಪ್ಪ ಅವರು ಉಡುಪಿಯಲ್ಲಿ ನಿಂತು ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಡಿ.ವಿ. ಸದಾನಂದ ಗೌಡ ಅನುಪಸ್ಥಿತಿ ಕೂಡ ನಿಗೂಢವಾಗಿತ್ತು. ಈವರೆಗೆ ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸುತ್ತೇವೆ ಎನ್ನುತ್ತಿದ್ದ ಬಿಜೆಪಿಯ ಗುಂಪು, ಉಪಚುನಾವಣೆಯ ಸೋಲನ್ನೇ ಮುಂದಿಟ್ಟುಕೊಂಡು ಮತ್ತೆ ಯಡಿಯೂರಪ್ಪ ವಿರುದ್ಧ ತಿರುಗಿ ಬೀಳುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಉಪಚುನಾವಣೆಯ ಸೋಲು ಬಿಜೆಪಿಯೊಳಗಿನ ಭಿನ್ನಮತೀಯರಿಗೆ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಲು ಮತ್ತೆ ಧೈರ್ಯ ನೀಡಿದೆ. ಕೇಂದ್ರ ವರಿಷ್ಠರ ಕಟ್ಟಾಜ್ಞೆಯ ಮೇರೆಗೆ ಯಡಿಯೂರಪ್ಪ ನಾಯಕತ್ವವನ್ನು ಬಾಯಿ ಮುಚ್ಚಿ ಒಪ್ಪಿಕೊಂಡಿರುವ ಈಶ್ವರಪ್ಪಾದಿಗಳು ಉಪಚುನಾವಣೆಯ ಫಲಿತಾಂಶವನ್ನು ಮುಂದಿಟ್ಟುಕೊಂಡು ಮತ್ತೆ ದಾಳಿ ಆರಂಭಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯನ್ನು ಯಾವ ದಿಕ್ಕಿಗೆ ಕೊಂಡೊಯ್ಯಬಹುದು ಎಂದು ಊಹಿಸುವುದು ಕಷ್ಟ.

‘‘ಗೊಂದಲ ನಿವಾರಿಸುವಲ್ಲಿ ಬಿ. ಎಸ್. ಯಡಿಯೂರಪ್ಪ ತಾತ್ಸಾರ ವಹಿಸಿದ್ದಾರೆ’’ ಎನ್ನುವ ಈಶ್ವರಪ್ಪ ಅವರ ಅಳಲು ಇಂದು ನಿನ್ನೆಯದಲ್ಲ. ಅಂದರೆ, ಯಡಿಯೂರಪ್ಪ ಅವರು ತಮ್ಮ ನಂಬಿಕೆಯ ಕಾರ್ಯಕರ್ತರಿಗೆ ಆದ್ಯತೆಯನ್ನು ನೀಡುತ್ತಿದ್ದಾರೆ. ಭಿನ್ನಮತೀಯರ ಪಟ್ಟಿಯಲ್ಲಿರುವ ಹೆಸರನ್ನು ಉದ್ದೇಶ ಪೂರ್ವಕವಾಗಿ ಬದಿಗೆ ತಳ್ಳುತ್ತಿದ್ದಾರೆ ಎನ್ನುವುದು ಕೇವಲ ಈಶ್ವರಪ್ಪ ಅವರ ಆರೋಪ ಮಾತ್ರವಲ್ಲ. ಅಶೋಕ್, ಶೆಟ್ಟರ್, ಅನಂತಕುಮಾರ್ ಮೊದಲಾದವರೆಲ್ಲರೂ ಈ ಕುರಿತು ಒಳಗೊಳಗೆ ಕುದಿಯುತ್ತಿದ್ದಾರೆ. ಆದರೆ ಸದ್ಯಕ್ಕೆ ಯಡಿಯೂರಪ್ಪ ಬಿಟ್ಟರೆ ಬೇರೆ ನಾಯಕರು ಬಿಜೆಪಿಗೆ ಸೂಕ್ತವಲ್ಲ ಎನ್ನುವುದನ್ನು ಕೇಂದ್ರ ವರಿಷ್ಠರು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಸಹಕರಿಸುವಂತೆ ಉಳಿದವರಿಗೆ ಕಟ್ಟಾಜ್ಞೆಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ತನ್ನ ವಿರುದ್ಧ ಸೇಡಿನ ರಾಜಕೀಯ ನಡೆಸಬಹುದು ಅಥವಾ ಬಿಜೆಪಿಯೊಳಗೆ ತನ್ನನ್ನು ಮೂಲೆಗುಂಪು ಮಾಡಬಹುದು ಎನ್ನುವ ಭಯದಿಂದ, ಬಿಜೆಪಿಯೊಳಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈಶ್ವರಪ್ಪ ‘ರಾಯಣ್ಣ ಬ್ರಿಗೇಡ್’ ಸ್ಥಾಪಿಸಿದರು.

