​ಜಾತ್ಯತೀತ ಭಾರತದ ರಕ್ಷಣೆಗೆ ಚಳವಳಿ: ಎ.27ರಂದು ಮುಸ್ಲಿಮ್ ಲೀಗ್‌ನ ರಾಷ್ಟ್ರೀಯ ಸಮಾವೇಶ

Update: 2017-04-25 18:23 GMT

ಬೆಂಗಳೂರು, ಎ.25: ‘ಜಾತ್ಯತೀತ ಭಾರತದ ರಕ್ಷಣೆಗೆ ಚಳವಳಿ’ ಎಂಬ ಘೋಷವಾಕ್ಯದಡಿಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್)ನ ಯುವ ಘಟಕವು ಎ.27ರಂದು ಪುರಭವನದಲ್ಲಿ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ ಎಂದು ಐಯುಎಂಎಲ್ ರಾಷ್ಟ್ರೀಯ ಕಾರ್ಯದರ್ಶಿ ಸಿರಾಜ್ ಇಬ್ರಾಹೀಂ ಸೇಠ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮ್ ಲೀಗ್‌ನ ಯುವ ಘಟಕವು ಫ್ಯಾಶಿಸ್ಟ್ ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಲು ಈ ಸಮಾವೇಶವನ್ನು ಆಯೋಜಿಸಿದ್ದು, ದೇಶದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 7 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

2014ರ ಲೋಕಸಭಾ ಚುನಾವಣೆಯ ಬಳಿಕ ದೇಶದಲ್ಲಿ ಕೋಮುವಾದಿ ಹಾಗೂ ಫ್ಯಾಶಿಸ್ಟ್ ಶಕ್ತಿಗಳು ಬಲಗೊಳ್ಳುತ್ತಿವೆ. ಸಂವಿಧಾನಬದ್ಧವಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಅಂತಹ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದು ಅವರು ದೂರಿದರು.

ಮುಸ್ಲಿಮರು ಹಾಗೂ ದಲಿತರನ್ನು ಗುರಿಯನ್ನಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ)ಯನ್ನು ಬಳಸಿಕೊಂಡು ಅಮಾಯಕ ಯುವಕರನ್ನು ಗುರಿಯನ್ನಾಗಿಸಿಕೊಳ್ಳಲಾಗುತ್ತಿದೆ. ಈ ಎಲ್ಲ ದೌರ್ಜನ್ಯಗಳ ವಿರುದ್ಧ ಸಮಾನ ಮನಸ್ಕ ಯುವಕರು ಹೋರಾಡಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಈ ಸಮಾವೇಶದಲ್ಲಿ ಐಯುಎಂಎಲ್ ರಾಷ್ಟ್ರೀಯ ಅಧ್ಯಕ್ಷ ಖಾದರ್ ಮೊಹಿಯುದ್ದೀನ್, ಕೇರಳದ ರಾಜ್ಯಾಧ್ಯಕ್ಷ ಸೈಯದ್ ಹೈದರ್‌ಅಲಿ ಶಿಹಾಬ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಸಂಚಾಲಕ ಪಿ.ಕೆ.ಝುಬೇರ್, ಜಂಟಿ ಸಂಚಾಲಕ ನೌಶಾದ್, ಐಯುಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾವೀದುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News