ಬಿಜೆಪಿ ಭಿನ್ನಮತೀಯ ಸಭೆಯಲ್ಲಿ ಈಶ್ವರಪ್ಪ ಭಾಗವಹಿಸದಂತೆ ಎಚ್ಚರಿಕೆ
ಬೆಂಗಳೂರು, ಎ.26: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯರಿಯೂರಪ್ಪ ಹಾಗೂ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಎ.27ರಂದು ನಡೆಯಲಿರುವ ಬಿಜೆಪಿ ಭಿನ್ನಮತೀಯರ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಭಾಗವಹಿಸದಂತೆ ಯಡಿಯೂರಪ್ಪ ಬಣದ ಬಿ.ಜೆ.ಪುಟ್ಟಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿ ಅಲಂಕರಿಸಿರುವ ಕೆ.ಎಸ್.ಈಶ್ವರಪ್ಪ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಳ್ಳುವುದು ಸರಿಯಲ್ಲ. ಈ ಕೂಡಲೇ ಬ್ರಿಗೇಡ್‌ನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಒಂದನ್ನು ಆಯ್ಕೆ ಮಾಡಿಕೊಳ್ಳಲಿ: ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬಿಜೆಪಿಗೆ ಬದ್ಧವಾಗಿರುವುದು ಅವರ ಜವಾಬ್ದಾರಿಯಾಗಿದೆ. ಈ ಬಗ್ಗೆ ಪಕ್ಷದ ವತಿಯಿಂದ ಹಲವು ಬಾರಿ ಮನವಿ ಮಾಡಲಾಗಿದೆ. ಹೀಗಾಗಿ ಕೆ.ಎಸ್.ಈಶ್ವರಪ್ಪ ಬಿಜೆಪಿಗೆ ಕೆಲಸ ಮಾಡಲಿ, ಇಲ್ಲವೇ ರಾಯಣ್ಣ ಬ್ರಿಗೇಡ್‌ನಲ್ಲಿ ತೊಡಗಿಸಿಕೊಳ್ಳಲಿ. ಏಕಕಾಲದಲ್ಲಿ ಎರಡನ್ನೂ ಮಾಡುವುದು ಸರಿಯಲ್ಲ. ಆಯ್ಕೆ ಅವರಿಗೆ ಬಿಟ್ಟ ವಿಚಾರವೆಂದು ಅವರು ಹೇಳಿದರು.
ಅತೃಪ್ತರ ಸಭೆ ಮಾಡುತ್ತಿರುವುದು ದುರದೃಷ್ಟಕರ. ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಕೆಲ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಕೆಲ ನಾಯಕರಿಗೆ ನೀಡಿದ್ದ ನೋಟಿಸ್, ಅಮಾನತು ಆದೇಶ ಕೂಡ ವಾಪಸ್ ಪಡೆಯಲಾಗಿದೆ. ಹೀಗಿದ್ದರೂ ಅತೃಪ್ತರ ಸಭೆ ನಡೆಸುತ್ತಿರುವುದು ದುರದೃಷ್ಟಕರ ಎಂದರು.
ಪಕ್ಷವಿರೋಧಿ ಚಟುವಟಿಕೆ ಹಾಗೂ ಅಶಿಸ್ತನ್ನು ನಾವು ಸಹಿಸುವುದಿಲ್ಲ. ಅತೃಪ್ತ ನಾಯಕರ ಗುಂಪಿನಲ್ಲಿ ಕೆ.ಎಸ್.ಈಶ್ವರಪ್ಪ ಸಕ್ರಿಯರಾಗಿದ್ದಾರೆ. ಪಕ್ಷದ ಮುಖಾಂತರ ಬ್ರಿಗೇಡ್ ಕಟ್ಟುವುದಕ್ಕೆ ರಾಷ್ಟ್ರೀಯ ಅಧ್ಯಕ್ಷರು ಈಶ್ವರಪ್ಪನವರಿಗೆ ಸೂಚನೆ ನೀಡಿದ್ದರು. ಆದರೆ ಪಕ್ಷದ ಮುಖಾಂತರ ಬ್ರಿಗೇಡ್ ಕಾರ್ಯ ಚಟುವಟಿಕೆ ಮಾಡುತ್ತಿಲ್ಲ ಎಂದು ದೂರಿದರು.
ಯಾವುದೇ ಕಾರಣಕ್ಕೂ ಅತೃಪ್ತರ ಸಭೆ ನಡೆಯಬಾರದು. ಕೆ.ಎಸ್.ಈಶ್ವರಪ್ಪ ನಾಳಿನ ಸಭೆಗೆ ಹೋಗಬಾರದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಸಮಸ್ಯೆಯನ್ನು ಬಗೆಹರಿಸಬೇಕು. ಈ ಬಗ್ಗೆ ಈಶ್ಚರಪ್ಪನವರಿಗೆ ಮನವಿ ಮಾಡುತ್ತಿದ್ದೇವೆ ಹಾಗೂ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.