ಯಡಿಯೂರಪ್ಪ ಅವರಿಗೆ ಈ ಮೂಲಕ ಮರ್ಮಾಘಾತವನ್ನು ನೀಡಿದರು. ಮೊತ್ತ ಮೊದಲ ಬಾರಿಗೆ ಯಡಿಯೂರಪ್ಪ ಅವರ ಲಿಂಗಾಯತ ಲಾಬಿಗೆೆ ಈಶ್ವರಪ್ಪರ ಬ್ರಿಗೇಡ್ ಸವಾಲಾಯಿತು. ಈವರೆಗೆ ಲಿಂಗಾಯ ಶಕ್ತಿಯ ಮೂಲಕ ರಾಜ್ಯ ಬಿಜೆಪಿಯ ಉಳಿದ ನಾಯಕರನ್ನು ಆಡಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಇದು ಈಶ್ವರಪ್ಪ ಒಡ್ಡಿದ ನಿಜವಾದ ಸವಾಲಾಗಿತ್ತು. ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್‌ನ್ನು ಬರ್ಖಾಸ್ತು ಮಾಡದೇ ಇದ್ದರೆ ತಾನು ಅಧಿಕೃತವಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಯಡಿಯೂರಪ್ಪ ವರಿಷ್ಠರಿಗೆ ಬೆದರಿಕೆಯನ್ನು ಹಾಕುವಲ್ಲಿಗೆ ಇದು ತಲುಪಿತ್ತು. ವರಿಷ್ಠರ ಮಧ್ಯಸ್ಥಿತಿಕೆಯಿಂದ ರಾಯಣ್ಣ ಬ್ರಿಗೇಡ್‌ನ್ನು ಹಿಂದುಳಿದ ವರ್ಗದ ಮೋರ್ಚಾವನ್ನಾಗಿಸಿ, ಅದರ ನೇತೃತ್ವವನ್ನು ಈಶ್ವರಪ್ಪರಿಗೆ ನೀಡಲಾಯಿತು.

