ಪತಂಜಲಿ ಆಮ್ಲ ಜ್ಯೂಸ್‌ಗೆ ಸೇನಾ ಕ್ಯಾಂಟಿನ್ ಕೊಕ್

Update: 2017-04-25 03:45 GMT

ಡೆಹ್ರಾಡೂನ್, ಎ.25: ಪ್ರಯೋಗಾಲಯದ ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಪತಂಜಲಿ ಆಮ್ಲ ಜ್ಯೂಸ್‌ಗೆ ಸೇನಾ ಕ್ಯಾಂಟೀನ್ ಕೊಕ್ ನೀಡಿದೆ. ಕ್ಯಾಂಟೀನ್ ಸ್ಟೋರ್ಸ್‌ ಡಿಪಾರ್ಟ್‌ಮೆಂಟ್ (ಸಿಎಸ್‌ಡಿ), ಪತಂಜಲಿ ಆಯುರ್ವೇದದ ಆಮ್ಲ ಜ್ಯೂಸ್ ಅನ್ನು ಸಶಸ್ತ್ರ ಪಡೆಗಳಿಗೆ ಮಾರಾಟ ಮಾಡದಂತೆ ಆದೇಶ ನೀಡಿತ್ತು.

ಯೋಗಗುರು ಬಾಬಾ ರಾಮದೇವ್ ಮಾಲಕತ್ವದ ಹರಿದ್ವಾರ ಮೂಲದ ಆಯುರ್ವೇದ ಉತ್ಪನ್ನ ಘಟಕ, ಉತ್ತರ ಪ್ರದೇಶ ಸರಕಾರದ ಮೇಲೆ ಗೂಬೆ ಕೂರಿಸಿದೆ. ಈ ಸಂಬಂಧ ಕಂಪೆನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ಈ ಉತ್ಪನ್ನ, ನಿರೀಕ್ಷಿತ ಗುಣಮಟ್ಟದಲ್ಲಿಲ್ಲ ಎಂದು ವರದಿ ನೀಡಲಾಗಿತ್ತು.

ಕಂಪೆನಿಯ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಮೂಲಗಳು ಹೇಳಿವೆ. ಇಂಡೆಕ್ಸ್ ನಂ. 85417 ಹಾಗೂ ಬ್ಯಾಚ್ ನಂ. ಜಿಎಚ್1502ರ ಆಮ್ಲ ಜ್ಯೂಸ್ ಮಾದರಿಯನ್ನು ಸಿಎಸ್‌ಡಿ ಕೊಲ್ಕತ್ತಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು.

ಉತ್ತರಾಖಂಡದ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ವಿಭಾಗ 2009ರಲ್ಲಿ ಆಮ್ಲ ಜ್ಯೂಸ್‌ಗೆ ಪ್ರಮಾಣಪತ್ರ ನೀಡಿತ್ತು ಎಂದು ಪತಂಜಲಿ ಹೇಳಿದೆ. ಇದು ಆಯುರ್ವೇದ ಉತ್ಪನ್ನವಾಗಿದ್ದು, ಆಹಾರೋತ್ಪನ್ನವಲ್ಲ. ಜತೆಗೆ ಇದಕ್ಕೆ ತಜ್ಞ ವೈದ್ಯರ ಸಲಹೆ ಪಡೆಯಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಇದನ್ನು ಆಯುರ್ವೇದ ಉತ್ಪನ್ನವಾಗಿ ಪರಿಗಣಿಸಿ ಪ್ರಮಾಣಪತ್ರ ನೀಡಬೇಕಿತ್ತೇ ವಿನಃ ಆಹಾರ ಉತ್ಪನ್ನವಾಗಿ ಅಲ್ಲ ಎನ್ನುವುದು ಕಂಪೆನಿಯ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News