​ಆಟೊ ಚಾಲಕನ ಹತ್ಯೆ ಪ್ರಕರಣ: ಮೂವರ ಬಂಧನ

Update: 2017-04-26 12:58 GMT

ಬೆಂಗಳೂರು, ಎ.26: ಆಟೊದಲ್ಲಿ ಮಲಗಿದ್ದ ಚಾಲಕನನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ಇಲ್ಲಿನ ಕೆ.ಆರ್.ಪುರ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ನಗರದ ಕೆ.ಆರ್.ಪುರಂನ ದೇವಸಂದ್ರದ ನಿವಾಸಿಗಳಾದ ಶ್ರೀನಿವಾಸ (19), ಹರೀಶ್ (19) ಮತ್ತು ರುದ್ರೇಶ್ ಯಾನೆ ಬ್ಯಾಟರಿ (21) ಬಂಧಿತ ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ಆರೋಪಿ ಶ್ರೀನಿವಾಸನ ತಾಯಿ ಜತೆ ಆಟೊ ಚಾಲಕ ರಮೇಶ್ ಅನುಚಿತವಾಗಿ ವರ್ತಿಸುತ್ತಿದ್ದನಲ್ಲದೆ, ಆರೋಪಿಗಳು ಹಾಗೂ ಕೊಲೆಯಾದ ರಮೇಶ್ ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿತ್ತು. ಇದೇ ದ್ವೇಷದಲ್ಲಿ ಶ್ರೀನಿವಾಸ, ಹರೀಶ್, ರುದ್ರೇಶ್ ಹಾಗೂ ಇನ್ನಿಬ್ಬರು ಸೇರಿ ಕೆ.ಆರ್.ಪುರಕ್ಕೆ ಬಂದಿದ್ದ ರಮೇಶ್‌ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ರಮೇಶ್‌ನ ಚಲನವಲನ ತಿಳಿಯಲೆಂದೇ ಆರೋಪಿಗಳು ಹರೀಶ್‌ನನ್ನು ಆತನ ಜತೆಗೆ ಬಿಟ್ಟಿದ್ದರೆಂದು ಗೊತ್ತಾಗಿದೆ

ಪ್ರಕರಣದ ಹಿನ್ನೆಲೆ: ಮಾಗಡಿ ರಸ್ತೆಯ ನಿವಾಸಿ ಆಟೊ ಚಾಲಕ ರಮೇಶ್ ಕೆ.ಆರ್.ಪುರದಲ್ಲಿದ್ದ ತಾಯಿ ಮನೆಗೆ ಬಂದಿದ್ದ. ಅಲ್ಲಿಂದ ರಾತ್ರಿ ವಾಪಸ್ ತನ್ನ ಮನೆಗೆ ತೆರಳುವಾಗ ಐಟಿಐ ಗೇಟ್ ಬಳಿ ಆಟೊದಲ್ಲೇ ಮಲಗಿದ್ದಾನೆ. ಹೊಯ್ಸಳ ಪೊಲೀಸರು ಕಂಡು ಮನೆಗೆ ತೆರಳುವಂತೆ ತಿಳಿಸಿದ್ದರು.
ಆದರೆ, ಆತ ಅಲ್ಲೇ ಮಲಗಿದ್ದಾನೆ. ಮತ್ತೆ ಬೆಳಗಿನ ಜಾವದ ವೇಳೆ ಪೊಲೀಸರು ಅಲ್ಲಿಗೆ ಬಂದಾಗ ರಮೇಶ್‌ನನ್ನು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News