×
Ad

76 ಲಕ್ಷ ರೂ. ವಂಚನೆ: ಬಾಂಬ್ ನಾಗನ ಪುತ್ರರು ಸೇರಿ ಆರು ಜನರ ವಿರುದ್ಧ ಎಫ್‌ಐಆರ್

Update: 2017-04-26 20:50 IST

ಬೆಂಗಳೂರು, ಎ.26: ಹಳೆಯ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪ ಕೇಳಿಬಂದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ರೌಡಿಶೀಟರ್ ನಾಗರಾಜ್ ಯಾನೆ ಬಾಂಬ್ ನಾಗನ ಮಕ್ಕಳಾದ ಗಾಂಧಿ, ಶಾಸ್ತ್ರಿ, ಸೆಲ್ವಂ ಸೇರಿ ಆರು ಜನರ ವಿರುದ್ಧ ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತಿಸಿ ಕೊಡುವುದಾಗಿ 76 ಲಕ್ಷ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಯಶವಂತಪುರದ ಸೈಯದ್ ಎಂಬವರು ದೂರು ನೀಡಿದ್ದು, ದೂರಿನನ್ವಯ ನಾಗರಾಜನ ಮಕ್ಕಳಾದ ಗಾಂಧಿ, ಶಾಸ್ತ್ರಿ, ಸೆಲ್ವಂ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಯದ್ ಯಶವಂತಪುರದಲ್ಲಿ ಫ್ಲೈವುಡ್ ಅಂಗಡಿ ಹೊಂದಿದ್ದು, ನೋಟು ರದ್ದಾದ ಬಳಿಕ ತಮ್ಮ ಬಳಿಯಿದ್ದ 500, 1000 ಮುಖ ಬೆಲೆಯ 76 ಲಕ್ಷ ರೂ. ಹಣವನ್ನು ಬದಲಾಯಿಸಲು ಮಧ್ಯವರ್ತಿಗಳನ್ನು ಸಂಪರ್ಕಿಸಿದ್ದರು. ಮಧ್ಯವರ್ತಿಗಳ ಮೂಲಕ ನಾಗರಾಜ್ ಪರಿಚಯವಾಗಿತ್ತು. ಫೆ.25ರಂದು ಸೈಯದ್ ಅವರು ಸ್ನೇಹಿತ ನದೀಮ್ ಜತೆ ಶ್ರೀರಾಂಪುರದಲ್ಲಿರುವ ನಾಗನ ಕಚೇರಿ ಸ್ನೇಹ ಸೇವಾ ಸಮಿತಿ ಟ್ರಸ್ಟ್‌ಗೆ ತೆರಳಿದ್ದರು.

ನದೀಮ್ ಹೊರಗಡೆ ನಿಂತಿದ್ದು, ಸೈಯದ್ ಒಬ್ಬರೆ ಒಳಗಡೆ ಹೋಗಿದ್ದರು. ನಾಗನ ಮತ್ತು ಆತನ ಸಹಚರರು ಸೈಯದ್ ಗೆ ಹಲ್ಲೆ ನಡೆಸಿ ಪಿಸ್ತೂಲ್ ತೋರಿಸಿ ಬೆದರಿಸಿ 76 ಲಕ್ಷ ಹಣ ಕಸಿದು ಕಳುಹಿಸಿದ್ದರು. ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ನಾಗರಾಜ್ ಬೆದರಿಕೆ ಹಾಕಿದ್ದಾನೆ ಎಂದು ಸೈಯದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಮೇರೆಗೆ ನಾಗರಾಜ್ ಸೇರಿ ಆರು ಜನರ ವಿರುದ್ಧ ಐಪಿಸಿ ಸೆಕ್ಷನ್ 395 (ಡಕಾಯತಿ) ಹಾಗೂ ಆರ್‌ಎಂಸಿ ಅಡಿಯಲ್ಲಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News