ಇದೇ ಸಂದರ್ಭದಲ್ಲಿ, ಈಶ್ವರಪ್ಪ ಅವರು ತನ್ನ ಹಿಂಬಾಲಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದೂ ಬೇಡಿಕೆಯನ್ನಿಟ್ಟಿದ್ದರು. ಫೆಬ್ರವರಿ 10ರೊಳಗೆ ಗೊಂದಲಗಳನ್ನು ಪರಿಹರಿಸುವುದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಅವರು ಈ ಹಿಂದಿನ ತಪ್ಪನ್ನು ಮತ್ತೆ ಪುನರಾವರ್ತಿಸಲು ಸಿದ್ಧರಿದ್ದಂತಿಲ್ಲ. ತನ್ನ ಸುತ್ತಲಿರುವ ಅನಂತಕುಮಾರ್, ಈಶ್ವರಪ್ಪ, ಅಶೋಕ್, ಶೆಟ್ಟರ್ ಎಲ್ಲರೂ ನಿರ್ಣಾಯಕ ಸಂದರ್ಭದಲ್ಲಿ ಕೈಕೊಡಲಿದ್ದಾರೆ ಎನ್ನುವುದು ಸ್ಪಷ್ಟವಿರುವಾಗ, ಅವರು ಯಾಕಾಗಿ ಭಿನ್ನಮತೀಯರ ಬೆಂಬಲಿಗರನ್ನು ಪಕ್ಷದ ಮುನ್ನೆಲೆಗೆ ತರುತ್ತಾರೆ? ಆದುದರಿಂದಲೇ ತಳಮಟ್ಟದಲ್ಲಿ ತನ್ನ ನಿಷ್ಠಾವಂತರಿಗೇ ಆದ್ಯತೆ ನೀಡಿ, ಪಕ್ಷವನ್ನು ಪುನರ್‌ಸಂಘಟಿಸಲು ಅವರು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಳೆದ ಉಪಚುನಾವಣೆಯ ಸೋಲನ್ನು ್ತ ಯಡಿಯೂರಪ್ಪ ಅವರ ತಲೆಗೆ ಕಟ್ಟಿ, ಮತ್ತೆ ಅವರ ವಿರುದ್ಧ ಭಿನ್ನಮತೀಯರು ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.

ಈ ದೂರನ್ನು ವರಿಷ್ಠರು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಈಶ್ವರಪ್ಪ-ಯಡಿಯೂರಪ್ಪ ಅವರ ತಿಕ್ಕಾಟಗಳನ್ನು ಆರೆಸ್ಸೆಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನುವುದೂ ಮುಖ್ಯವಾಗಿದೆ. ಯಡಿಯೂರಪ್ಪ ಅವರನ್ನು ಬದಿಗೆ ಸರಿಸಲು ಆರೆಸ್ಸೆಸ್ ಕೂಡ ತುದಿಗಾಲಲ್ಲಿ ನಿಂತಿದೆ. ಹೇಗೆ ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್ ಸಂಘಪರಿವಾರದ ಉಗ್ರವಾದಿಯನ್ನು ಮುಖ್ಯಮಂತ್ರಿಯಾಗಿಸುವ ಮೂಲಕ ತನ್ನ ಕಾರ್ಯವನ್ನು ಸಾಧಿಸಿಕೊಂಡಿತೋ, ಅದೇ ತಂತ್ರವನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಸಂದರ್ಭಕ್ಕಾಗಿ ಆರೆಸ್ಸೆಸ್ ಹೊಂಚು ಹಾಕುತ್ತಿದೆ. ಯಡಿಯೂರಪ್ಪ ನೇತೃತ್ವದ ಲಿಂಗಾಯತ ಲಾಬಿಯೇ ಆರೆಸ್ಸೆಸ್‌ಗೆ ಬಹುದೊಡ್ಡ ಸವಾಲಾಗಿರುವುದರಿಂದ ಅದು ಇನ್ನೂ ತೆರೆಮರೆಯಲ್ಲೇ ಆಟವಾಡುತ್ತಿದೆ. ಸದ್ಯಕ್ಕೆ ಆರೆಸ್ಸೆಸ್‌ಗೆ ಈಶ್ವರಪ್ಪ-ಯಡಿಯೂರಪ್ಪ ತಿಕ್ಕಾಟ ಇನ್ನಷ್ಟು ಕಾವು ಪಡೆಯುವುದು ಬೇಕಾಗಿದೆ. ಆ ಮೂಲಕ ಇಬ್ಬರನ್ನು ಬದಿಗೆ ಸರಿಸಿ ಪಕ್ಕಾ ಆರೆಸ್ಸೆಸ್ ನಾಯಕನೊಬ್ಬನನ್ನು ಮುಂದಕ್ಕೆ ತರುವ, ಹಿಂದೂ ರಾಷ್ಟ್ರೀಯತೆಯ ಹೆಸರಿನಲ್ಲಿ ರಾಜ್ಯ ಬಿಜೆಪಿಯನ್ನು ಪುನರ್ ಸಂಘಟಿಸುವ ಲೆಕ್ಕ ಹಾಕಿಕೊಂಡಿದೆ. ಈಗಾಗಲೇ ಆರೆಸ್ಸೆಸ್‌ನ ಮುಖವಾಣಿಗಳಾಗಿರುವ ಕೆಲವರು ಆರೆಸ್ಸೆಸ್ ಮುಖಂಡನ ಹೆಸರನ್ನು ಚರ್ಚೆಗೆ ತಂದಿದ್ದಾರೆ.

