×
Ad

ಪ್ರಕೃತಿ ವಿಕೋಪ ಪರಿಹಾರ ನೀಡುವಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-04-26 18:06 IST

ಮೈಸೂರು, ಎ.26: ಪ್ರಕೃತಿ ವಿಕೋಪ ಪರಿಹಾರ ನೀಡುವಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ನೀತಿ ಆಯೋಗದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪ ಪರಿಹಾರ ನೀಡುವ ಕುರಿತು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪ ಮಾಡಲೇ ಇಲ್ಲ ಎಂದರು.

14ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದೇವೆ ಎಂದು ಪದೇ ಪದೇ ಕೇಂದ್ರದವರು ಹೇಳುತ್ತಾರೆ. ಅದರಲ್ಲೆ ಕೊರತೆ ಸರಿದೂಗಿಸಿಕೊಳ್ಳಿ ಎನ್ನುತ್ತಾರೆ. ಹೆಚ್ಚು ಕೊಟ್ಟಿರುವುದೇನೋ ನಿಜ. ಆದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನಿಗದಿ ಮಾಡಿದ್ದ ಅನುದಾನದಲ್ಲಿ ಭಾರೀ ಕಡಿತವಾಗಿದೆ. ಶೇ.100ರಷ್ಟು ಇದ್ದ ಅನುದಾನವನ್ನು ಶೇ.80, ಶೇ.20ಕ್ಕೆ ಇಳಿಸಲಾಗಿದೆ. ಇದರಿಂದಾಗಿ 14ನೆ ಹಣಕಾಸು ಆಯೋಗದಲ್ಲಿ ಬಂದಿದ್ದಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಅವರು ಹೇಳಿದರು.

ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶ. ನಮಗಿಂತ ಬೇರೆ ರಾಜ್ಯಗಳಿಗೆ ಹೆಚ್ಚು ಬರ ಪರಿಹಾರದ ಹಣ ಹೋಗಿದೆ. ಗುಜರಾತ್‌ಗೆ 4 ಸಾವಿರಕ್ಕೂ ಹೆಚ್ಚು ಕೋಟಿ, ಮಹಾರಾಷ್ಟ್ರಕ್ಕೆ 7 ಸಾವಿರ ಕೋಟಿ ರೂ, ಮಧ್ಯಪ್ರದೇಶಕ್ಕೆ 4 ಸಾವಿರ ಕೋಟಿ ರೂ.ಸಿಕ್ಕಿದೆ. ನಮಗೆ ಮಂಜೂರಾಗಿರುವುದು 1,375 ಕೋಟಿ ರೂ.ಮಾತ್ರ ಎಂದು ಸಿದ್ದರಾಮಯ್ಯ ತಿಳಿಸಿದರು.

ನಮಗಿಂತ ಸಣ್ಣ ರಾಜ್ಯಗಳಿಗೂ ಹೆಚ್ಚು ಅನುದಾನ ಸಿಕ್ಕಿದ್ದು ಈ ಬಗ್ಗೆ ಪ್ರಧಾನಿಯವರ ಗಮನ ಸೆಳೆಯಲಾಯಿತು. ಬರಗಾಲದ ವಿಚಾರದಲ್ಲಿ ನಾವು 4,702 ಕೋಟಿ ರೂ.ಗಳ ಪರಿಹಾರಕ್ಕೆ ಮನವಿ ಮಾಡಿದ್ದೆವು. ಅದೂ ಎನ್‌ಡಿಆರ್‌ಎಫ್ ನಿಯಮ ಪ್ರಕಾರ. ಆದರೆ ಮಂಜೂರಾಗಿದ್ದು, 1,685 ಕೋಟಿ ರೂ.ಮಾತ್ರ. ಹಿಂಗಾರು ಹಂಗಾಮಿಗೆ 3,310 ಕೋಟಿ ರೂ. ಕೇಳಿದ್ದೇವೆ. ಅದನ್ನಾದರೂ ಕೊಡಿ ಎಂದು ಸಭೆಯಲ್ಲಿ ಮನವಿ ಮಾಡಿದೆ. ಯಾವುದಕ್ಕೂ ಉತ್ತರ ಬರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಿಎಸ್‌ಟಿ ಜುಲೈನಿಂದ ಜಾರಿಗೆ ಬರಲಿದೆ. ಅದಕ್ಕೆ ನಮ್ಮ ವಿರೋಧ ಇಲ್ಲ. ಯುಪಿಎ ಸರಕಾರ ಜಿಎಸ್‌ಟಿ ಜಾರಿಗೆ ಮುಂದಾಗಿತ್ತು. ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದರು. ಜಿಎಸ್‌ಟಿ ಜಾರಿಯಿಂದಾಗುವ ನಷ್ಟಕ್ಕೆ ಪರಿಹಾರ ಕೊಡುವ ಬಗ್ಗೆ ಕೇಂದ್ರದ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಆ ಕುರಿತು ಗಮನ ಹರಿಸುವಂತೆ ಮನವಿ ಮಾಡಿರುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News