ಬಿಜೆಪಿಯ ಸಂಘಟನೆಯನ್ನು ಆರೆಸ್ಸೆಸ್ ಹೊತ್ತುಕೊಳ್ಳಬೇಕು ಎಂಬ ಹೇಳಿಕೆಗಳನ್ನು ಸಾಮಾಜಿಕ ತಾಣಗಳಲ್ಲಿ ತೇಲಿ ಬಿಟ್ಟಿದ್ದಾರೆ. ಸದ್ಯಕ್ಕೆ ಯಡಿಯೂರಪ್ಪರ ಮೇಲಿನ ಅಸಹನೆಯಿಂದ ಭಿನ್ನಮತೀಯರು ಆರೆಸ್ಸೆಸ್‌ಗೇ ಬಿಜೆಪಿಯ ಜುಟ್ಟನ್ನು ಪೂರ್ಣವಾಗಿ ಒಪ್ಪಿಸಿದರೆ ಅಚ್ಚರಿಯೇನಿಲ್ಲ. ಆದರೆ ಕರ್ನಾಟಕ ಉತ್ತರಪ್ರದೇಶವಾಗುವುದು ತೀರಾ ಕಷ್ಟ. ಇಲ್ಲಿ ಆರೆಸ್ಸೆಸ್ ಲಿಂಗಾಯತರ ಹೆಗಲಲ್ಲಿ ಕುಳಿತು ಆಡಳಿತ ನಡೆಸುತ್ತಿದೆ. ಲಿಂಗಾಯತರನ್ನು ಪಕ್ಕಕ್ಕೆ ತಳ್ಳಿ, ತನ್ನ ಹಿಂದುತ್ವದ ಸಿದ್ಧಾಂತವನ್ನು ಪೂರ್ಣ ಜಾರಿಗೆ ತರಲು ಅದು ಸಮಯಕ್ಕಾಗಿ ಕಾಯುತ್ತಿದೆ. ಆದರೆ ಲಿಂಗಾಯತ ಸ್ವತಂತ್ರ ಧರ್ಮವೆಂಬ ಚಿಂತನೆ, ಘೋಷಣೆಗಳು ಇದೀಗ ಕರ್ನಾಟಕದಲ್ಲಿ ಧ್ವನಿ ಪಡೆಯುತ್ತಿದೆ. ಹೀಗಿರುವಾಗ, ಹಿಂದುತ್ವ ಸಿದ್ಧಾಂತದ ಹೇರಿಕೆಯನ್ನು ಲಿಂಗಾಯತ ತತ್ವವೇ ಸಮರ್ಥವಾಗಿ ಎದುರಿಸಲಿದೆ ಮತ್ತು ಹಿಂದುತ್ವದ ಹೆಸರಲ್ಲಿ ಜಾರಿಗೆ ತರಲುಹೊರಟಿರುವ ಮನುಸಿದ್ಧಾಂತಕ್ಕೆ ಲಿಂಗಾಯತ ತತ್ವದಿಂದಲೇ ಮುಖಭಂಗವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News